More

    ಬಿತ್ತನೆಗೆ ಪೂರ್ವ ಮುಂಗಾರು ಮಳೆ ಕೊರತೆ ; ಆದರೂ ಚುರುಕುಗೊಂಡ ಕೃಷಿ ಚಟುವಟಿಕೆ

    ರಾಮನಗರ : ಜಿಲ್ಲೆಯ ಪೂರ್ವ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಬೀಳದೇ ಇದ್ದರೂ, ಬಿದ್ದ ಅಷ್ಟಿಷ್ಟು ಮಳೆಯಲ್ಲಿಯೇ ಕೃಷಿ ಚಟುವಟಿಕೆಯನ್ನು ರೈತರು ಚುರುಕುಗೊಳಿಸಿದ್ದಾರೆ.

    ಮಳೆಯಾಶ್ರಿತ ಕೃಷಿ ಪ್ರಧಾನ ಜಿಲ್ಲೆ ಆಗಿರುವ ರಾಮನಗರ ಜಿಲ್ಲೆಯಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದು, ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಆದರೆ, ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾದರೆ ಎಳ್ಳು, ಅಲಸಂದೆ, ತೊಗರಿ ಸೇರಿ ಇತರ ಬೆಳೆಗಳನ್ನು ಹೆಚ್ಚಾಗಿ ಬಿತ್ತಲಾಗುತ್ತದೆ. ಇದರಂತೆ ಈ ಬಾರಿಯೂ ಕಳೆದ ನಾಲ್ಕೈದು ದಿನಗಳಿಂದ ಬಿತ್ತನೆ ಚುರುಕುಗೊಂಡಿದೆ.

    ಎಳ್ಳು, ತೊಗರಿ, ಹೆಸರು, ಅಲಸಂದೆ ಸೇರಿ ವಿವಿಧ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಿದ್ದಾರೆ. ಹಸಿರೆಲೆ ಗೊಬ್ಬರ ಮಾಡಬೇಕೆನ್ನುವ ರೈತರು ಹೊಲಗಳಿಗೆ, ಅಲಸಂದೆ, ಸೆಣಬು, ಹೆಸರು ಬಿತ್ತುತ್ತಿದ್ದಾರೆ. ಮಾಗಡಿ ತಾಲೂಕಿನಲ್ಲಿ ತೊಗರಿ ಹಾಗೂ ಕನಕಪುರ ತಾಲೂಕಿನಲ್ಲಿ ಎಳ್ಳು ಬಿತ್ತನೆ ನಡೆಯುತ್ತಿದೆ. ಈಗಾಗಲೆ ಸುಮಾರು 700 ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿದೆ. ಜೂನ್‌ನಿಂದ ರಾಗಿ ಬಿತ್ತನೆ ನಡೆಯಲಿದೆ. ಕಷಿ ಇಲಾಖೆಯೂ ರೈತರಿಗೆ ಬಿತ್ತನೆ ಬೀಜ, ಮತ್ತು ರಾಸಾಯನಿಕ ಗೊಬ್ಬರ ಒದಗಿಸಲು ಸಿದ್ಧತೆ ಮಾಡಿಕೊಂಡಿದೆ.

    95 ಸಾವಿರ ಹೆಕ್ಟೇರ್ ಗುರಿ: ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಒಟ್ಟು 95 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಅದರಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದು, 65 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ.

    ಮಳೆ ಕೊರತೆ: ಜಿಲ್ಲೆಯಲ್ಲಿ ಕಳೆದ ವಾರದಿಂದ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದಿದ್ದರೂ ಕೃಷಿ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಿದೆ. ಕರೊನಾ ಆತಂಕದಿಂದ ಹಲವರು ಬೆಂಗಳೂರು ತೊರೆದು ಊರುಗಳಿಗೆ ಮರಳಿದ್ದು ಈ ಬಾರಿ ಮಳೆ ಯುವ ರೈತ ಸಮುದಾಯಕ್ಕೆ ಹೆಚ್ಚಿನ ಸಾಥ್ ಏನು ನೀಡಲಿಲ್ಲ. ಜ.1ರಿಂದ ಆರಂಭಗೊಂಡು ಮೇ 11ರವರೆಗೆ 105ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ. 138ಮಿಮೀ ವಾಸ್ತವ ಮಳೆಯಾಗುವ ಮೂಲಕ ವಾಡಿಕೆಗಿಂತ ಶೇ.31 ಹೆಚ್ಚು ಮಳೆಯಾಗಿದೆ. ಆದರೆ, ಕಳೆದ 7 ದಿನಗಳಿಂದ ಜಿಲ್ಲೆಯಲ್ಲಿ 7.5 ಮಿಮೀ ಮಳೆಯಾಗಿದ್ದು, ವಾಡಿಕೆ ಮಳೆ 19.5 ಮಿಮೀ ಆಗಬೇಕಿತ್ತು. ಇದರಿಂದಾಗಿ ಶೇ.61 ಮಳೆ ಕೊರತೆ ಎದುರಿಸುವಂತೆ ಆಗಿದೆ. ಇನ್ನು ಮೇ 1ರಿಂದ ಮೇ 11ವರೆಗೂ ಜಿಲ್ಲೆಯಲ್ಲಿ ವಾಡಿಕೆಯಂತೆ 36.4 ಮಿಮೀ ಮಳೆ ಆಗಬೇಕಿತ್ತು. ಆದರೆ ಆಗಿರುವುದು ಮಾತ್ರ 19.6 ಮಿಮೀ ಇದರೊಂದಿಗೆ ಶೇ.46 ಮಳೆ ಕೊರೆತೆಯನ್ನು ಜಿಲ್ಲೆ ಎದುರಿಸಿದೆ.

    ರೈತರಿಂದಲೂ ಸಿದ್ಧತೆ : ಜಿಲ್ಲೆಯಲ್ಲಿ ಮಳೆ ಕೊರತೆ ಎದುರಾಗಿದ್ದರೂ ರೈತರು ಭೂಮಿ ಹಸನು ಮಾಡಿಕೊಂಡಿದ್ದಾರೆ. ಅಲ್ಲದೆ, ಕರೊನಾ ಹಿನ್ನೆಲೆಯಲ್ಲಿ ಸಾಕಷ್ಟು ಯುವಕರು ಬೆಂಗಳೂರು ಬಿಟ್ಟು ಹಳ್ಳಿಗಳಿಗೆ ಮರಳಿರುವುದು ಕೃಷಿ ಕಾರ್ಮಿಕರ ಕೊರತೆಯನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿದೆ. ಮತ್ತೊಂದೆಡೆ ಕೃಷಿ ಇಲಾಖೆ ಸಹ ರೈತರಿಗೆ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ವಿತರಣೆ ಮಾಡಲು ಕ್ರಮ ಕೈಗೊಂಡಿದೆ.

    ಸಮಯ ಬದಲು : ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ರೈತರಿಗೆ ತೊಂದರೆ ಆಗುವುದನ್ನು ತಪ್ಪಿಸಲು ರೈತ ಸಂಪರ್ಕ ಕೇಂದ್ರಗಳ ಕೆಲಸದ ಸಮಯವನ್ನು ಸರ್ಕಾರ ಬದಲಾಯಿಸಿದೆ. ಇದರೊಂದಿಗೆ ಬೆಳಗ್ಗೆ 6-10 ರವರೆಗೆ ರೈತರಿಗೆ ಆರ್‌ಎಸ್‌ಕೆಗಳಲ್ಲಿ ಅಧಿಕಾರಿಗಳು ಲಭ್ಯರಿದ್ದು, ರೈತರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.

    ಜಿಲ್ಲೆಯಲ್ಲಿ ಜ.1ರಿಂದ ಮೇ 11ರವರೆಗೆ ವಾಡಿಕೆಗಿಂತ ಶೇ.31 ಮಳೆ ಹೆಚ್ಚಾಗಿದೆ. ಪೂರ್ವ ಮುಂಗಾರು ಮತ್ತು ಮುಂಗಾರಿಗೆ ಬೇಕಾದ ಸಿದ್ಧತೆಗಳನ್ನು ಕೃಷಿ ಇಲಾಖೆ ಮಾಡಿಕೊಂಡಿದ್ದು, ರೈತರು ಆರ್‌ಎಸ್‌ಕೆಗಳ ಮೂಲಕ ತಮಗೆ ಬೇಕಾದ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
    ಸೋಮಸುಂದರ್
    ಜಂಟಿ ನಿರ್ದೇಶಕ, ಕೃಷಿ ಇಲಾಖೆ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts