More

    ಬಲಿಪಶುವಾದರೇ ಡಬ್ಲ್ಯುವಿ ರಾಮನ್? ವಿವಾದದಲ್ಲಿ ಮಹಿಳಾ ಕ್ರಿಕೆಟ್ ಆಯ್ಕೆ ಸಮಿತಿ

    ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಡಬ್ಲ್ಯುವಿ ರಾಮನ್ ಅವರನ್ನು ಕೈಬಿಟ್ಟು ರಮೇಶ್ ಪವಾರ್ ಅವರನ್ನು ಮತ್ತೆ ಕೋಚ್ ಆಗಿ ನೇಮಿಸಿದ ಬೆನ್ನಲ್ಲೇ ನೀತು ಡೇವಿಡ್ ಸಾರಥ್ಯದ ಮಹಿಳೆಯರ ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿ ವಿವಾದಕ್ಕೆ ಸಿಲುಕಿದೆ. ಆಯ್ಕೆ ಸಮಿತಿಯ ಕೆಲ ಎಡವಟ್ಟು ನಿರ್ಧಾರಗಳಿಗೆ ಡಬ್ಲ್ಯುವಿ ರಾಮನ್ ಅವರನ್ನು ಬಲಿಪಶು ಮಾಡಲಾಯಿತೇ ಎಂಬ ಪ್ರಶ್ನೆಗಳು ಎದ್ದಿವೆ. ಜತೆಗೆ ಕೋಚ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟ ಕ್ರಿಕೆಟ್ ಸಲಹಾ ಸಮಿತಿಯ (ಸಿಎಸಿ) ಮದನ್ ಲಾಲ್ ಮತ್ತು ಸುಲಕ್ಷಣಾ ನಾಯ್ಕ ಕೂಡ ಕೆಲ ಆರೋಪಗಳನ್ನು ಎದುರಿಸಿದ್ದಾರೆ.

    ರಾಮನ್ ಮಾರ್ಗದರ್ಶನದಲ್ಲಿ ಭಾರತ ತಂಡ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ಗೇರಿತ್ತು. ಆದರೆ ಈ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ, ಟಿ20 ಸರಣಿಯಲ್ಲಿ ಸೋಲು ಕಂಡ ಏಕಮಾತ್ರ ಕಾರಣದಿಂದಾಗಿ ಇದೀಗ ಅವರನ್ನು ಕೈಬಿಡಲಾಗಿದೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ವೈಫಲ್ಯಕ್ಕೆ ನೀತು ಡೇವಿಡ್ ಸಾರಥ್ಯದ ಆಯ್ಕೆ ಸಮಿತಿ ಮಾಡಿದ ಕೆಲ ಕೆಟ್ಟ ಆಯ್ಕೆಗಳೇ ಕಾರಣ ಎಂದು ದೂರಲಾಗುತ್ತಿದೆ.

    ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾದ ತಂಡದ ಬಗ್ಗೆ ರಾಮನ್‌ಗೆ ಸಮಾಧಾನ ಇರಲಿಲ್ಲ. ಏಕದಿನ ತಂಡದಿಂದ ಯುವ ಸ್ಫೋಟಕ ಬ್ಯಾಟುಗಾರ್ತಿ ಶೆಾಲಿ ವರ್ಮ ಮತ್ತು ಅನುಭವಿ ವೇಗಿ ಶಿಖಾ ಪಾಂಡೆ ಅವರನ್ನು ಕೈಬಿಟ್ಟ ಬಗ್ಗೆ ರಾಮನ್ ಆಕ್ಷೇಪ ಎತ್ತಿದ್ದರು ಎನ್ನಲಾಗಿದೆ. ಆದರೆ ಶಿಖಾ ಪಾಂಡೆ ಲಾಕ್‌ಡೌನ್ ವೇಳೆ ಫಿಟ್ನೆಸ್ ಕಾಯ್ದುಕೊಳ್ಳದೆ ದೇಹತೂಕ ಹೆಚ್ಚಿಸಿಕೊಂಡಿದ್ದರು ಮತ್ತು ಶೆಫಾಲಿ ಫೀಲ್ಡಿಂಗ್ ಕೆಟ್ಟದಾಗಿದೆ ಎಂದು ನೀತು ಡೇವಿಡ್ ಕಾರಣ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಶಿಖಾ ಫಿಟ್ನೆಸ್ ಪರೀಕ್ಷೆಯ ವರದಿ ಅವರಲ್ಲಿರಲಿಲ್ಲ. ಅಲ್ಲದೆ ಫೀಲ್ಡಿಂಗ್ ಕೆಟ್ಟದಾಗಿರುವ ಕಾರಣಕ್‌ಎಕ ಏಕದಿನ ತಂಡದಿಂದ ಹೊರಬಿದ್ದ ಶೆಫಾಲಿಗೆ ಟಿ20 ತಂಡದಲ್ಲಿ ಸ್ಥಾನ ನೀಡಿದ್ದು ಹೇಗೆ ಎಂಬ ಪ್ರಶ್ನೆಗೂ ಉತ್ತರವಿರಲಿಲ್ಲ ಎನ್ನಲಾಗಿದೆ.

    ಇನ್ನು ಕರ್ನಾಟಕದ ಯುವ ಆಟಗಾರ್ತಿಯರಾದ ಲೆಗ್ ಸ್ಪಿನ್ನರ್ ಸಿ. ಪ್ರತ್ಯುಷಾ ಮತ್ತು ಎಡಗೈ ವೇಗಿ ಮೋನಿಕಾ ಪಟೇಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಇನ್ನೂ ಪಕ್ವವಾಗಿರದೆ ಇದ್ದರೂ ಅವರನ್ನು ಆಯ್ಕೆ ಮಾಡಿದ್ದು ಕೂಡ ಆಯ್ಕೆ ಸಮಿತಿಯ ಎಡವಟ್ಟಾಗಿತ್ತು. ಪ್ರತ್ಯುಷಾ ಪಂದ್ಯವೊಂದರಲ್ಲಿ 8 ಓವರ್‌ಗೆ 60 ರನ್ ಬಿಟ್ಟುಕೊಟ್ಟಿದ್ದರೆ, ಶಿಖಾರನ್ನು ಕಡೆಗಣಿಸಿ ಮೋನಿಕಾರನ್ನು ಆಯ್ಕೆ ಮಾಡಿದ್ದು ನಗೆಪಾಟಲಿಗೆ ಈಡಾಗುವಂಥದ್ದು ಎಂದು ದೂರಲಾಗಿದೆ.

    ಪ್ರತ್ಯುಷಾ, ಮೋನಿಕಾ ಪ್ರತಿನಿಧಿಸುವ ಬೆಂಗಳೂರಿನ ಫಾಲ್ಕನ್ ಕ್ಲಬ್‌ಗೆ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸದಸ್ಯೆ ಶಾಂತಾ ರಂಗಸ್ವಾಮಿ ಪ್ರಮುಖ ಹುದ್ದೆ ಹೊಂದಿರುವುದು ಕೂಡ ಅವರ ಆಯ್ಕೆಯಲ್ಲಿ ಪರೋಕ್ಷ ಪ್ರಭಾವ ಬೀರಿರಬಹುದು ಎಂದು ದೂರಲಾಗಿದೆ.

    ಮದನ್ ಲಾಲ್ ವಯಸ್ಸಿನ ಪ್ರಶ್ನೆ
    ಮಾಜಿ ಕ್ರಿಕೆಟಿಗ ಮದನ್ ಲಾಲ್ ಕಳೆದ ಮಾರ್ಚ್ 20ರಂದು 70ನೇ ವರ್ಷಕ್ಕೆ ಕಾಲಿಟ್ಟಿದ್ದರು. ಲೋಧಾ ಸಮಿತಿಯ ಶಿಾರಸಿನ ಅನ್ವಯ 70 ವರ್ಷ ಮೇಲ್ಪಟ್ಟವರು ಬಿಸಿಸಿಐನಲ್ಲಿ ಯಾವುದೇ ಹುದ್ದೆ ಅಲಂಕರಿಸುವಂತಿಲ್ಲ. ಹೀಗಾಗಿ ಮದನ್ ಲಾಲ್ ಸಿಎಸಿ ಸಭೆಯಲ್ಲಿ ಹಾಜರಾಗಿದ್ದು ಕಾನೂನು ಬಾಹಿರವಲ್ಲವೇ? ಡಬ್ಲ್ಯುವಿ ರಾಮನ್‌ರನ್ನು ಕೋಚ್ ಹುದ್ದೆಯಿಂದ ಕೈಬಿಡುವ ಮದನ್ ಲಾಲ್ ನೇತೃತ್ವದ ಸಮಿತಿಯ ನಿರ್ಧಾರ ಮಾನ್ಯವಾಗುವುದೇ ಎಂಬ ಪ್ರಶ್ನೆಗಳು ಎದ್ದಿವೆ.

    ನೀತುಗೆ ಸುಲಕ್ಷಣಾ ರಕ್ಷಣೆ?
    ಆಯ್ಕೆ ಸಮಿತಿ ಮುಖ್ಯಸ್ಥೆ ನೀತು ಡೇವಿಡ್ ಅವರ ಎಡವಟ್ಟು ನಿರ್ಧಾರಗಳಿಗೆ ಮಾಜಿ ಸಹ-ಆಟಗಾರ್ತಿ ಹಾಗೂ ಸಿಎಸಿ ಸದಸ್ಯೆ ಸುಲಕ್ಷಣಾ ನಾಯ್ಕ ಅವರಿಂದ ರಕ್ಷಣೆ ಸಿಕ್ಕಿದೆ ಎಂದೂ ದೂರಲಾಗಿದೆ. ನೀತು ರಕ್ಷಿಸುವ ಸಲುವಾಗಿ ರಾಮನ್ ನಿರ್ಗಮನಕ್ಕೆ ಸುಲಕ್ಷಣಾ ಒಲವು ತೋರಿದ್ದರು ಮತ್ತು ಕೋಚ್ ಹುದ್ದೆಗೆ ರಮೇಶ್ ಪವಾರ್‌ರನ್ನು ಆರಿಸಬೇಕೆಂದು ಅಭ್ಯರ್ಥಿಗಳ ಸಂದರ್ಶನಕ್ಕೆ ಮೊದಲೇ ಮಾನಸಿಕವಾಗಿ ಫಿಕ್ಸ್ ಆಗಿದ್ದರು ಎಂದೂ ದೂರಲಾಗಿದೆ. ಹೀಗಾಗಿ ಅವರು ರಾಮನ್ ತಮ್ಮ ವಿವರಣೆಗಳನ್ನು ಸಲ್ಲಿಸಿದ ಬಳಿಕ, 2020ರ ಟಿ20 ವಿಶ್ವಕಪ್ ಫೈನಲ್‌ಗೇರಿದ ಭಾರತ ತಂಡವನ್ನು ರೂಪಿಸುವಲ್ಲಿ ರಮೇಶ್ ಪವಾರ್ ಪಾತ್ರ ಪ್ರಮುಖವಾದುದು ಎಂದೇ ವಾದಿಸಿದ್ದರು ಎನ್ನಲಾಗಿದೆ. ಮುಂಬೈ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸಂಜಯ್ ನಾಯ್ಕ ಅವರ ಕಿರಿಯ ಸಹೋದರಿಯಾಗಿರುವ ಮಾಜಿ ಆಟಗಾರ್ತಿ ಸುಲಕ್ಷಣಾ, ಮುಂಬೈನವರೇ ಆದ ಪವಾರ್ ಆಯ್ಕೆಗೆ ಎಲ್ಲ ರೀತಿಯ ಪ್ರಭಾವ ಬೀರಿದ್ದರು ಎಂದೂ ಹೇಳಲಾಗಿದೆ.

    ರಾಜಿಯಾದರೇ ಪವಾರ್-ಮಿಥಾಲಿ?
    ಏಕದಿನ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ 2018ರಲ್ಲಿ ಹೊರಬಿದ್ದಿದ್ದ ರಮೇಶ್ ಪವಾರ್, ಅವರು ಈಗಲೂ ತಂಡದ ನಾಯಕಿಯಾಗಿರುವ ನಡುವೆಯೂ 2022ರ ಏಕದಿನ ವಿಶ್ವಕಪ್‌ಗೆ ಮಾರ್ಗದರ್ಶನ ನೀಡುವ ಅವಕಾಶ ಪಡೆದಿರುವುದು ಕೂಡ ಅಚ್ಚರಿ ಸೃಷ್ಟಿಸಿದೆ. ಅವರಿಬ್ಬರು ರಾಜಿಯಾದರಷ್ಟೇ ಈಗ ಬಲಿಷ್ಠ ತಂಡ ಕಟ್ಟಲು ಸಾಧ್ಯವಾಗಲಿದೆ.

    ಬೆಂಗಳೂರಿನ ಕರೊನಾ ಸೋಂಕಿತೆಗೆ ಆರ್‌ಸಿಬಿ ಆಟಗಾರ ಚಾಹಲ್ ನೆರವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts