More

    ತ್ವರಿತವಾಗಿ ನಾಲಾ ಆಧುನೀಕರಣ ಕಾಮಗಾರಿ ಪೂರ್ಣಗೊಳಿಸಿ: ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಆಗ್ರಹ

    ಮಂಡ್ಯ: ಜಿಲ್ಲೆಯಲ್ಲಿ ಜನರಿಗೆ ಸಾಲ ನೀಡಿರುವ ಮೈಕ್ರೋ ಫೈನಾನ್ಸ್‌ಗಳು ಜನರು ಹಾಗೂ ರೈತರನ್ನು ಶೋಷಣೆ ಮಾಡುತ್ತಿವೆ. ಅಡವಿಟ್ಟ ಚಿನ್ನಾಭರಣಗಳನ್ನು ರೈತರ ಗಮನಕ್ಕೆ ಬಾರದಂತೆ ಮಾರಾಟ ಮಾಡಿಕೊಳ್ಳುತ್ತಿದೆ. ಇದನ್ನು ತಡೆಗಟ್ಟಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಎಚ್ಚರಿಕೆ ನೀಡಿದರು.
    ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಒಟ್ಟು 42 ಕಿ.ಮೀ ನಾಲಾ ಆಧುನೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಈ ಪೈಕಿ 18 ಕಿ.ಮೀ ಆಧುನೀಕರಣ ಕಾಮಗಾರಿಯಷ್ಟೇ ಪೂರ್ಣಗೊಂಡಿದೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಸಂಪೂರ್ಣ ನಾಲಾ ಆಧುನೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
    ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಜೂನ್ ತಿಂಗಳಿನಿಂದ ಮುಂಗಾರು ಬೆಳೆಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಇಂತಹ ಸಂದರ್ಭದಲ್ಲಿ ನಾಲೆಗಳಲ್ಲಿ ನೀರು ಹರಿಸಬೇಕಾಗುತ್ತದೆ. ಆದ್ದರಿಂದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕಳೆದ 15 ದಿನದಿಂದ ಕಾಮಗಾರಿಯನ್ನು ನಿಧಾನವಾಗಿ ಮಾಡಲಾಗುತ್ತಿದೆ. ಕೆಲಸಕ್ಕೆ ಅಗತ್ಯವಿರುವ ಕಾರ್ಮಿಕರನ್ನು ಕಳುಹಿಸಿ ಕೊಡುತ್ತಿಲ್ಲ, ಇದರಿಂದ ವಿಳಂಬವಾಗಿದೆ. ಮುಂಗಾರು ಮಳೆಯ ಬೆಳೆವೊಡ್ಡುವ ಸಂದರ್ಭದಲ್ಲಿ ನಾಲೆಗಳ ಕಾಮಗಾರಿ ನಡೆಸುವುದಕ್ಕೆ ನಾವು ಅವಕಾಶ ನೀಡುವುದಿಲ್ಲ. ಆದರಿಂದ ಇನ್ನೂ ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಎಂದು ಆಗ್ರಹಿಸಿದರು.
    ಇನ್ನು ಜಿಲ್ಲೆಯ ಏಳು ತಾಲೂಕನ್ನು ಬರಪೀಡಿತವೆಂದು ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ತೆಂಗು ಮತ್ತು ಅಡಿಕೆ ಬೆಳೆಗಳು ನಾಶವಾಗಿವೆ. ಆದ್ದರಿಂದ ಅವುಗಳಿಗೂ ಸೂಕ್ತ ಪರಿಹಾರ ನೀಡಬೇಕು. ಕೇವಲ ಖುಷ್ಕಿ ಬೆಳೆಗಳಿಗಲ್ಲದೇ, ನೀರಾವರಿ ಪ್ರದೇಶದ ರೈತರಿಗೂ ಬರ ಪರಿಹಾರ ವಿತರಣೆ ಮಾಡಬೇಕು. ರಾಜ್ಯ ಸರ್ಕಾರವು ಕಳೆದ 7 ತಿಂಗಳಿಂದ ಹಾಲಿನ ಸಹಾಯಧನ ಬಿಡುಗಡೆ ಮಾಡಿಲ್ಲ. ಈ ಹಣವನ್ನು ಬಿಡುಗಡೆ ಮಾಡಿದರೆ ಹಾಲು ಉತ್ಪಾದಕರಿಗೆ ಒಂದಷ್ಟು ಸಹಾಯವಾಗಲಿದೆ. ಕೂಡಲೇ ಸಹಾಯಧನ ಬಿಡುಗಡೆ ಮಾಡಿ ರೈತರ ಬೆಂಬಲಕ್ಕೆ ನೀಡಬೇಕೆಂದು ಒತ್ತಾಯಿಸಿದರು.
    ರೈತ ಸಂಘದ ಪದಾಧಿಕಾರಿಗಳಾದ ರವಿಕುಮಾರ್, ಕೆ.ಟಿ.ಗೋವಿಂದೇಗೌಡ, ಕೆನ್ನಾಳು ನಾಗರಾಜು, ಬಾಲಚಂದ್ರು, ಶಿವಳ್ಳಿ ಚಂದ್ರು, ಹರವು ಪ್ರಕಾಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts