More

    ಜಿಲ್ಲೆಯ ಇಬ್ಬರಿಗೆ ರಾಜ್ಯೋತ್ಸವ ಗರಿ

    ಗದಗ: ಜಿಲ್ಲೆಯ ಇಬ್ಬರು ಸಾಧಕರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಕನಕದಾಸ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ. ಬಿ.ಎಫ್. ದಂಡಿನ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಬೆಟಗೇರಿ ಆಶುಕವಿ ರಾಮಣ್ಣ ಬ್ಯಾಟಿ ಅವರು ರಾಜ್ಯೋತ್ಸವ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.

    8 ಡಾ.ಬಿ.ಎಫ್. ದಂಡಿನ: ಗದಗ ನಗರದಲ್ಲಿ ಕನಕದಾಸ ಶಿಕ್ಷಣ ಸಮಿತಿ ಆರಂಭಿಸುವುದರ ಮೂಲಕ ಡಾ.ಬಿ.ಎಫ್. ದಂಡಿನ ಜಿಲ್ಲೆ ಸೇರಿ ಉತ್ತರ ಕರ್ನಾಟಕದ ಅಕ್ಷರ ದಾಸೋಹದ ಕಾಯಕಯೋಗಿ ಎನಿಸಿದ್ದಾರೆ. ರೋಣ ತಾಲೂಕಿನ ದ್ಯಾಮುಣಶಿ ಗ್ರಾಮದ ಕೃಷಿ ಸಂಸ್ಕೃತಿಯ ದಂಡಿನ ಮನೆತನದ ಫಕೀರಪ್ಪ ಹಾಗೂ ದ್ಯಾಮವ್ವ ದಂಪತಿಯ ಪುತ್ರ ಬಿಷ್ಠಪ್ಪ ಫಕೀರಪ್ಪ ದಂಡಿನ ತಮ್ಮ ನಿರಂತರ ಪರಿಶ್ರಮ, ಶ್ರದ್ಧೆ ಮೂಲಕ ಕನಕದಾಸ ಶಿಕ್ಷಣ ಸಮಿತಿ ಆರಂಭಿಸಿದರು.

    ಎರಡು ಪ್ರಾಥಮಿಕ ಶಾಲೆಗಳು, ಎಂಟು ಪ್ರೌಢ ಶಾಲೆಗಳು, ಎಂಟು ಪದವಿಪೂರ್ವ ಮಹಾವಿದ್ಯಾಲಯಗಳು, ಮೂರು ಪದವಿ ಮಹಾವಿದ್ಯಾಲಯಗಳು, ಎರಡು ಬಿ.ಇಡಿ. ಮಹಾವಿದ್ಯಾಲಯಗಳು, ಆರು ಡಿ.ಇಡಿ. ಮಹಾವಿದ್ಯಾಲಯಗಳು, ಎರಡು ಸಮಾಜ ಕಾರ್ಯ ಮಹಾವಿದ್ಯಾಲಯಗಳು, ಎರಡು ಗ್ರಂಥಾಲಯಗಳು, ಎಂಟು ವಿದ್ಯಾರ್ಥಿ ವಸತಿ ನಿಲಯಗಳು, ಮೂರು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳು ಹಾಗೂ ಗದಗ, ತಿಮ್ಮಾಪೂರ, ಮುಳಗುಂದ, ನರೇಗಲ್ಲ, ರೋಣ, ಗಜೇಂದ್ರಗಡ, ಹುಬ್ಬಳ್ಳಿ, ಬೆಳಗಾವಿ, ತುಪ್ಪದಕುರಹಟ್ಟಿ ಕಾಲೇಜ್​ಗಳು ಪ್ರೊ.ವಿ.ಎಫ್. ದಂಡಿನ ಅವರ ಸಾರಥ್ಯದಲ್ಲಿ ಮುನ್ನಡೆದಿವೆ.

    ಶೈಕ್ಷಣಿಕ ಸೇವೆ ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯವು 2011ರಲ್ಲಿ ಪ್ರೊ. ಬಿ.ಎಫ್. ದಂಡಿನ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಅಲ್ಲದೆ, ಅವರಿಗೆ ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳು ಲಭಿಸಿವೆ.

    8 ರಾಮಣ್ಣ ಬ್ಯಾಟಿ: ಆಶುಕವಿ ರಾಮಣ್ಣ ಬ್ಯಾಟಿ ಅವರು ಮೂಲತಃ ಬೆಟಗೇರಿ ನಿವಾಸಿ. ಕೇವಲ 4ನೇ ತರಗತಿ ಓದಿರುವ ಬ್ಯಾಟಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದರಿಂದ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಅವರಿಗೆ ಒಲಿದು ಬಂದಿದೆ.

    ಸಿದ್ಧಲಿಂಗ ಕಾವ್ಯ ಸುಧೆ, ಕಪ್ಪತ್ತದ ಕಲ್ಪವೃಕ್ಷ, ಶ್ರೀ ಕೋಡಿಕೊಪ್ಪದ ಹುಚ್ಚೀರೇಶ್ವರ ಶತಕ, ಶ್ರೀ ದೇವಾಂಗ ಶತಕ, ಶ್ರೀ ಹೊಳಲಮ್ಮದೇವಿ ಶತಕ, ಶ್ರೀ ಮೃಡಗಿರಿಯ ಅನ್ನದಾನೇಶ್ವರ ಶತಕ, ಶ್ರೀ ನಿವೃತ್ತಿನಾಥರ ಚರಿತ್ರೆ, ಭಕ್ತಿಕುಸುಮ, ಶ್ರೀ ರಂಗಾವಧೂತರ ಚರಿತ್ರೆ, ಶ್ರೀ ಗೌರಿಶಂಕರ ಚರಿತಾಮೃತ, ಕಡಕೋಳದ ಅವಧೂತ ಶ್ರೀ ಅಯ್ಯಪ್ಪಜ್ಜನ ಚರಿತ್ರೆ, ಮಂತ್ರವಿದ್ಯಾನಿ ಯಾತಾಳಿ ಚನ್ನಬಸಪ್ಪನವರು, ಗುಡ್ಡಾಪುರದ ದಾನಮ್ಮದೇವಿಯ ಪುರಾಣಂ, ಮುಕ್ಕಣ್ಣೇಶ್ವರ ಚರಿತಾಮೃತಂ, ಬಾದಾಮಿ ರುದ್ರಪ್ಪಜ್ಜನವರು, ರಂಗಾವಧೂತರ ಲೀಲಾಮೃತ, ಇಟಗಿ ಭೀಮಾಂಬಿಕೆ ಪುರಾಣಂ, ಸಂಕಟ ನಿವಾರಕ ಶನೇಶ್ವರ ವ್ರತ ಮಹಾತ್ಮೆ, ಗದಗ-ಬೆಟಗೇರಿ ಆದಿಶಕ್ತಿ ಶ್ರೀ ಕರಿಯಮ್ಮದೇವಿಯ ಅವತಾರ ಲೀಲೆಗಳು, ಶಿಶುನಾಳ ಶರೀಫ ಶಿವಯೋಗಿಗಳ ಶತಕ, ಅಂಬೇಡ್ಕರ ಪುರಾಣ, ಬಸವ ಪುರಾಣ ಸೇರಿ ರಾಮಣ್ಣ ಬ್ಯಾಟಿ ಅವರು ಚೌಪದಿ, ಕಾವ್ಯ, ಗದ್ಯ ಮತ್ತು ಭಾಮಿನಿ ಷಟ್ಪದಿಯಲ್ಲಿ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

    ದಲಿತ ಸಾಹಿತ್ಯ ಅಕಾಡೆಮಿಯ ಅಂಬೇಡ್ಕರ್ ನ್ಯಾಷನಲ್ ಅವಾರ್ಡ್, ಬಿ.ಎಸ್. ಹೊರಟ್ಟಿ ಪ್ರತಿಷ್ಠಾನದ ಅವ್ವ ಪ್ರಶಸ್ತಿ, ಕರ್ನಾಟಕ ದೇವಾಂಗ ಸಮಾಜದ ದೇವರ ದಾಸಿಮಯ್ಯ ಪ್ರಶಸ್ತಿ ಹಾಗೂ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ರಾಜ್ಯಪ್ರಶಸ್ತಿ ಬ್ಯಾಟಿ ಅವರಿಗೆ ಸಂದಿವೆ. ಇದಲ್ಲದೆ, ರಾಮಣ್ಣ ಬ್ಯಾಟಿ ಅವರು ಗದಗ ತಾಲೂಕಿನ 3ನೇ ಕನ್ನಡ ಸಾಹಿತ್ಯ ಸಮ್ಮೇಳನ, ರಾಮದುರ್ಗ ತಾಲೂಕಿನ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts