More

    ಕುಸಿಯುತ್ತಿದೆ ಕೋಟೆ ಗೋಡೆ: ಶ್ರೀರಂಗಪಟ್ಟಣದಲ್ಲಿ ನಿರಂತರ ಮಳೆಗೆ ಶಿಥಿಲ

    ಶ್ರೀರಂಗಪಟ್ಟಣ: ಕೋಟೆ ಕೊತ್ತಲಗಳಿಂದ ವಿಶ್ವವಿಖ್ಯಾತಿ ಹೊಂದಿರುವ ಪಾರಂಪರಿಕ ಶ್ರೀರಂಗಪಟ್ಟಣ ಸುತ್ತಲಿನ ಕೋಟೆ ಹಂತ ಹಂತವಾಗಿ ಕುಸಿಯುತ್ತಿದ್ದು, ಅಕ್ಷರಶಃ ಪಾಳುಬಿದ್ದ ಪಟ್ಟಣವಾಗುತ್ತಿದೆ.
    ಹೊಯ್ಸಳರು, ವಿಜಯನಗರ ಸಾಮಂತ ಅರಸರಿಂದ ಪ್ರಾರಂಭವಾಗಿ ಮೈಸೂರು ಮಹಾರಾಜರು, ಹೈದರ್-ಟಿಪ್ಪು ಸುಲ್ತಾನರ ಆಳ್ವಿಕೆ ಕಂಡು ಫ್ರೆಂಚರಿಂದ ಅತ್ಯಾಧುನಿಕ ಶೈಲಿಯಲ್ಲಿ ಅಭಿವೃದ್ಧಿಗೊಂಡಿದ್ದ ಪಟ್ಟಣ ಸುತ್ತಲ ಕೋಟೆ, ಆಂಗ್ಲೋ-ಮೈಸೂರು ರಣ ಕದನಕ್ಕೂ ಕದಲದೆ ರಕ್ಷಣೆ ಒದಗಿಸಿದ್ದು, ಬಳಿಕ ಬ್ರಿಟಿಷರ ಆಳ್ವಿಕೆ ಕಾಲದಲ್ಲೂ ತನ್ನ ಕಾರ್ಯವನ್ನು ಸುಸ್ಥಿರವಾಗಿ ಮುಂದುವರಿಸಿಕೊಂಡು ಬಂದಿತ್ತು.
    ಆದರೆ ಸ್ವಾತಂತ್ರ್ಯ ಬಳಿಕ ಸ್ಥಳೀಯರ ಒತ್ತುವರಿ, ಸಂಬಂಧಪಟ್ಟ ಇಲಾಖೆ ನಿರ್ಲಕ್ಷದೊಂದಿಗೆ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ಇದೀಗ ಕುಸಿಯಲು ಆರಂಭಿಸಿದೆ.
    ಕುಸಿದಿರುವ ಸ್ಥಳಗಳು: ಶ್ರೀರಂಗಪಟ್ಟಣಕ್ಕೆ ಪ್ರಮುಖವಾಗಿ ಒಳಪ್ರವೇಶಿಸುವ ದ್ವಾರಗಳ (ಮೀರ್ ಸಾದಿಕ್ ಮೃತಪಟ್ಟ ಸ್ಥಳ) ಮಧ್ಯೆ ಹಿಮ್ಮುಖವಾಗಿ ಸುಮಾರು 40 ಅಡಿ ಉದ್ದ, ಪಟ್ಟಣ ಪುರಸಭೆ ಪಕ್ಕದ ಎತ್ತರದ ವೀಕ್ಷಣಾ ಗೋಪುರ, ರ‌್ಯಾಂಫೋರ್ಟ್ ರಸ್ತೆಯ ಬತ್ತೇರಿ ಮುಂಭಾಗದಲ್ಲಿ 2 ಕಡೆ 70 ಅಡಿ ಉದ್ದ, ಆರ್‌ಎಂಸಿ ಚೆಕ್‌ಪೋಸ್ಟ್ ರಸ್ತೆಯ ಧ್ವನಿ ಮತ್ತು ಬೆಳಕು ಕೇಂದ್ರದ ಬಳಿ ಸುಮಾರು 60 ಅಡಿ ಉದ್ದ, ಆನೆ ಕೋಟೆ ಬಾಗಿಲು ಬಳಿ 50 ಅಡಿ, ಶಂಭುಲಿಂಗಯ್ಯನ ಕಟ್ಟೆ ಬಳಿ 50 ಅಡಿ, ರೈಲು ನಿಲ್ದಾಣದ ಶ್ರೀ ಶನೈಶ್ಚರ ದೇವಾಲಯದ ಹಿಂಭಾಗ 40 ಅಡಿ, ಜಿ.ಬಿ.ಹೊಳೆಯ ಪ್ರವೇಶದ್ವಾರ ಹಾಗೂ ಕಾವೇರಿ ನದಿ ತೀರದ ಆಂಜನೇಯಸ್ವಾಮಿ ದೇವಾಲಯದ ಮೇಲ್ಭಾಗದಲ್ಲಿ 50 ಅಡಿ ಉದ್ದ, ಪಟ್ಟಣದ ಸ್ನಾನಘಟ್ಟದ ಬಳಿ ಎಡಭಾಗಕ್ಕೆ 2 ಕಡೆಗಳಲ್ಲಿ ಸುಮಾರು 70 ಅಡಿ ಹಾಗೂ 80 ಅಡಿ, ಥಾಮಸ್ ಇನ್ ಡಂಜನ್ ಬಳಿಯ ಬಿದ್ದಕೋಟೆ ಗಣೇಶ ದೇವಾಲಯ ಬಳಿ ಸುಮಾರು 60 ಅಡಿ ಉದ್ದ, 30 ಅಡಿ ಎತ್ತರದ ಈ ಬೃಹತ್ ಕೋಟೆಯ ರಕ್ಷಣಾ ತಡೆಗೋಡೆ ದಿಂಡುಕಲ್ಲುಗಳ ಸಮೇತ ಕುಸಿದು ನೆಲಕ್ಕೆ ಉರುಳಿಬಿದ್ದಿವೆ.
    ಇಟ್ಟಿಗೆ, ಕೆಮ್ಮಣ್ಣು, ಬೃಹತ್ ಕಲ್ಲುದಿಂಡು ಹಾಗೂ ಚುರುಕಿ ಗಾರೆಯಿಂದ ನಿರ್ಮಿಸಿರುವ ಪ್ರಬಲ ಕೋಟೆ ಮತ್ತು ಕೋಟೆಯ ಮೇಲ್ಭಾಗದಲ್ಲಿ ಜೋಂಡಿನ ಅಂಬು, ಮುಳ್ಳಿನ ಗಿಡಗಂಟಿಗಳು ಹಾಗೂ ದೊಡ್ಡ ಮರಗಳು ಬೆಳೆದು ಬೃಹತ್ ಬೇರುಗಳನ್ನು ಹರಡಿರುವ ಪರಿಣಾಮ ಬಿರುಕು ಬಿಟ್ಟು ಶಿಥಿಲಗೊಂಡ ಕೋಟೆ ಮಳೆ ನೀರಿನಿಂದ ಉಂಟಾದ ಶೀತದಿಂದ ಮಣ್ಣು ಸಮೇತ ನಿರಂತರವಾಗಿ ಕುಸಿದು ಬೀಳುತ್ತಿದೆ.
    ಕಳಪೆ ಕಾಮಗಾರಿ: 2017-18ರಲ್ಲಿ ಸುರಿದ ಭಾರಿ ಮಳೆಯಿಂದ ಈ ಕಂದಕದ ಗೋಡೆಗಳು ಕುಸಿತ ಕಂಡಿದ್ದು, ಮಾಧ್ಯಮ ವರದಿಗಳ ಬಳಿಕ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ದುರಸ್ತಿಗಾಗಿ ಕೋಟ್ಯಂತರ ರೂ. ಬಿಡುಗಡೆ ಮಾಡಿ ಕಾಮಗಾರಿ ನಡೆಸಿ ಸುಣ್ಣ-ಬಣ್ಣ ಬಳಿಯಲಾಗಿತ್ತು. ಆದರೆ ಈ ಕಾಮಗಾರಿ ನಡೆದ ಎರಡು-ಮೂರು ವರ್ಷಗಳಲ್ಲೇ ತಡೆಗೋಡೆ ಪುನಃ ಕುಸಿದು ಬಿದ್ದಿವೆ. ಇದಕ್ಕೆ ಕಾರಣ ಕಳಪೆ ವಸ್ತುಗಳನ್ನು ಬಳಸಿ ನಿರ್ಮಿಸಿರುವುದೆಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts