More

    ಕಾಮಗಾರಿ ವರ್ಗಾವಣೆ ಸ್ಥಗಿತಗೊಳಿಸದಿದ್ದರೆ ರಾಜೀನಾಮೆ

    ಅರಕಗೂಡು: ಅರಕಲಗೂಡು ಕ್ಷೇತ್ರಕ್ಕೆ ಮಂಜೂರಾದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಹಾಸನ ತಾಲೂಕಿಗೆ ವರ್ಗಾಯಿಸಿರುವುದನ್ನು ಕೂಡಲೇ ಸ್ಥಗಿತಗೊಳಿಸದಿದ್ದರೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ವಿರುದ್ಧ ಗುಡುಗಿದರು.


    ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ತಾಲೂಕಿಗೆ ಮಂಜೂರಾಗಿರುವ 5 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲು ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡುತ್ತಿಲ್ಲ. ಬದಲಾಗಿ ಹಾಸನ ತಾಲೂಕಿನವರಿಗೆ ನೀಡುತ್ತಿರುವ ಕುರಿತು ಸ್ಪಷ್ಟನೆ ನೀಡುವಂತೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜಶೇಖರ್ ಅವರನ್ನು ಪ್ರಶ್ನಿಸಿದರು.


    ಇದಕ್ಕೆ ಉತ್ತರಿಸಿದ ರಾಜಶೇಖರ್ ಮೇಲಧಿಕಾರಿಗಳ ಒತ್ತಡದಿಂದ ಹಾಸನ ತಾಲೂಕಿನ ಗುತ್ತಿಗೆದಾರರಿಗೆ ನೀಡುವಂತಾಗಿದೆ ಎಂದು ಅಸಹಾಯಕತೆ ತೋಡಿಕೊಂಡರು. ಇದರಿಂದ ಕೆಂಡಾಮಂಡಲವಾದ ಪ್ರಜ್ವಲ್, ಹಾಸನ ತಾಲೂಕಿನವರಿಗೆ ನೀಡಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು. ಸಾಲ ಮಾಡಿಕೊಂಡು ಕೋವಿಡ್-19 ಸಂಕಷ್ಟಕ್ಕೆ ತುತ್ತಾಗಿರುವ ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು ಎಂದು ತಾಕೀತು ಮಾಡಿದರು.


    ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಗಮನಕ್ಕೆ ತಾರದೆ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಐಟಿಸಿ ಕಂಪನಿಯವರಿಗೆ ವಹಿಸುತ್ತಿರುವ ಪರಿಣಾಮ ಲೂಟಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಅನುಮತಿ ಇಲ್ಲದೆ ಇನ್ನು ಮುಂದೆ ಐಟಿಸಿ ಕಂಪನಿಯವರಿಗೆ ಕೆರೆ ಕಾಮಗಾರಿಗಳನ್ನು ನೀಡಿದರೆ ಸಹಿಸುವುದಿಲ್ಲ ಎಂದು ಗ್ರಾಪಂ ಪಿಡಿಒಗಳಿಗೆ ಎಚ್ಚರಿಕೆ ನೀಡಿದರು.


    ಹೇಮಾವತಿ ನದಿಯಿಂದ ಗಂಗನಾಳು ನೀರಾವರಿ ಯೋಜನೆಯ ಕೊನೆಯ ಹಂತದ ಕೆರೆಗಳಿಗೆ ತುಂಬಿಸುತ್ತಿಲ್ಲ. ಆರಂಭದಲ್ಲೇ ಹಲವು ಕಡೆ ನೀರು ಸರಬರಾಜಾಗುವ ಕೊಳವೆ ಪೈಪುಗಳನ್ನು ಕೆಲ ರೈತರು ಒಡೆದು ಹಾಕಿ ಜಮೀನಿಗೆ ಹಾಯಿಸಿಕೊಳ್ಳುತ್ತಿದ್ದಾರೆ. ಇದರಿಂದ ಯೋಜನೆಯ ಉದ್ದೇಶಕ್ಕೆ ಪೆಟ್ಟು ಬೀಳಲಿದೆ. ಈ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ನೀರಾವರಿ ಇಲಾಖೆ ಇಂಜಿನಿಯರ್ ಗಿರೀಶ್ ಅವರಿಗೆ ತಾಕೀತು ಮಾಡಿದರು.


    ಪ್ರಜ್ವಲ್ ರೇವಣ್ಣ ಮಾತನಾಡಿ, ಕೆಲ ಪೊಲೀಸ್ ಠಾಣೆಗಳಲ್ಲಿ ಅಮಾಯಕರ ಮೇಲೆ ದುರುದ್ದೇಶಪೂರ್ವಕವಾಗಿ ದೂರು ದಾಖಲಿಸಿಕೊಳ್ಳುವ ಕೃತ್ಯಗಳು ನಡೆಯುತ್ತಿದ್ದು ಅದು ನಿಲ್ಲಬೇಕು. ರೈತರಿಗೆ ಗುಣಮಟ್ಟದ ಆಲೂಗಡ್ಡೆ ಬೀಜ ವಿತರಣೆಗೆ ಕ್ರಮವಹಿಸಬೇಕು. ವಿವಿಧ ಯೋಜನೆಯಡಿ ರೈತ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸುತ್ತಿರುವ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದರು.


    ಕೇಂದ್ರ ಸ್ಥಾನದಲ್ಲಿ ನೆಲಸದೆ ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರುತ್ತಿರುವ ಗಂಜಲಗೂಡು, ಸರಗೂರು, ಗಂಗೂರು, ಹೊಳಲಗೋಡು ಗ್ರಾಪಂ ಪಿಡಿಒಗಳು ವಾರ್ಷಿಕ ಪ್ರಗತಿ ಸಾಧಿಸಿಲ್ಲ ಎಂದು ತಾಪಂ ಇಒ ರವಿಕುಮಾರ್ ಮಾಹಿತಿ ನೀಡಿದರು. ನಿರ್ಲಕ್ಷೃ ತೋರುವವರನ್ನು ವರ್ಗಾಯಿಸಿ ಎಂದು ಜಿಪಂ ಉಪ ಕಾರ್ಯದರ್ಶಿ ಚಂದ್ರಶೇಖರ್ ಅವರಿಗೆ ಸಂಸದರು ಸೂಚಿಸಿದರು.


    ಮುಸುಕಿನ ಜೋಳದ ಬೆಳೆಗೆ ಸರ್ಕಾರ ಒದಗಿಸುತ್ತಿರುವ 5 ಸಾವಿರ ಸಹಾಯಧನ ಹಂತ ಹಂತವಾಗಿ ಬಿಡುಗಡೆಯಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ರಾಜೇಶ್ ಸಭೆಗೆ ಮಾಹಿತಿ ನೀಡಿದರು.

    ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಸಕಲೇಶಪುರ ಉಪವಿಭಾಗಾಧಿಕಾರಿ ಗಿರೀಶ್ ನಂದನ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್‌ಕುಮಾರ್ ಸೇರಿದಂತೆ ವಿವಿಇಲಾಖೆ ಅಧಿಕಾರಿಗಳು ಹಾಜರಿದ್ದರು.

    ವೆಂಟಿಲೇಟರ್ ಖರೀದಿಯಲ್ಲಿ ಅವ್ಯವಹಾರ: ಅರಕಲಗೂಡು: ಸರ್ಕಾರ ವೆಂಟಿಲೇಟರ್ ಖರೀದಿಯಲ್ಲಿ 40 ಕೋಟಿ ರೂ. ಹಗರಣ ನಡೆಸಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಆರೋಪಿಸಿದರು.


    ನಾನು ಸಂಸದರ ನಿಧಿಯಲ್ಲಿ 2.50 ಲಕ್ಷ ರೂ ವೆಚ್ಚದಲ್ಲಿ ಒಂದು ವೆಂಟಿಲೇಟರ್ ಅನ್ನು ವೈಯಕ್ತಿಕವಾಗಿ ಖರೀದಿಸಿ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ನೀಡಿದ್ದೇನೆ. ಆದರೆ ಸರ್ಕಾರ ಒಂದು ವೆಂಟಿಲೇಟರ್ ಖರೀದಿಸಲು 8 ಲಕ್ಷ ರೂ ವ್ಯಯಿಸಿರುವುದಾಗಿ ಸುಳ್ಳು ಹೇಳುವ ಮೂಲಕ ಭಾರಿ ಅವ್ಯವಹಾರ ಎಸಗಿದೆ ಎಂದು ದೂರಿದರು.
    ವೈಯಕ್ತಿಕವಾಗಿ ಮತ್ತೊಂದು ವೆಂಟಿಲೇಟರ್ ಖರೀದಿಸಿ ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ನೀಡುತ್ತೇನೆ. ಅಲ್ಲದೆ, ಆಂಬುಲೆನ್ಸ್ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.


    ತಾಪಂ ಪ್ರಭಾರ ಅಧ್ಯಕ್ಷ ಎಸ್.ಆರ್. ನಾಗರಾಜು ಮಾತನಾಡಿ, 15ನೇ ಹಣಕಾಸು ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಅನುಮತಿ ನೀಡುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ತಾಪಂ ಸದಸ್ಯರ ಅವಧಿ ಮುಗಿಯುವ ಹಂತ ತಲುಪಿದೆ. ಹಾಗಾಗಿ ತಕ್ಷಣ ಎಚ್ಚೆತ್ತು ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳುವಂತೆ ಪ್ರಜ್ವಲ್ ರೇವಣ್ಣ ಅವರು ಜಿಪಂ ಉಪ ಕಾರ್ಯದರ್ಶಿ ಚಂದ್ರಶೇಖರ್ ಅವರಿಗೆ ಸೂಚಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts