More

    ಸಿಲಿಕಾನ್ ಸಿಟಿಯಲ್ಲಿ ಇನ್ನೂ ಮೂರು ದಿನ ಇರಲಿದೆ ಮಳೆ: ಗುರುವಾರ ಮುಸ್ಸಂಜೆ ಒಂದೂವರೆ ಗಂಟೆ ಸುರಿದ ವರುಣ

    ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜಧಾನಿಯ ವಿವಿಧೆಡೆ ಗುರುವಾರ ಧಾರಾಕಾರ ಮಳೆಯಾಗಿದೆ. ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ ಇತ್ತು. ಸಂಜೆ ವೇಳೆ ಒಂದೂವರೆ ಗಂಟೆ ಜೋರು ಮಳೆ ಸುರಿದಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದರಿಂದ ಮನೆಯ ನಿವಾಸಿಗಳು ಪರದಾಡಿದರು.

    ಮಾರುತಿ ಮಂದಿರದಲ್ಲಿ 23.5 ಮಿ.ಮೀ., ನಾಗರಬಾವಿ ಯಲ್ಲಿ 28, ಕುಮಾರಸ್ವಾಮಿ ಲೇಔಟ್​ನಲ್ಲಿ 18, ಕಾಟನ್​ಪೇಟೆಯಲ್ಲಿ 13.5, ಅಗ್ರಹಾರ ದಾಸರಹಳ್ಳಿಯಲ್ಲಿ 17, ನಾಯಂಡಹಳ್ಳಿಯಲ್ಲಿ 16.5, ಬಸವೇಶ್ವರನಗರದಲ್ಲಿ 11.5, ರಾಜಮಹಲ್ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ 11, ಹಂಪಿನಗರದಲ್ಲಿ 12, ಯಲಹಂಕದಲ್ಲಿ 12 ಮತ್ತು ವಿದ್ಯಾಪೀಠದಲ್ಲಿ 11 ಮಿ.ಮೀ. ಮಳೆಯಾಗಿದೆ. ಕೆಂಗೇರಿ, ಜಯನಗರ, ಜೆ.ಪಿ. ನಗರ, ಯಶವಂತಪುರ, ಮಲ್ಲೇಶ್ವರ, ಬಸವನಗುಡಿ ಸೇರಿ ಹಲವೆಡೆ ಉತ್ತಮ ಮಳೆಯಾಗಿದೆ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ.

    ಬಸ್ ಮೇಲೆ ಬಿದ್ದ ಕಬ್ಬಿಣದ ಕಂಬಿಗಳು: ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಲ್ಲಿ ಮಳೆ, ಗಾಳಿಯ ರಭಸಕ್ಕೆ ಮೆಟ್ರೋ ಕಂಬ ಕಾಮಗಾರಿಗೆ ನಿಲ್ಲಿಸಲಾಗಿದ್ದ ಕಬ್ಬಿಣದ ಕಂಬಿಗಳು ವಾಲಿಕೊಂಡು ಸಂಚರಿಸುತ್ತಿದ್ದ ಬಸ್ ಮೇಲೆ ಬಿದ್ದಿವೆ. ಹಾರೋಹಳ್ಳಿಯಿಂದ ಬೆಂಗಳೂರಿನತ್ತ ಬರುತ್ತಿದ್ದ ಖಾಸಗಿ ಬಸ್​ನಲ್ಲಿ 25 ಜನರಿದ್ದು, ಯಾವುದೇ ಅಪಾಯವಾಗಿಲ್ಲ. ಹುಳಿಮಾವು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

    13ರವರೆಗೆ ಮುಂದುವರಿಯುತ್ತೆ…: ಕರೊನಾ ಆತಂಕ ಹೆಚ್ಚುತ್ತಿರುವ ಬೆನ್ನಲ್ಲೇ ಮಳೆ ಆರ್ಭಟವೂ ಶುರುವಾಗಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಏಪ್ರಿಲ್ 13ರವರೆಗೆ ಹೀಗೆಯೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಉತ್ತರ ಒಳನಾಡಿಗಿಂತ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಹೆಚ್ಚು ಮಳೆಯಾಗಲಿದೆ. ಅಕಾಲಿಕ ಮಳೆಯಿಂದ ಕೆಲವೆಡೆ ಬೆಳೆ ಹಾನಿಯಾಗಿದೆ.

    ಶಿವಾಜಿನಗರದಲ್ಲಿ ಬಿದ್ದ ಮರ: ಶಿವಾಜಿನಗರ ಠಾಣೆ ಬಳಿ ಗಾಳಿ- ಮಳೆಗೆ ಮರ ಬಿದ್ದಿದೆ. ಕಾರ್ಡ್ ರಸ್ತೆ, ರಾಜಾಜಿನಗರ, ಗಾಂಧಿನಗರದ ಪೊತೀಸ್ ಮಳಿಗೆ ಬಳಿ ಹಾಗೂ ಗಣೇಶ ಮಂದಿರದ ಬಳಿ ಮರದ ಕೊಂಬೆ ಮುರಿದು ಬಿದ್ದಿದ್ದವು. ಜ್ಞಾನಭಾರತಿ ಕ್ಯಾಂಪಸ್ ಮುಂಭಾಗದ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಕೆಲ ವೇಳೆ ಸಂಚಾರಕ್ಕೆ ತೊಂದರೆಯಾಯಿತು.

    ಭಾರತದಂತೆ ಪಾಕಿಸ್ತಾನದಲ್ಲೂ ತಬ್ಲಿಘಿ ಜಮಾತ್ ಆತಂಕ ಶುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts