More

    ರಾಮನಗರ ಜಿಲ್ಲಾ ಕಾರಾಗೃಹದಲ್ಲಿದ್ದ 177 ಕೈದಿಗಳ ಸ್ಥಳಾಂತರ

    ರಾಮನಗರ: ಬೆಂಗಳೂರಿನ ಪಾದರಾಯನಪುರದಲ್ಲಿ ಗಲಾಟೆ ಮಾಡಿದ್ದ ಆರೋಪಿಗಳನ್ನು ಸೆರೆಯಲ್ಲಿಡುವುದಕ್ಕಾಗಿ ರಾಮನಗರ ಜೈಲಿನ 177 ಕೈದಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಮಂಗಳವಾರ ಸ್ಥಳಾಂತರಿಸಲಾಯಿತು.

    ಡಿವೈಎಸ್‌ಪಿ ಪುರುಷೋತ್ತಮ್, ಆರಕ್ಷಕ ವೃತ್ತ ನಿರೀಕ್ಷಕ ನರಸಿಂಹಮೂರ್ತಿ, ವಿವಿಧ ಠಾಣೆಗಳ ಸಬ್ ಇನ್ಸ್‌ಪೆಕ್ಟರ್‌ಗಳು ಸೇರಿ 95ಕ್ಕೂ ಅಧಿಕ ಪೊಲೀಸರ ಬಿಗಿ ಭದ್ರತೆಯಲ್ಲಿ ಜೀರೋ ಟ್ರಾಫಿಕ್ ಮೂಲಕ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೈದಿಗಳನ್ನು ಸ್ಥಳಾಂತರ ಮಾಡಲಾಯಿತು. ಬಳಿಕ ಪಾದರಾಯನಪುರ ಗಲಾಟೆಯ 54 ಆರೋಪಿಗಳನ್ನು ರಾಮನಗರ ಜೈಲಿಗೆ ಕರೆತರಲಾಯಿತು.

    ಪೊಲೀಸ್ ಇಲಾಖೆ, ಪಿಟಿಎಸ್, ಬಿಎಂಟಿಸಿ ಸೇರಿ ಬರೋಬ್ಬರಿ 14 ಬಸ್‌ಗಳಿಂದ ಕೈದಿಗಳ ಸ್ಥಳಾಂತರ ಕಾರ್ಯ ನಡೆಯಿತು. ಇದರಲ್ಲಿ 10 ಬಿಎಂಟಿಸಿ, 4 ಕೆಎಸ್‌ಆರ್‌ಪಿ ಬಸ್‌ಗಳನ್ನು ಬಳಸಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವ ಹಿನ್ನೆಲೆಯಲ್ಲಿ ಒಂದೊಂದು ಬಸ್‌ನಲ್ಲಿ 18 ರಿಂದ 20 ಕೈದಿಗಳನ್ನು ಕರೆದೊಯ್ಯಲಾಯಿತು.

    ಜೈಲರ್ ವಿರುದ್ಧ ಎಸ್ಪಿ ಗರಂ: ಕೈದಿಗಳ ಸ್ಥಳಾಂತರದ ವೇಳೆ ಜೈಲು ಸಿಬ್ಬಂದಿ ವಿರುದ್ಧ ಎಸ್ಪಿ ಅನೂಪ್ ಎ.ಶೆಟ್ಟಿ ಗರಂ ಆಗಿದ್ದು ಕಂಡುಬಂತು. ‘ಕೈದಿಗಳಿಗೆ ಬೇಡಿ ಹಾಕಿಲ್ಲ, ಇದೇನಾ ನೀವು ಡ್ಯೂಟಿ ಮಾಡುತ್ತಿರುವುದು? ನಾವೇನು ನಾಟಕ ಆಡೋಕೆ ಬಂದಿದ್ದೀವಾ? ಯಾರಾದರೂ ಮಿಸ್ ಆದರೆ ಏನು ಕಥೆ? ಬಿಎಂಟಿಸಿ ಬಸ್‌ನಲ್ಲಿ ಹತ್ತಿಸುವಾಗ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ತಾನೇ’ ಎಂದು ಜೈಲರ್ ವಿರುದ್ಧ ಕೂಗಾಡಿದರು. ನಂತರ ಬಸ್‌ಗಳನ್ನು ಜೈಲಿನ ಮುಂಭಾಗಕ್ಕೇ ಕರೆಸಿ, ಎಲ್ಲ ಕೈದಿಗಳಿಗೆ ಕೋಳ ಹಾಕಲಾಯಿತು.

    ಜಿಲ್ಲೆಯಲ್ಲಿ ಆತಂಕ: ರಾಮನಗರದಲ್ಲಿ ಇಲ್ಲಿಯವರೆಗೆ ಕರೊನಾ ಪ್ರಕರಣಗಳು ಕಂಡುಬಂದಿಲ್ಲ. ಇದೀಗ ಪಾದರಾಯನಪುರ ಗಲಾಟೆ ಆರೋಪಿಗಳನ್ನು ರಾಮನಗರ ಜೈಲಿಗೆ ಕರೆತಂದ ಕಾರಣ ಇವರಿಂದ ಕರೊನಾ ಹರಡಿದರೆ ಏನು ಗತಿ ಎಂಬ ಚಿಂತೆ ರಾಮನಗರ ಜಿಲ್ಲೆಯ ಜನರಲ್ಲಿ ಕಾಡುತ್ತಿದೆ.

    ಕೈದಿಗಳ ಆರೋಗ್ಯ ತಪಾಸಣೆ: ಪಾದರಾಯನಪುರ ಗಲಭೆಯ ಸಂಬಂಧ ಬಂಧನಕ್ಕೊಳಗಾಗಿರುವ ಒಟ್ಟು 54 ಆರೋಪಿಗಳನ್ನು ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ರಾಮನಗರ ಬಂದೀಖಾನೆಗೆ ಪೋಲೀಸರ ಭದ್ರತೆಯಲ್ಲಿ ಕರೆತರಲಾಯಿತು. ಇದಕ್ಕೂ ಮುನ್ನ ರಾಮನಗರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಪೋಲೀಸ್ ವರಿಷ್ಠಾಧಿಕಾರಿ ಅನೂಪ್ ಎ. ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಮತ್ತು ಏಳು ಜನ ವೈದ್ಯರ ತಂಡ ಬಂದೀಖಾನೆಯಲ್ಲಿ ಪರಿಶೀಲನೆ ನಡೆಸಿದರು. ವೈದ್ಯರ ತಂಡ ಪ್ರತಿ ಆರೋಪಿಯ ಆರೋಗ್ಯ ತಪಾಸಣೆ ನಡೆಸಿದ ನಂತರ ಅವರನ್ನು ಬಂದೀಖಾನೆಯೊಳಕ್ಕೆ ಪ್ರವೇಶ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts