More

    ‘ಲೆವಲ್ ಕ್ರಾಸಿಂಗ್‌ಮುಕ್ತ ನಗರ’ದತ್ತ ರೈಲ್ವೆ ಹೆಜ್ಜೆ: ‘ಕೆ-ರೈಡ್’ ಜಾರಿ

    ಬೆಂಗಳೂರು: ಬೆಂಗಳೂರು ಮಹಾನಗರವನ್ನು ‘ಲೆವಲ್ ಕ್ರಾಸಿಂಗ್‌ಮುಕ್ತ ನಗರ’ವಾಗಿಸಲು ಭಾರತೀಯ ರೈಲ್ವೆ ಇಲಾಖೆ ರೂಪಿಸಿರುವ ಯೋಜನೆಯನ್ನು ಸಾಕಾರಗೊಳಿಸುವತ್ತ ಕರ್ನಾಟಕ ರೈಲು ಮೂಲಸೌಕರ್ಯ ಕಂಪನಿ (ಕೆ-ರೈಡ್) ಚಿತ್ತ ಹರಿಸಿದೆ.

    ರಾಜಧಾನಿಯ ಭೂಮೇಲ್ಮೈ ರಚನೆ ಏರುತಗ್ಗುನಿಂದ ಕೂಡಿದ್ದು, ರೈಲ್ವೆ ಹಳಿಗಳನ್ನು ನೇರವಾಗಿ ನಿರ್ಮಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಸರಾಗವಾಗಿ ರೈಲು ಸಾಗಲು ಹಲವೆಡೆ ಲೆವೆಲ್ ಕ್ರಾಸಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಜನ ಹಾಗೂ ವಾಹನ ದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಮೇಲ್ಸೇತುವೆ, ಕೆಳಸೇತುವೆ ನಿರ್ಮಿಸಿದ್ದರೂ, ಇನ್ನೂ ಕೆಲವೆಡೆ ರೈಲ್ವೆ ಸಿಬ್ಬಂದಿ ಲೆವಲ್ ಕ್ರಾಸಿಂಗ್‌ಗಳಲ್ಲಿ ರೈಲು ಬಂದಾಗ ಗೇಟ್ ಹಾಕಿ ತೆಗೆಯುವ ಕಾಯಕ ಮಾಡುತ್ತಿದ್ದಾರೆ. ಇದರಿಂದ ರೈಲು ಹಾದುಹೋಗುವ ವೇಳೆ ರಸ್ತೆಯ ಎರಡೂ ಬದಿ ವಾಹನಗಳ ಸಾಲು ನಿಂತಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದೆ.

    ನಗರದೊಳಗಿರುವ ಇಂತಹ ಲೆವಲ್ ಕ್ರಾಸಿಂಗ್‌ಗಳಲ್ಲಿ ಸಂಚಾರ ದಟ್ಟಣೆ ನೀಗಿಸಿ ಬದಲಿ ವ್ಯವಸ್ಥೆ ಕೈಗೊಳ್ಳಲು ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರ ಸಹಮತ ವ್ಯಕ್ತವಾಗಿದ್ದರೂ, ಅದಿನ್ನೂ ಸಾಕಾರವಾಗಿಲ್ಲ. ಈ ಸ್ಥಳಗಳಲ್ಲಿ ಮೇಲ್ಸೇತುವೆ, ಕೆಳಸೇತುವೆ ನಿರ್ಮಿಸಲು ದೊಡ್ಡ ಮೊತ್ತ ವ್ಯಯವಾಗುತ್ತದೆ. ಇದಕ್ಕೆ ತಗಲುವ ವೆಚ್ಚವನ್ನು ಒಂದೇ ಬಾರಿ ಭರಿಸಲು ರೈಲ್ವೆ ಒಪ್ಪಿಗೆ ಸೂಚಿಸದ ಕಾರಣ ಪ್ರಮುಖ ಸ್ಥಳಗಳಲ್ಲಿ ತ್ವರಿತವಾಗಿ ಕಾಮಗಾರಿ ಕೈಗೊಳ್ಳಲು ಶೇ.50 ಹಣ ಭರಿಸುವ ವಾಗ್ದಾನವನ್ನು ರಾಜ್ಯ ಸರ್ಕಾರ ನೀಡಿದೆ. ಕೆಲವೆಡೆ ತನ್ನ ಪಾಲಿನ ಹಣವನ್ನು ಬಿಡುಗಡೆ ಮಾಡಿದ್ದರೂ, ಸಂಚಾರ ದಟ್ಟಣೆ ಕಾರಣದಿಂದ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ.

    ಹಳಿ ಎತ್ತರಿಸಲು ನಿರ್ಧಾರ:

    ಪ್ರಸ್ತುತ ಮಹಾನಗರದಲ್ಲಿ 26 ಕಡೆ ಲೆವೆಲ್ ಕ್ರಾಸಿಂಗ್‌ಗಳಿವೆ (2018ರಲ್ಲಿ 36 ಸಂಖ್ಯೆಯಷ್ಟಿತ್ತು). ಇವುಗಳಲ್ಲಿ ಹೆಚ್ಚಿನವು ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಜಾರಿಯಾಗುತ್ತಿರುವ ಪ್ರದೇಶಗಳಲ್ಲಿವೆ. ಇಲ್ಲೆಲ್ಲಾ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದ್ದರೆ ಹೆಚ್ಚುವರಿ ಹಣ ವೆಚ್ಚವಾಗಲಿದೆ. ಜತೆಗೆ ಭೂಸ್ವಾಧೀನ ವೆಚ್ಚವೂ ಕಾಮಗಾರಿ ಮೊತ್ತವನ್ನು ಮತ್ತಷ್ಟು ಹಿಗ್ಗಿಸುತ್ತದೆ. ಕೆಲ ವರ್ಷಗಳ ಹಿಂದೆ ಯಲಹಂಕ ಬಳಿಯ ಕೊಡಿಗೇಹಳ್ಳಿ ಲೆವಲ್ ಕ್ರಾಸಿಂಗ್ ಬಳಿ ರೈಲ್ವೆ ಕೆಳಸೇತುವೆಯನ್ನು 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಆಲೋಚಿಸಲಾಗಿತ್ತು. ಆದರೆ, ಭೂಸ್ವಾಧೀನ ಕಾರಣದಿಂದ 30 ಕೋಟಿ ರೂ.ಗೂ ಹೆಚ್ಚಿನ ಮೊತ್ತ ಖರ್ಚಾಗಿತ್ತು. ಈ ಹೊರೆಯನ್ನು ಭರಿಸಲು ರೈಲ್ವೆ ಮುಂದಾಗದ ಕಾರಣ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ತನ್ನ ಬೊಕ್ಕಸದಿಂದಲೇ ಭರಿಸುವುದು ಅನಿವಾರ್ಯವಾಗಿದೆ.

    10 ಸ್ಥಳಗಳಲ್ಲಿ ಪರಿಹಾರಕ್ಕೆ ಒಲವು:

    ಇದೀಗ ಬಿಎಸ್‌ಆರ್‌ಪಿ ಜಾರಿಯ ಹೊಣೆ ಹೊತ್ತಿರುವ ಕೆ-ರೈಡ್, ಹೊಸ ಮಾರ್ಗ ಹಾದುಹೋಗುವ ಸ್ಥಳಗಳಲ್ಲಿ ಮೇಲ್ಸೇತುವೆ/ಕೆಳಸೇತುವೆ ನಿರ್ಮಿಸುವ ವೆಚ್ಚವನ್ನು ತಗ್ಗಿಸಲು ಉಪಾಯವೊಂದನ್ನು ಹುಡುಕಿದೆ. ಅದೇನೆಂದರೆ ಆರ್‌ಒಬಿ, ಆರ್‌ಯುಬಿ ನಿರ್ಮಿಸುವ ಬದಲು ಇಡೀ ಹಳಿ ಅಳವಡಿಸುವ ಮಾರ್ಗವನ್ನೇ ಎತ್ತರಿಸಲು ಮುಂದಾಗಿದೆ. ಇದರಿಂದ ಭೂಸ್ವಾಧೀನ ವೆಚ್ಚ ಸಮಸ್ಯೆಯಾಗದು. ಹೊಸದಾಗಿ ಮಾರ್ಗ ನಿರ್ಮಿಸುತ್ತಿರುವ ಕಾರಣ ಈ ಕಾರ್ಯ ಪೂರ್ಣಗೊಂಡ ಬಳಿಕವೇ ರೈಲು ಓಡಿಸುವ ಉದ್ದೇಶಿರುವ ಕಾರಣ ಕಾಮಗಾರಿ ಕೈಗೊಳ್ಳಲು ಯಾವುದೇ ಅಡ್ಡಿ ಇರದು. ಈ ಹೊಸ ಐಡಿಯಾ ಅನ್ವಯ ಮೊದಲ ಹಂತದಲ್ಲಿ 10 ಲೆವೆಲ್ ಕ್ರಾಸಿಂಗ್‌ಗಳಲ್ಲಿ ಪರಿಹಾರ ಕಂಡುಕೊಳ್ಳಲಾಗುತ್ತದೆ. ನಂತದಲ್ಲಿ ಇತರ ಸ್ಥಳಗಳಲ್ಲಿ ಕೆಲಸ ಕೈಗೆತ್ತಿಕೊಳ್ಳಲಿದ್ದು, ಕೆಲವನ್ನು ರೈಲ್ವೆ ಇಲಾಖೆ ಜಾರಿ ಮಾಡುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts