More

    ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್ ನಿರ್ಮಾಣ ಶೀಘ್ರ ಆರಂಭಿಸಲು ಡಿಸಿಎಂ ಅಶ್ವತ್ಥನಾರಾಯಣ ಸೂಚನೆ

    ರಾಮನಗರ :  ದಶಕದಿಂದ ನನೆಗುದಿಗೆ ಬಿದ್ದಿರುವ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಶೀಘ್ರವೇ ಚಾಲನೆ ದೊರೆಯುವ ಕಾಲ ಕೂಡಿ ಬಂದಿದೆ.
    ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿ ಶೀಲಿಸಿದರು. ಆದಷ್ಟು ಬೇಗ ವಿವಿ ಕ್ಯಾಂಪಸ್ ನಿರ್ಮಾಣ ಕಾಮಗಾರಿ ಆರಂಭಿಸುವಂತೆ ವಿವಿ ಕುಲಪತಿ ಪ್ರೊ. ಸಚ್ಚಿದಾನಂದ ಅವರಿಗೆ ಸೂಚನೆ ನೀಡಿದರು.
    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ, ಈಗಾಗಲೇ 216 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಪೈಕಿ 40 ಎಕರೆ ಸರ್ಕಾರಿ ಜಮೀನು ಸೇರಿದೆ. ಕೆಲ ರೈತರ ಭೂಮಿಗೆ ಪರಿಹಾರ ನೀಡಲಾಗಿದೆ. ಸುಮಾರು 70 ಎಕರೆಗೆ ಸಂಬಂಧಿಸಿದ ಪರಿಹಾರ ವಿವಾದ ನ್ಯಾಯಾಲಯದಲ್ಲಿದೆ. ಕೋರ್ಟ್ ಆದೇಶದ ಪ್ರಕಾರ ಪರಿಹಾರ ನೀಡುತ್ತೇವೆ. ಸ್ವಾಧೀನದಲ್ಲಿ ಇರುವ ಜಮೀನಿನಲ್ಲಿ ಕ್ಯಾಂಪಸ್ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
    ತ್ವರಿತವಾಗಿ ಕಾಮಗಾರಿ ಕೈಗೊಳ್ಳುವ ಸಂಬಂಧ ಈಗಾಗಲೇ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಜತೆ ಚರ್ಚಿಸಲಾಗಿದೆ. ಶೀಘ್ರವಾಗಿ ಕಾಮಗಾರಿ ಆರಂಭಿಸಲು ಅವರೂ ಉತ್ಸುಕರಾಗಿದ್ದಾರೆ. ಜಿಲ್ಲೆ ಜನಪ್ರತಿನಿಧಿಗಳಾದ ಸಚಿವ ಸಿ.ಪಿ. ಯೋಗೇಶ್ವರ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕರಾದ ಡಿ.ಕೆ.ಶಿವಕುಮಾರ್, ಅನಿತಾ ಕುಮಾರಸ್ವಾಮಿ, ಮಂಜುನಾಥ್ ಹಾಗೂ ಸಂಸದ ಡಿ.ಕೆ.ಸುರೇಶ್ ಸೇರಿ ಎಲ್ಲರೂ ಈ ಯೋಜನೆಯನ್ನು ಬೇಗ ಕಾರ್ಯಗತ ಮಾಡುವಂತೆ ಹೇಳುತ್ತಿದ್ದಾರೆ ಎಂದು ಡಿಸಿಎಂ ತಿಳಿಸಿದರು.
    ಆರೋಗ್ಯ ವಿವಿ ಜತೆಯಲ್ಲಿಯೇ ಸುಸಜ್ಜಿತ ಹೆಲ್ತ್ ಸಿಟಿ ನಿರ್ಮಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ಎರಡು ಯೋಜನೆಗಳು ಕಾರ್ಯಗತವಾದರೆ ಈ ಭಾಗದ 5-6 ಜಿಲ್ಲೆಗಳ ಜನರಿಗೆ ಅನುಕೂಲವಾಗುವ ಜತೆಗೆ, ರಾಮನಗರದಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದ ಚಿಕಿತ್ಸೆ ದೊರೆಯುತ್ತದೆ ಎಂದು ಡಾ. ಅಶ್ವತ್ಥ ನಾರಾಯಣ ಹೇಳಿದರು.
    ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಪಂ ಸಿಇಒ ಇಕ್ರಂ, ಶಾಸಕಿ ಅನಿತಾ ಕುಮಾರಸ್ವಾಮಿ, ಆರೋಗ್ಯ ವಿವಿ ಕುಲಪತಿ ಡಾ. ಸಚ್ಚಿದಾನಂದ, ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ಡಾ. ಅನುರಾಧ ಸೇರಿ ಇತರ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts