More

    ಕರಾವಳಿ, ಮಲೆನಾಡಲ್ಲಿ ಮಳೆ ಅಬ್ಬರ

    ಕಾರವಾರ: ಜಿಲ್ಲೆಯ ಕರಾವಳಿ ಹಾಗೂ ಮಲೆನಾಡಿನಲ್ಲಿ ಬುಧವಾರ ಭಾರಿ ಮಳೆಯಾಗಿದೆ. ಹಳ್ಳ, ನದಿಗಳಲ್ಲಿ ಕೆನ್ನೀರು ತುಂಬಿ ಹರಿಯಲಾರಂಭಿಸಿದೆ. ಲಘು ಗಾಳಿಯೊಂದಿಗೆ ಮಳೆಯಾಗುತ್ತಿರುವುದರಿಂದ ವಿವಿಧೆಡೆ ರಸ್ತೆ, ವಿದ್ಯುತ್ ಮಾರ್ಗ ಹಾಗೂ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ಕಾರವಾರದಲ್ಲಿ ಕೆಲ ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವೆಡೆ ರಸ್ತೆಗಳಲ್ಲಿ ನೀರು ತುಂಬಿ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಜೂನ್ 18ರವರೆಗೆ ಕೆಲವೆಡೆ 115 ಮಿಮೀವರೆಗೂ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
    ಮಳೆಯ ಪ್ರಮಾಣ: ಬುಧವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಅಂಕೋಲಾದಲ್ಲಿ 94.2, ಭಟ್ಕಳ-52.8, ಹಳಿಯಾಳ-62.2, ಹೊನ್ನಾವರ-106.9, ಕಾರವಾರ-107.1, ಕುಮಟಾ-44.2, ಮುಂಡಗೋಡ-34.4, ಸಿದ್ದಾಪುರ-108.6, ಶಿರಸಿ-105, ಜೊಯಿಡಾ-88.4, ಯಲ್ಲಾಪುರದಲ್ಲಿ 74.6 ಮಿಮೀ ಮಳೆಯಾಗಿದೆ.
    ಶಿರವಾಡದಲ್ಲಿ ಕೃತಕ ನೆರೆ: ಶಿರವಾಡ-ಕಡವಾಡ ನಡುವೆ ಇರುವ ಮಕೇರಿ ಸೇತುವೆ ನಿರ್ಮಾಣ ಕಾರ್ಯ ನಡೆದಿದೆ. ಅದಕ್ಕಾಗಿ ಹಳ್ಳಕ್ಕೆ ಅಡ್ಡಲಾಗಿ ಮಣ್ಣು ತುಂಬಿ ಸಣ್ಣ ಪೈಪ್ ಹಾಕಿ ನೀರು ಹರಿದು ಹೋಗಲು ಅವಕಾಶ ಮಾಡಿಕೊಡಲಾಗಿತ್ತು. ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಗುಡ್ಡದಿಂದ ಭಾರಿ ನೀರು ಹರಿದು ಬಂದಿದ್ದು, ಹಳ್ಳದಲ್ಲಿ ನೀರು ಕಟ್ಟಿ ನಿಂತಿತ್ತು. ಹಳ್ಳದ ಇಕ್ಕೆಲಗಳಲ್ಲಿದ್ದ ಶಿರವಾಡ ಗ್ರಾಪಂನ ಪೇಲೆವಾಡ, ದೇವತಿವಾಡದಲ್ಲಿ ಕೃತಕ ನೆರೆ ಸೃಷ್ಟಿಯಾಯಿತು. ತಗ್ಗು ಪ್ರದೇಶದಲ್ಲಿದ್ದ ಕೆಲ ಮನೆಗಳಿಗೆ ನೀರು ತುಂಬಲಾರಂಭಿಸಿತ್ತು. ಬುಧವಾರ ಬೆಳಗ್ಗೆ ತಹಸೀಲ್ದಾರ್ ಎನ್.ಎಫ್. ನರೋನಾ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ನಂತರ ಹಳ್ಳದಲ್ಲಿ ಹಾಕಲಾಗಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವು ಮಾಡಿಕೊಡಲಾಯಿತು.
    ನೀರು ಬಿಡುವ ಮುನ್ಸೂಚನೆ: 34.50 ಮೀಟರ್ ಎತ್ತರವಿರುವ ಕದ್ರಾ ಜಲಾಶಯಕ್ಕೆ 10,317 ಕ್ಯೂಸೆಕ್ ನೀರಿನ ಒಳಹರಿವಿದೆ. ಸದ್ಯ 30.60 ಮೀಟರ್ ನೀರು ಸಂಗ್ರಹವಾಗಿದೆ. ನೀರಿನ ಮಟ್ಟ 32.50 ಮೀಟರ್ ತಲುಪುತ್ತಿದ್ದಂತೆಯೇ ನೀರನ್ನು ಹೊರ ಬಿಡಲಾಗುವುದು. ಇದರಿಂದ ಕಾಳಿ ನದಿಯ ಇಕ್ಕೆಲಗಳಲ್ಲಿರುವ ನಾಗರಿಕರು ಎಚ್ಚರಿಕೆಯಿಂದ ಇರಬೇಕು ಎಂದು ಕೆಪಿಸಿ ಮೊದಲ ಮುನ್ನೆಚ್ಚರಿಕೆ ಮುನ್ಸೂಚನೆಯನ್ನು ಬುಧವಾರ ಹೊರಡಿಸಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts