More

    ಧಾರವಾಡದ ಐವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಧಾರವಾಡ: ವಿವಿಧ ಕ್ಷೇತ್ರಗಳಲ್ಲಿನ ಗಣನೀಯ ಸಾಧನೆಯನ್ನು ಪರಿಗಣಿಸಿ ಜಿಲ್ಲೆಯ ಐವರಿಗೆ ೨೦೨೩ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.
    ಸಂಗೀತ- ನೃತ್ಯ ಕ್ಷೇತ್ರದಲ್ಲಿ ನೀಲಾ ಎಂ. ಕೊಡ್ಲಿ, ರಂಗಭೂಮಿ ಕ್ಷೇತ್ರದ ಎಚ್.ಬಿ. ಸರೋಜಮ್ಮ, ಕ್ರೀಡಾ ಕ್ಷೇತ್ರದ ಅಶೋಕ ಗದಿಗೆಪ್ಪ ಏಣಗಿ ಕೃಷಿ- ಪರಿಸರ ಕ್ಷೇತ್ರದ ದ್ಯಾವನಗೌಡ ಟಿ. ಪಾಟೀಲ ಹಾಗೂ ಡಾ. ನಯಾನಾ ಎಸ್. ಮೋರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ನೀಲಾ ಎಂ. ಕೊಡ್ಲಿ: ಜೈಪುರ ಘರಾಣೆಯ ಅಪ್ರತಿಮ ಕಲಾವಿದೆಯರಲ್ಲಿ ಒಬ್ಬರು. ಧಾರವಾಡದ ಸುಪ್ರಸಿದ್ಧ ಸಂಗೀತ ಮನೆತನದಲ್ಲಿ ೧೯೪೫ರ ಡಿ. ೩೦ರಂದು ಜನಿಸಿದ ನೀಲಾ ಅವರು ಆರಂಭಿಕ ಶಿಕ್ಷಣವನ್ನು ತಂದೆ ಪಂ. ಮಲ್ಲಿಕಾರ್ಜುನ ಮನಸೂರ ಅವರಿಂದ ಪಡೆದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ವಿದ್ಯಾರ್ಥಿನಿಯಾಗಿ `ಸಂಗೀತರತ್ನ’ ಪರೀಕ್ಷೆಯನ್ನು ಪ್ರಥಮ ಶ್ರೇಣಿಯೊಂದಿಗೆ ಪೂರ್ಣಗೊಳಿಸಿದರು. ಕರ್ನಾಟಕ ಸಂಗೀತ- ನೃತ್ಯ ಅಕಾಡೆಮಿ ಪ್ರಶಸ್ತಿ, ಸ್ತಿಕುಲ ಕಣ್ಮಣಿ, ಮಹಾದೇವಿ ಅಕ್ಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಅಶೋಕ ಜಿ. ಏಣಗಿ: ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ಹೆಸರಾಂತ ಕುಸ್ತಿಪಟು ಅಶೋಕ ಅವರಿಗೆ ಕ್ರೀಡಾ ಕ್ಷೇತ್ರದ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಬಿಎ ಪದವೀಧರರಾಗಿರುವ ಇವರು ೧೯೯೫ರಲ್ಲಿ ೫ನೇ ತರಗತಿಯಲ್ಲಿದ್ದಾಗ ಕುಸ್ತಿಯತ್ತ ಗಮನ ಹರಿಸಿದರು. ಈವರೆಗೆ ದೇಶಾದ್ಯಂತ ನೂರಾರು ಕುಸ್ತಿ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರು ಕುಸ್ತಿ ಅಖಾಡಕ್ಕಿಳಿದ ಬಹುತೇಕ ಕಣಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ. ಮೈಸೂರು ದಸರಾ ಕರ್ನಾಟಕ ಕೇಸರಿ ಮತ್ತು ಕರ್ನಾಟಕ ಕುಮಾರ, ಕಿತ್ತೂರು ಕುಮಾರ, ಕಾಗಿನೆಲೆಯ ವೀರಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಸೇರಿ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

    ದ್ಯಾವನಗೌಡ ಟಿ. ಪಾಟೀಲ: ಹುಬ್ಬಳ್ಳಿ ನಿವಾಸಿಯಾಗಿರುವ ದ್ಯಾವನಗೌಡ ಅವರದು ಕೃಷಿ ಕುಟುಂಬ. ಹೀಗಾಗಿ ೬೦ ವರ್ಷಗಳಿಂದ ಪ್ರಗತಿಪರ ರೈತರಾಗಿ ಕೃಷಿ ಕ್ಷೇತ್ರದ ಸಾಧಕರಾಗಿದ್ದಾರೆ. ಹಣ್ಣು, ತರಕಾರಿಯಂಥ ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ಇವರು ಹೆಸರುವಾಸಿ. ಕೃಷಿಯಲ್ಲಿನ ಸಾಧನೆಯನ್ನು ಪರಿಗಣಿಸಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ, ರಾಜ್ಯ ಕೃಷಿ ಪಂಡಿತ ಪ್ರಶಸ್ತಿ, ಕೃಷಿ ಕಾಮಧೇನು, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಕೃಷಿ ತೋಟಗಾರಿಕೆ ರೈತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

    ಎಚ್.ಬಿ. ಸರೋಜಮ್ಮ: ರಂಗಭೂಮಿ ಕ್ಷೇತ್ರದ ಸರೋಜಮ್ಮ ಹುಬ್ಬಳ್ಳಿಯವರು. ೧೦ನೇ ತರಗತಿಯಲ್ಲಿದ್ದಾಗ ಹೊಳೆನರಸೀಪುರದ ಸಾಲಿಗ್ರಾಮದಲ್ಲಿ ಮೈಸೂರು ಮಹದೇವಸ್ವಾಮಿಯವರ ಕಂಪನಿಯಲ್ಲಿ `ಸತ್ಯ ಹರಿಶ್ಚಂದ್ರ’ ನಾಟಕದ ಸಖಿ ಪಾತ್ರದಿಂದ ರಂಗಭೂಮಿ ಪ್ರವೇಶಿಸಿದರು. ಇವರ ಕಲಾಸೇವೆಯನ್ನು ಪರಿಗಣಿಸಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts