More

    ಇನ್ನೂ ಮೂರ್ನಾಲ್ಕು ದಿನ ಅಕಾಲಿಕ ಮಳೆ, ಶನಿವಾರದವರೆಗೆ ಯೆಲ್ಲೋ ಅಲರ್ಟ್

    ಮಂಗಳೂರು/ಉಡುಪಿ: ಪೂರ್ವ ಮತ್ತು ಪಶ್ಚಿಮ ಎರಡೂ ಕಡೆಯ ಸಮುದ್ರದಲ್ಲಿ (ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿ) ಉಂಟಾಗಿರುವ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಅಕಾಲಿಕ ಮಳೆ ಮುಂದುವರಿದಿದೆ. ಹವಾಮಾನ ಇಲಾಖೆ ಕರಾವಳಿ ಜಿಲ್ಲೆಗಳಿಗೆ ಗುರುವಾರದಿಂದ ಶನಿವಾರ ಬೆಳಗ್ಗಿನವರೆಗೆ ಯೆಲ್ಲೋ ಅಲರ್ಟ್ ಪ್ರಕಟಿಸಿದೆ.

    ಬುಧವಾರ ರಾತ್ರಿ ಉಭಯ ಜಿಲ್ಲೆಗಳಲ್ಲಿ ಗುಡುಗು ಸಹಿತ ಉತ್ತಮ, ಕೆಲವು ಕಡೆ ಭಾರಿ ಮಳೆಯಾಗಿದ್ದು, ಮುಂಗಾರು ಆರಂಭವಾಯಿತೇನೋ ಅನ್ನುವಂತೆ ಸುರಿದಿದೆ. ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕಿರುವುದರಿಂದ ಭರ್ತಿಯಾಗಿ ಗದ್ದೆ, ಕೃಷಿಗೆ ಹಲವು ಕಡೆ ಹಾನಿ ಸಂಭವಿಸಿದೆ. ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣಕ್ಕೆ ಚರಂಡಿ ನೀರು ನುಗ್ಗಿದ್ದು, ದುರಸ್ತಿ ಬಳಿಕ ನೀರು ಇಳಿದು ಹೋಗಿದೆ. ಕಟೀಲು ಪೆಟ್ರೋಲ್ ಪಂಪ್ ಬಳಿಯ ನಡುಗೋಡುನಲ್ಲಿ ಸಮತಟ್ಟುಗೊಳಿಸಿದ ಗುಡ್ಡದಿಂದ ನೀರು ಹರಿದು ಮನೆಯ ತಡೆಗೋಡೆ ಕುಸಿದಿದೆ. ಗುರುವಾರ ಸಾಯಂಕಾಲದಿಂದ ಮತ್ತೆ ಗುಡುಗು ಸಹಿತ ಭಾರಿ ಮಳೆ ಆರಂಭವಾಗಿದೆ. ಘಟ್ಟದ ತಪ್ಪಲಿನ ಭಾಗದಲ್ಲಿ ಅತಿ ಹೆಚ್ಚಿನ ಮಳೆ ಸುರಿಯುತ್ತಿದೆ. ಪರಿಣಾಮ ನದಿಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ.
    ‘ಅಕಾಲಿಕ ಮಳೆ ಇನ್ನೂ ಮೂರು-ನಾಲ್ಕು ದಿನ ಮಳೆ ಸುರಿಯುವ ಸಾಧ್ಯತೆಯಿದೆ. ಜನವರಿ ತಿಂಗಳಲ್ಲಿ ಈ ರೀತಿ ಮಳೆ ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು’ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನೀಲ್ ಗಾವಸ್ಕರ್ ಪ್ರತಿಕ್ರಿಯಿಸಿದ್ದಾರೆ.

    ಗುರುವಾರ ರಾತ್ರಿ 8 ಗಂಟೆಗೆ ವರೆಗಿನ ಕೆಎಸ್‌ಎನ್‌ಡಿಎಂಸಿ ಅಂಕಿ ಅಂಶದಂತೆ ಅರಸಿನಮಕ್ಕಿಯಲ್ಲಿ 76, ಆಲೆಟ್ಟಿ 67.5, ಶಿರಾಡಿ 67, ಮುಂಡಾಜೆ 66, ಶಿಬಾಜೆ 66, ಕೊಕ್ಕಡದಲ್ಲಿ 64.5 ಮಿ.ಮೀ. ಮಳೆ ಸುರಿದಿದೆ. ಗುರುವಾರ ಬೆಳಗ್ಗಿನವರೆಗೆ ಉಡುಪಿ ತಾಲೂಕು 57, ಕುಂದಾಪುರ 17.9, ಕಾರ್ಕಳ 48.9 ಮಿ.ಮೀ. ಸಹಿತ ಉಡುಪಿ ಜಿಲ್ಲೆಯಲ್ಲಿ ಸರಾಸರಿ 37.6 ಮಳೆ ದಾಖಲಾಗಿದೆ.
    ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 32.1 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ಕೃಷಿಕರ ನಿದ್ದೆ ಕೆಡಿಸಿದ ಮಳೆ: ಅಕಾಲಿಕ ಮಳೆ ಕೃಷಿಕರನ್ನು ಆತಂಕಕ್ಕೆ ತಳ್ಳಿದೆ. ಮುಖ್ಯವಾಗಿ ಅಡಕೆ ಬೆಳೆಗಾರು ಕಂಗಾಲಾಗಿದ್ದಾರೆ. ಅಂಗಳದಲ್ಲಿ ಒಣಗಲು ಹಾಕಿರುವ ಅಡಕೆಯನ್ನು ಮಳೆ ನೀರಿನಿಂದ ರಕ್ಷಿಸುವುದೇ ಸವಾಲಾಗಿದೆ. ಇನ್ನೊಂದೆಡೆ ಮಳೆ ಬಿದ್ದು ಹಿಂಗಾರ ಕೊಳೆಯುವ ಸಾಧ್ಯತೆಯಿದ್ದು, ಇದು ಮುಂದಿನ ಫಸಲಿನ ಮೇಲೆ ಪರಿಣಾಮ ಬೀಳಲಿದೆ. ತರಕಾರಿ ಬೆಳೆಗಾಗಿ ಬೀಜ ಬಿತ್ತನೆ ಮಾಡಿದ ರೈತರೂ ಕಂಗಾಲಾಗಿದ್ದಾರೆ. ಪೈರು ಹಂತಕ್ಕೆ ಬಂದಿರುವ ಎರಡನೇ ಭತ್ತದ ಬೆಳೆಗೂ ಸಮಸ್ಯೆಯಾಗಿದೆ. ಕೃಷಿಕರ ಯೋಜನೆಗಳನ್ನು ಮಳೆ ಬುಡಮೇಲು ಮಾಡುತ್ತಿದೆ.

    ಸಿಡಿಲು ಬಡಿದು ಹೋಟೆಲ್‌ಗೆ ಹಾನಿ
    ಬ್ರಹ್ಮಾವರ: ಆಕಾಶವಾಣಿ ಬಳಿಯ ಬಾರಕೂರು ರಸ್ತೆಯ ಹಂದಾಡಿ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಸತೀಶ್ ಶೆಟ್ಟಿ ಎಂಬುವರು ನಾಲ್ಕು ವರ್ಷಗಳಿಂದ ಹೋಟೆಲ್ ನಡೆಸುತ್ತಿರುವ ಸಪ್ತಮಿ ಹೊಟೇಲ್‌ಗೆ ಬುಧವಾರ ರಾತ್ರಿ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡಿದ್ದು, ಹಾನಿ ಸಂಭವಿಸಿದೆ. ಒಳಗಡೆ ಇದ್ದ ಸಾಮಗ್ರಿಗಳು ಮತ್ತು ನಗದು ಹಣ ಸುಟ್ಟು ಕರಕಲಾಗಿದೆ. ಬೇಯಿಸಿದ ಅನ್ನ, ಇಡ್ಲಿ ಹಿಟ್ಟು, ಪ್ರಿಜ್‌ನಲ್ಲಿ ಇರಿಸಲಾದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಗ್ಯಾಸ್ ಸಿಲಿಂಡರ್ ಮತ್ತು ವಿದ್ಯುತ್ ಸಂಪರ್ಕಕ್ಕೆ ಹಾನಿಯಾಗಿಲ್ಲ. ಕುಟುಂಬಿಕರ ಮನೆಯಲ್ಲಿ ಕಾರ್ಯಕ್ರಮವಿದ್ದ ಕಾರಣ ಬೇಗ ತೆರಳಿದ್ದರಿಂದ ಪ್ರಾಣಹಾನಿ ತಪ್ಪಿದೆ. ಕೋಟತಟ್ಟು ಪಡುಕರೆಯ ಲಕ್ಷ್ಮಿ ಬತ್ತಾಡ ಎಂಬುವರ ಮನೆಗೂ ಸಿಡಿಲು ಬಡಿದು ಹಾನಿಯಾಗಿದೆ.

    ಉಪ್ಪಿನಂಗಡಿ ಉದ್ಭವ ಲಿಂಗ ಜಲಾವೃತ
    ಉಪ್ಪಿನಂಗಡಿ: ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ನೇತ್ರಾವತಿ ನದಿ ನೀರಿನ ಹರಿವು ಹೆಚ್ಚಳಗೊಂಡು ಉಪ್ಪಿನಂಗಡಿ ಸಂಗಮ ತಾಣದಲ್ಲಿ ನದಿಯಂಚಿನವರೆಗೆ ವಿಸ್ತರಿಸಿ ಹರಿದಿದೆ. ನೇತ್ರಾವತಿ- ಕುಮಾರಧಾರಾ ಸಂಗಮ ಸ್ಥಳಲ್ಲಿ ಭಕ್ತರ ಅನುಕೂಲಕ್ಕೆ ನಿರ್ಮಿಸಿರುವ ತಾತ್ಕಾಲಿಕ ಪಿಂಡ ಪ್ರಧಾನ ಶೆಡ್ ಜಲಾವೃತಗೊಂಡು, ಕೆಲವು ಸಾಮಗ್ರಿಗಳು ನದಿಪಾಲಾದವು. ನದಿಮಧ್ಯದಲ್ಲಿರುವ ಉದ್ಭವ ಲಿಂಗವೂ ಜಲಾವೃತಗೊಂಡಿತು.

    ಮಟ್ಟುಗುಳ್ಳ ಕೃಷಿ ಹಾನಿ: ಕಾಪು ತಾಲೂಕಿನಲ್ಲಿ ಹೊಳೆ ತೀರ ಹಾಗೂ ತಗ್ಗು ಪ್ರದೇಶದ ಗದ್ದೆಗಳಲ್ಲಿ ನೀರು ನಿಂತಿದ್ದು, ಹಲವು ಎಕರೆ ವಾಣಿಜ್ಯ ಬೆಳೆಗಳು ಹಾನಿಯಾಗಿವೆ. ಕೈಪುಂಜಾಲು, ಕೋಟೆ, ಮಟ್ಟು ಪ್ರದೇಶಗಳಲ್ಲಿ ಸುಮಾರು 20 ಎಕರೆ ಮಟ್ಟುಗುಳ್ಳ ಕೃಷಿಗೆ ಹಾನಿಯಾಗಿದೆ. ತರಕಾರಿ, ಉದ್ದು, ಜೋಳ ಮತ್ತಿತರ ಬೆಳೆಗಳಿಗೂ ಹಾನಿಯಾಗಿದೆ. ಮಣ್ಣು ಹಾಕಿ ನಿರ್ಮಿಸಿದ ಹಲವು ರಸ್ತೆಗಳು ಕೊಚ್ಚಿ ಹೋಗಿವೆ. ಪಲಿಮಾರಿನಲ್ಲಿ ಮಳೆಯಿಂದ ರಾತ್ರಿ 2 ಗಂಟೆಗೆ ಅಣೆಕಟ್ಟಿನಲ್ಲಿ ನೀರು ಅಪಾಯದ ಮಟ್ಟವೇರಿ ಸ್ಥಳೀಯರು ಆತಂಕ ಎದುರಿಸಿದರು.

    ಮಳವೂರು ಡ್ಯಾಂನಿಂದ ಕೃಷಿಭೂಮಿ ಜಲಾವೃತ: ಮಳೆಯಿಂದಾಗಿ ಹೆಚ್ಚುವರಿ ನೀರು ಬಂದು ಮಳವೂರು ಡ್ಯಾಂ ಭರ್ತಿಯಾಗಿ ಫಲ್ಗುಣಿ ನದಿ ನೀರು ನೂರಾರು ಎಕರೆ ಕೃಷಿಭೂಮಿಗೆ ನುಗ್ಗಿದೆ. ಕುಡಿಯುವ ನೀರು ಉದ್ದೇಶದ ಡ್ಯಾಂನ ಎಲ್ಲ ಹಲಗೆಗಳನ್ನು ಹಾಕಿರುವುದರಿಂದ ನದಿ ಇಕ್ಕೆಲದ ಗದ್ದೆ, ಬಯಲು ಪ್ರದೇಶಗಳು ಜಲಾವೃತಗೊಂಡಿವೆ. ಭತ್ತ, ತರಕಾರಿ, ಮೆಣಸು ಇತ್ಯಾದಿ ಬೆಳೆಗಳಿಗೆ ಸಮಸ್ಯೆಯಾಗಿದೆ. ಸ್ಥಳೀಯರು ಜೆಸಿಬಿ ನೆರವಿನಿಂದ ಕಿಂಡಿ ಅಣೆಕಟ್ಟೆಯ ಕೆಲವು ಹಲಗೆಗಳನ್ನು ತೆರವುಗೊಳಿಸಿದ್ದು, ಮಳೆ ಮುಂದುವರಿದರೆ ಇನ್ನಷ್ಟು ಹಲಗೆ ತೆಗೆಯುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

    ಉಡುಪಿಯಲ್ಲಿ 21 ಲಕ್ಷ ರೂ. ನಷ್ಟ: ಉಡುಪಿ ಜಿಲ್ಲೆಯಲ್ಲಿ ಬುಧವಾರ ರಾತ್ರಿಯ ಮಳೆಯಿಂದ ಮೆಸ್ಕಾಂಗೆ 18.76 ಲಕ್ಷ ರೂ. ಹಾಗೂ ಕಂದಾಯ ಇಲಾಖೆಗೆ 3.30 ಲಕ್ಷ ರೂ. ನಷ್ಟ ಸಂಭವಿಸಿದೆ. ಉಪ್ಪುಂದ ಗ್ರಾಮದ ಮನೆಗೆ ಸಿಡಿಲು ಬಡಿದು 50 ಸಾವಿರ ರೂ, ಮುಂಡ್ಕೂರು ಗ್ರಾಮದ ಕುದುರೆಬೆಟ್ಟು ಎಂಬಲ್ಲಿ ಮನೆಗೆ ಸಿಡಿಲು ಬಡಿದು 80 ಸಾವಿರ ರೂ., ಮುಂಡ್ಕೂರು ಜಾರಿಗೆಕಟ್ಟೆ ಎಂಬಲ್ಲಿ ಕೊಟ್ಟಿಗೆ ಕುಸಿದು 1 ಲಕ್ಷ ರೂ, ಬ್ರಹ್ಮಾವರ ಹಂದಾಡಿ ಗ್ರಾಮದ ವಾಣಿಜ್ಯ ಕಟ್ಟಡಕ್ಕೆ ಸಿಡಿಲು ಬಡಿದು 1 ಲಕ್ಷ ರೂ. ಹಾನಿ ಸಂಭವಿಸಿದೆ. ಕುಂದಾಪುರದಲ್ಲಿ 10.8 ಲಕ್ಷ ರೂ. ಮೌಲ್ಯದ ವಿದ್ಯುತ್ ಸಾಮಗ್ರಿಗಳಿಗೆ ಹಾನಿಯಾಗಿದೆ. 20 ಕಂಬಗಳು, 12 ಟ್ರಾನ್ಸ್‌ಫಾರ್ಮರ್, 0.66 ಕಿ.ಮೀ ವಿದ್ಯುತ್ ಲೈನ್‌ಗಳಿಗೆ ಹಾನಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts