More

    ಮಾಂಡೌಸ್ ಚಂಡಮಾರುತ; ಚಳಿ, ಮಳೆಗೆ ರಾಜ್ಯ ಗಡಗಡ

    ಬೆಂಗಳೂರು: ಮಾಂಡೌಸ್ ಚಂಡಮಾರುತ ಪ್ರಭಾವ, ಮೋಡ ಕವಿದ ವಾತಾವರಣ ಹಾಗೂ ತಾಪಮಾನ ಏರಿಳಿತದಿಂದ ತೀವ್ರಗೊಂಡಿರುವ ಚಳಿ ಮತ್ತು ಮಳೆಗೆ ರಾಜ್ಯ ಗಡ ಗಡ ನಡುಗಿದೆ. ಏತನ್ಮಧ್ಯೆ, ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮುಂದಿನ ಎರಡು ದಿನ ಮುಂದುವರಿಯಲಿದೆ. ಕರಾವಳಿ, ಉತ್ತರ ಒಳನಾಡುಗಿಂತ ದಕ್ಷಿಣ ಒಳನಾಡು ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

    ಭಾನುವಾರ ಇಡೀ ದಿನ ಸುರಿದ ಜಿಟಿಜಿಟಿ ಮಳೆ ಮತ್ತು ಶೀತಗಾಳಿಯಿಂದ ಜನರನ್ನು ಥರಗಟ್ಟುವಂತೆ ಮಾಡಿತ್ತು. ಕೆಲ ಜಿಲ್ಲೆಗಳಲ್ಲಿ ಜೋರಾಗಿ ಮಳೆ ಸುರಿದರೆ, ಕೆಲವೆಡೆ ಸಾಧಾರಣ ಮಳೆಯಾಯಿತು. ಇದರಿಂದ ಜನಜೀವನ ಅಸ್ತವ್ಯಸ್ತವಾಯಿತು. ಕೆಲವರು ಮಳೆಯನ್ನು ಲೆಕ್ಕಿಸದೆ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮೋಜು ಮಸ್ತಿಗೆ ಹೊರಗಡೆ ತೆರಳ ಬೇಕಾದವರಿಗೂ ತೊಂದರೆಯಾಯಿತು.

    ಸಾಮಾನ್ಯವಾಗಿ ನವೆಂಬರ್ ಕೊನೆ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಶುರುವಾಗುವ ಚಳಿಗಾಲ ಫೆಬ್ರವರಿವರೆಗೆ ಇರಲಿದೆ. ಆದರೆ, ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಮುನ್ನವೇ ಚಳಿ ಶುರುವಾಗಿತ್ತು. ಈ ಸಂದರ್ಭದಲ್ಲಿ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಗಣನೀಯವಾಗಿ ಇಳಿಕೆಯಾಗಿತ್ತು. ಕಳೆದ ವಾರ ಹಿಂಗಾರು ಮಳೆ ಕ್ಷೀಣ ಹಾಗೂ ಬಿಸಿಲು ವಾತಾವರಣವಿದ್ದ ಪರಿಣಾಮ ಹೆಚ್ಚಾಗಿದ್ದ ಚಳಿ ಕಡಿಮೆಯಾಗಿತ್ತು. ಈಗ ಸೈಕ್ಲೋನ್ ಪರಿಣಾಮದಿಂದ ಮೋಡದಲ್ಲಿ ತೇವಾಂಶ ಇರುವುದರಿಂದ ಮತ್ತೆ ಚಳಿ ತೀವ್ರಗೊಂಡಿದೆ. ಕೆಲ ಜಿಲ್ಲೆಗಳಲ್ಲಿ ಹಗಲು ಮತ್ತು ರಾತ್ರಿ ವೇಳೆ ತಂಪಾದ ಗಾಳಿ ಬೀಸುತ್ತಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಜನರು ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚಗಿನ ಉಡುಪುಗಳಿಗೆ ಮೊರೆ ಹೋಗಿದ್ದಾರೆ.

    ಶುಚಿ ಆಹಾರ ಸೇವಿಸಿ
    ಚಳಿ ಹೆಚ್ಚಳ ಹಿನ್ನೆಲೆಯಲ್ಲಿ ವಾಯುವಿಹಾರ, ವ್ಯಾಯಾಮಕ್ಕೆ ಹೋಗುವವರು ತುಂಬ ಎಚ್ಚರಿಕೆಯಿಂದ ಇರಬೇಕು. ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರು, ಎಲಬು-ಕೀಲು ನೋವಿನಿಂದ ಬಳಲುತ್ತಿರುವವರು ಈ ಅವಧಿಯಲ್ಲಿ ಹೊರಹೋಗದಿರುವುದು ಉತ್ತಮ. ಅಲ್ಲದೆ, ವಿಶೇಷವಾಗಿ ಮಕ್ಕಳ ಮತ್ತು ಹಿರಿಯ ನಾಗರಿಕರು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಬೇಕೆಂದು ಎನ್ನುತ್ತಾರೆ ತಜ್ಞರು. ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮು ಮತ್ತು ಜ್ವರ ಸೇರಿ ಇತರ ಕಾಯುಲೆಗಳು ಎದುರಾಗಲಿವೆ. ಕಾಲಿನ ಹಿಮ್ಮಡಿ, ತುಟಿ ಸೇರಿ ಕೈಕಾಲಿನ ಚರ್ಮ ಒಣಗಲಿದೆ. ಈ ಬಗ್ಗೆ ಜನರು ಅಗತ್ಯ ಮುನ್ನಚ್ಚರಿಕಾ ಕ್ರಮ ತೆಗೆದು ಕೈಗೊಳ್ಳಬೇಕು.

    ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಿಕೊಳ್ಳುವ ಜತೆಗೆ ಕುದಿಸಿ ಆರಿಸಿದ ನೀರು, ಬಿಸಿ ಹಾಗೂ ಶುಚಿಯಾದ ಆಹಾರವನ್ನು ಸೇವಿಸಬೇಕು. ಫ್ರೀಡ್ಜ್‌ನಲ್ಲಿ ಹೆಚ್ಚು ಹೊತ್ತು ಇಟ್ಟ ಆಹಾರವನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು. ದೂಳಿನಿಂದ ದೂರವಿದ್ದು, ಚೆನ್ನಾಗಿ ಒಣಗಿಸಿದ ಬಟ್ಟೆಯನ್ನು ಮೈ ತುಂಬಾ ಧರಿಸುವುದು ಸೂಕ್ತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts