More

    ರಾಮನಗರ ಜಿಲ್ಲೆಯಲ್ಲಿ ಸದ್ದಲ್ಲದೆ ನಡೆದಿದೆ ಗಾಂಜಾ ವಿರುದ್ಧ ಕಾರ್ಯಾಚರಣೆ

    ರಾಮನಗರ: ಮಾದಕ ವಸ್ತುಗಳ ನಶೆಯಿಂದಾಗಿ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಸಂಚಲನ ಉಂಟಾಗಿರುವ ನಡುವೆಯೇ ಜಿಲ್ಲೆಯಲ್ಲಿಯೂ ಸದ್ದಿಲ್ಲದೆ ಗಾಂಜಾ ವಿರುದ್ಧ ಕಾರ್ಯಾಚರಣೆ ನಡೆದಿದೆ.

    ಕಳೆದ 10 ದಿನಗಳಲ್ಲಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿ ಯಲ್ಲಿ ಸುಮಾರು 100 ಕೆ.ಜಿ.ಯಷ್ಟು ಗಾಂಜಾ ವಶಪಡಿಸಿಕೊಳ್ಳ ಲಾಗಿದ್ದು, ಇದರಲ್ಲಿ ಒಂದೇ ದಿನ 80 ಕೆ.ಜಿ. ವಶಕ್ಕೆ ಪಡೆದಿರುವುದು ನಶೆಯ ಘಾಟಿನ ಪ್ರಮಾಣವನ್ನು ಸಾಬೀತು ಮಾಡಿದೆ.

    ತಾವರೆಕೆರೆ ಮತ್ತು ರಾಮನಗರ ಟೌನ್ ಪೊಲೀಸರು ಬುಧವಾರ ಪ್ರತ್ಯೇಕ ಕಾರ್ಯಾಚರಣೆ ನಡೆಸಿ 9 ಮಂದಿಯನ್ನು ಬಂಧಿಸಿ 81 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಮಾಗಡಿ ತಾಲೂಕಿನ ಬಂಡರಗುಪ್ಪೆ ಬಳಿ ಪರಿಶೀಲನೆ ನಡೆಸಿದಾಗ ಮಾರಾಟ ಮಾಡಲು ಇನ್ನೊವಾ ಕಾರಿನಲ್ಲಿ ಸಾಗಿಸುತ್ತಿದ್ದ 60 ಕೆ.ಜಿ. ಗಾಂಜಾ ಪತ್ತೆಯಾಗಿದೆ. ಮತ್ತೊಂದೆಡೆ ರಾಮನಗರ ಪುರ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ 21 ಕೆ.ಜಿ. ಗಾಂಜಾ ಸಿಕ್ಕಿದೆ.

    ರೈತರ ಜಮೀನಿನಲ್ಲಿ ಗಾಂಜಾ: ತಿಳಿದೋ ಅಥವಾ ತಿಳಿಯದೆಯೋ, ಇಲ್ಲ ಹಣದಾಸೆಗೋ ರೈತರ ಜಮೀನುಗಳಲ್ಲೂ ಗಾಂಜಾ ಬೆಳೆಯುತ್ತಿರುವುದು ಬೆಳಕಿಗೆ ಬಂದಿದೆ. ಜಿಲ್ಲೆಯ ಹಲವಾರು ಕಡೆಗಳಲ್ಲಿ ಗಾಂಜಾ ಬೆಳೆಯಲಾಗುತ್ತಿದ್ದು ಪೊಲೀಸರು ದಾಳಿ ನಡೆಸುವ ಮೂಲಕ ಇವರ ವಿರುದ್ಧ ಪ್ರಕರಣ ದಾಖಲು ಮಾಡುತ್ತಿದ್ದಾರೆ. ಕಳೆದ 10 ದಿನಗಳಲ್ಲಿ 4 ಪ್ರಕರಣಗಳಲ್ಲಿ ರೈತರು ಬೆಳೆದಿದ್ದ 16 ಕೆ.ಜಿ. ಗಾಂಜಾ ಸೊಪ್ಪನ್ನು ವಶಕ್ಕೆ ಪಡೆಯಲಾಗಿದೆ. ಕೆಲವೆಡೆ ಅರಿವಿದ್ದೇ ರೈತರು ಗಾಂಜಾ ಬೆಳೆಯುತ್ತಿರುವುದು ಪತ್ತೆಯಾಗಿದ್ದು, ಇದು ಆತಂಕ ಸೃಷ್ಟಿಮಾಡಿದೆ.

    ಪೊಲೀಸರಿಗೆ ಮಾಹಿತಿ ನೀಡಿ: ಮಾದಕ ವಸ್ತುಗಳ ಬಳಕೆ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದು, ಯುವ ಸಮುದಾಯವನ್ನು ವ್ಯಸನದಿಂದ ಹೊರತರುವ ಸಲುವಾಗಿ ಸಾರ್ವಜನಿಕರು ಪೊಲೀಸರೊಂದಿಗೆ ಕೈ ಜೋಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸುತ್ತ ಮುತ್ತಲ ಪ್ರದೇಶದಲ್ಲಿ ಮಾದಕ ವಸ್ತುಗಳ ಮಾರಾಟ, ಗಾಂಜಾ ಬೆಳೆದಿರುವುದು ಸೇರಿ ಇತರ ಮಾಹಿತಿಗಳು ತಿಳಿದರೆ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ. ಇದರಿಂದ ಕಾರ್ಯಾಚರಣೆಗೆ ಅನುಕೂಲವಾಗಲಿದೆ.

    ಗಾಂಜಾ ನಶೆಗೆ ಆಕರ್ಷಿತರಾಗುತ್ತಿರುವುದು ಯುವ ಸಮುದಾಯ. ಇದಕ್ಕೆ ಪಾಲಕರು ಮಕ್ಕಳ ಮೇಲೆ ಹೆಚ್ಚಿನ ನಿಗಾ ಇರಿಸದಿರುವುದು ಪ್ರಮುಖ ಕಾರಣ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳ ಚಲನವಲನ ಮತ್ತು ಅವರು ಯಾರೊಂದಿಗೆ ಸ್ನೇಹ ಬೆಳೆಸಿದ್ದಾರೆ ಎನ್ನುವ ಬಗ್ಗೆ ಗಮನ ಹರಿಸಬೇಕಾದ ಅಗತ್ಯವಿದೆ. ಇಲ್ಲವಾದರೆ ಮಕ್ಕಳು ಕುಟುಂಬಕ್ಕೆ ಮಾತ್ರವಲ್ಲದೆ, ಸಮಾಜಕ್ಕೂ ಹೊರೆಯಾಗುವುದು ನಿಶ್ಚಿತ.

    ಗ್ರಾಮೀಣ ಭಾಗಕ್ಕೂ ಹಬ್ಬಿದೆ ವ್ಯಸನ: ಗಾಂಜಾ ನಗರ ಪ್ರದೇಶಕ್ಕೆ ಸೀಮಿತವಾಗಿಲ್ಲ, ಇದೀಗ ಗ್ರಾಮೀಣ ಭಾಗಕ್ಕೂ ವ್ಯಾಪಿಸುತ್ತಿದೆ. ವಸತಿರಹಿತ ಪ್ರದೇಶ, ಶಾಲಾ ಮೈದಾನಗಳು ವ್ಯಸನಿಗಳು ಮತ್ತು ಪೂರೈಕೆದಾರರ ನೆಚ್ಚಿನ ತಾಣಗಳಾಗಿ ಬದಲಾಗಿವೆ. ನಗರ ಪ್ರದೇಶದಿಂದಲೇ ಗ್ರಾಮೀಣ ಯುವಕರಿಗೆ ಗಾಂಜಾ ಪೂರೈಕೆ ಆಗುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ನಿಗಾ ಇಡಬೇಕಾಗಿದೆ.

    ಗಾಂಜಾ ವಿರುದ್ಧ ಕಾರ್ಯಾಚರಣೆ ಜಿಲ್ಲೆಗೆ ಸೀಮಿತವಾಗಿಲ್ಲ. ಜಿಲ್ಲೆಗೆ ಸಂಪರ್ಕ ಹೊಂದಿರುವ ಹೊರ ಜಿಲ್ಲೆಗಳಲ್ಲೂ ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ದಾಳಿ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಗಾಂಜಾ ನಶೆ ಇಳಿಸಲು ಪೊಲೀಸ್ ಇಲಾಖೆ ಸಿದ್ಧವಾಗಿದೆ.
    ಎಸ್.ಗಿರೀಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts