More

    2 ದಿನ ಉತ್ತಮ ಮಳೆ ಸಾಧ್ಯತೆ,  ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್

    ಮಂಗಳೂರು/ಉಡುಪಿ: ಹವಾಮಾನ ಇಲಾಖೆ ಕರಾವಳಿಯಲ್ಲಿ ಜೂನ್ 3ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಗುಡುಗು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

    ಮುಂಗಾರು ವಿಳಂಬದಿಂದಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆ ಇನ್ನೂ ತೀವ್ರತೆ ಪಡೆದಿಲ್ಲ. ಸೋಮವಾರ ತಡರಾತ್ರಿ ಉತ್ತಮ ಮಳೆಯಾಗಿದ್ದು, ಮಂಗಳವಾರ ವಿವಿಧೆಡೆ ಸಾಧಾರಣದಿಂದ ಉತ್ತಮ ಮಳೆ ಸುರಿದಿದೆ.

    ಬೆಳ್ತಂಗಡಿ, ಕಡಬ ತಾಲೂಕಿನ ಹಲವೆಡೆ ಬೆಳಗ್ಗಿನಿಂದಲೇ ಮಳೆ ಸುರಿದಿದೆ. ಇತರೆಡೆ ಬಿಟ್ಟು ಬಿಟ್ಟು ಮಳೆಯಾಗಿದ್ದು, ಸಾಯಂಕಾಲದ ಬಳಿಕ ಸ್ವಲ್ಪ ಹೆಚ್ಚಾಗಿದೆ. ಮಂಗಳೂರು ನಗರ, ಹೊರ ವಲಯದಲ್ಲಿ ಬಿಸಿಲಿನ ವಾತಾವರಣವಿತ್ತು. ಸಾಯಂಕಾಲ ವೇಳೆಗೆ ಸಾಧಾರಣ ಮಳೆಯಾಗಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ನಗರದ ಕದ್ರಿ ಬಳಿ ರಸ್ತೆ ಕುಸಿತವಾಗಿದ್ದು, ಮಂಗಳವಾರ ಬೆಳಗ್ಗೆ ಶಾಸಕ ವೇದವ್ಯಾಸ ಕಾಮತ್, ಸ್ಥಳೀಯ ಪಾಲಿಕೆ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.
    ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಬೆಳಗ್ಗೆಯಿಂದ ಮಧ್ಯಾಹ್ನವರೆಗೂ ಬಿಟ್ಟುಬಿಟ್ಟು ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ಬಳಿಕ ಬಿಸಿಲು ಕಾಣಿಸಿಕೊಂಡಿದ್ದು, ಸಾಯಂಕಾಲ ಬಿಟ್ಟುಬಿಟ್ಟು ಮಳೆ ಸುರಿದಿದೆ.
    ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 30.8 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ಭರ್ಜರಿ ಪೂರ್ವ ಮುಂಗಾರು: ಮಾ.1ರಿಂದ ಮೇ 31ರವರೆಗಿನ ಈ ಬಾರಿಯ ಪೂರ್ವ ಮುಂಗಾರು ಅವಧಿಯಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಿದೆ. ದ.ಕ ಜಿಲ್ಲೆಯಲ್ಲಿ 536.1 ಮಿ.ಮೀ(ವಾಡಿಕೆ 236.6 ಮಿ.ಮೀ) ಮಳೆಯಾಗಿದ್ದು, ಇದು ವಾಡಿಕೆಗಿಂತ ಶೇ.127ರಷ್ಟು ಹೆಚ್ಚು. ಉಡುಪಿ ಜಿಲ್ಲೆಯಲ್ಲಿ 501.4 ಮಿ.ಮೀ. (ವಾಡಿಕೆ ಮಳೆ 198.8 ಮಿ.ಮೀ) ಮಳೆಯಾಗಿದೆ. ಅಂದರೆ ಶೇ.152ರಷ್ಟು ಹೆಚ್ಚು ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಅಂಕಿ ಅಂಶ ತಿಳಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts