More

    ರಾಜೀವ್‌ಗಾಂಧಿ ಆರೋಗ್ಯ ವಿವಿ ಯಾವಾಗ? ; ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ

    | ಗಂಗಾಧರ್ ಬೈರಾಪಟ್ಟಣ ರಾಮನಗರ

    ಕಳೆದ 15 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ನಿರ್ಮಾಣ ಯಾವಾಗ? ಇಂತಹದೊಂದು ಪ್ರಶ್ನೆ ಸಾರ್ವನಿಕ ವಲಯದಲ್ಲಿ ವ್ಯಾಪಕವಾಗಿದೆ.

    ಕಳೆದ ಜ.3ರಂದು ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವಿಗೆ ಶೀಘ್ರವೇ ಚಾಲನೆ ನೀಡುವುದಾಗಿ ಹೇಳಿ, ಬಜೆಟ್‌ನಲ್ಲಿ ಮತ್ತೊಮ್ಮೆ ಹಣ ನೀಡುವ ಭರವಸೆಯನ್ನೂ ನೀಡಿದರು. ಆದರೆ, ಯುಗಾದಿ ಕಳೆದರೂ ಸುದ್ದಿ ಸಿಹಿ ಆಗದಿರುವುದು ಚರ್ಚೆಗೆ ಕಾರಣವಾಗಿದೆ.

    ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಎಚ್.ಡಿ. ಕುಮಾರಸ್ವಾಮಿ, ರಾಮನಗರದ ಅರ್ಚಕರಹಳ್ಳಿ ಸಮೀಪ ರಾಜೀವ್‌ಗಾಂಧಿ ಆರೋಗ್ಯ ವಿವಿ ಸ್ಥಾಪನೆ ಘೋಷಿಸಿ 335 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದರು. ಪರಿಹಾರ ಮೊತ್ತದ ಕಾರಣಕ್ಕಾಗಿ ಕೋರ್ಟ್‌ನಲ್ಲಿ ನಡೆಯುತ್ತಿರುವ ವ್ಯಾಜ್ಯದಿಂದಾಗಿ ಇದು ಇನ್ನೂ ಪರಿಹಾರವಾಗಲೇ ಇಲ್ಲ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಯೋಜನಾ ಮೊತ್ತ ಏರುತ್ತಲೇ ಇದ್ದು, ಇದೀಗ 600 ಕೋಟಿ ರೂ.ದಾಟಿದೆ.

    ಆದರೆ, ಜನವರಿ 3ರಂದು ರಾಮನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಇನ್ನೊಂದು ತಿಂಗಳೊಳಗೆ ವಿವಿಗೆ ಶಂಕುಸ್ಥಾಪನೆ ಮಾಡುತ್ತೇವೆ ಎಂದು ಭರವಸೆ ನೀಡಿ, ಬಜೆಟ್‌ನಲ್ಲಿ ಇದಕ್ಕಾಗಿ ಅನುದಾನವನ್ನೂ ನೀಡುತ್ತಿರುವುದಾಗಿಯೂ ೋಷಣೆ ಮಾಡಿದರು. ಆದರೆ ಅದು ಘೋಷಣೆಯಾಗಿಯೇ ಉಳಿದಿದೆ. ಅಲ್ಲದೆ, ಯೋಜನೆಗೆ ಶಂಕುಸ್ಥಾಪನೆ ಸಂಬಂಧ ಹಲವು ಮಂದಿ ಸಭೆ ನಡೆಸಿದ್ದು ಬಿಟ್ಟರೆ, ಈ ಯೋಜನೆ ಜಾರಿಗೆ ಬರಲಿಲ್ಲ.

    ಏನಿದು ಯೋಜನೆ!: 2006-07ರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಈ ರಾಜೀವ್ ಗಾಂಧಿ ಆರೋಗ್ಯ ವಿವಿ ನಿರ್ಮಾಣಕ್ಕೆ ಮುಂದಾಗಿದ್ದರು. ರಾಮನಗರದ ಅರ್ಚಕರಹಳ್ಳಿ ಬಳಿ ಸುಮಾರು 216.16 ಎಕರೆ ವಿಸ್ತೀರ್ಣದಲ್ಲಿ ಆರೋಗ್ಯ ವಿಶ್ವವಿದ್ಯಾಲಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಆರೋಗ್ಯ ನಗರ ನಿರ್ಮಾಣ ಯೋಜನೆ ೋಷಿಸಲಾಗಿತ್ತು. ಇದಕ್ಕಾಗಿ ಬಜೆಟ್‌ನಲ್ಲಿ ಸುಮಾರು 335 ಕೋಟಿ ರೂ. ಮಂಜೂರು ಮಾಡಿ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದರು. ಈ ಯೋಜನೆಯಂತೆ ಇಲ್ಲಿ ಆಡಳಿತ ಭವನ, ವೈದ್ಯಕೀಯ, ದಂತ, ನರ್ಸಿಂಗ್ ಕಾಲೇಜುಗಳು, 750 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ಮತ್ತು 250 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿದ್ಯಾರ್ಥಿನಿಲಯ, ವಸತಿ ಗೃಹಗಳು ಸೇರಿ 16 ಬೃಹತ್ ಕಟ್ಟಡಗಳು ತಲೆ ಎತ್ತಬೇಕು. ಈ ಯೋಜನೆ ಜಾರಿಯಿಂದ ಹಳೇ ಮೈಸೂರು ಭಾಗದ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ ಹಲವು ಜಿಲ್ಲೆಗಳ ಜನತೆಗೆ ವೈದ್ಯಕೀಯ ಸೇವೆಗಳ ದೃಷ್ಟಿಯಿಂದ ಸಾಕಷ್ಟು ಅನುಕೂಲವಾಗಲಿದೆ ಎನ್ನುವ ಕನಸೂ ಇದೆ.

    ಸಮಸ್ಯೆ ಏನು?: ಯೋಜನೆ ಜಾರಿಗೆ ಸಂಬಂಧಿಸಿದಂತೆ ನಿಗದಿಪಡಿಸಲಾಗಿರುವ ಜಮೀನಿನಲ್ಲಿ ಖಾಸಗಿ ಜಮೀನು ಇದ್ದು, ಕೆಲವು ರೈತರು ಹಣ ಪಡೆದುಕೊಂಡು ಸರ್ಕಾರಕ್ಕೆ ಜಮೀನು ನೀಡಿದ್ದಾರೆ. ಆದರೆ ಪರಿಹಾರ ಮೊತ್ತದ ಕಾರಣಕ್ಕಾಗಿ 79 ಎಕರೆ ಜಮೀನಿನ 17 ರೈತರು ಕೋರ್ಟ್ ಮೆಟ್ಟಿಲೇರಿ ಭೂ ಸ್ವಾಧೀನಪಡಿಸಿಕೊಳ್ಳದಂತೆ ಅರ್ಜಿ ಹಾಕಿದ್ದರು. ಇದು ಇನ್ನೂ ವಿಚಾರಣೆ ಹಂತದಲ್ಲಿಯೇ ಇದೆ. ರೈತರ ಮನವೊಲಿಕೆ ಸಂಬಂಧ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಲವಾರು ಸುತ್ತಿನ ಮಾತುಕತೆ ಹೊರತಾಗಿಯೂ ಬೇಡಿಕೆಗಳಿಗೆ ಬದ್ಧರಾಗಿ ಜಮೀನು ಬಿಟ್ಟುಕೊಡಲು ರೈತರು ನಿರಾಕರಿಸಿರುವ ಕಾರಣ ಯೋಜನೆ ನನೆಗುದಿಗೆ ಬಿದ್ದಿದೆ.

    ಸಚಿವರೇ ಗಮನಹರಿಸಿ: ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಅವರ ತವರು ಜಿಲ್ಲೆ ರಾಮನಗರ. ಜಿಲ್ಲಾ ಕೇಂದ್ರದಲ್ಲಿ ತಲೆ ಎತ್ತಬೇಕಿರುವ ಮಹಾತ್ವಾಕಾಂಕ್ಷಿ ಯೋಜನೆಗೆ ಇನ್ನೂ ಚಾಲನೆ ದೊರೆಯದಿರುವುದು ಸರ್ಕಾರದ ಮೇಲಿನ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಕೂಡಲೇ ಯೋಜನೆ ಜಾರಿಗೆ ಕ್ರಮವಹಿಸುವ ಮೂಲಕ ಜಿಲ್ಲೆಯ ಜನತೆಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts