More

    ರೈಲ್ವೆ ಕೆಳಸೇತುವೆ ನಿರ್ಮಾಣ ಶೀಘ್ರ: ಸ್ಥಳ ಪರಿಶೀಲಿಸಿದ ಸಂಸದೆ ಸುಮಲತಾ

    ಮಂಡ್ಯ: ಹಲವು ವರ್ಷದಿಂದ ನನೆಗುದಿಗೆ ಬಿದ್ದಿರುವ ಮಹಾವೀರ ವೃತ್ತದಿಂದ ಪೇಟೆಬೀದಿಗೆ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿರುವ ರೈಲು ಹಳಿಗೆ ಕೆಳಸೇತುವೆ ಎಲ್‌ಸಿ-73 ನಿರ್ಮಾಣ ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸಂಸದೆ ಸುಮಲತಾ ಅಂಬರೀಷ್ ಅವರು ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಸ್ಥಳ ಪರಿಶೀಲಿಸಿದರು.
    ಸದ್ಯದ ಮಾಹಿತಿ ಪ್ರಕಾರ ನ.9ರಿಂದ ವಂದೇ ಮಾತರಂ ಎಕ್ಸ್‌ಪ್ರೆಸ್ ರೈಲು ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚಾರ ನಡೆಸಲಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈಲಿನ ಸಂಚಾರ ಪ್ರಾರಂಭವಾದರೆ ಮಾರ್ಗಕ್ಕೆ ಸಂಬಂಧಿಸಿದಂತೆ ಎಲ್ಲ ಕಡೆಯೂ ಅರ್ಧ ಗಂಟೆ ಅಥವಾ 20 ನಿಮಿಷ ಮುಂಚಿತವಾಗಿ ಗೇಟ್ ಬಂದ್ ಮಾಡಬೇಕಾಗುತ್ತದೆ. ಪರಿಣಾಮ ಸಾರ್ವಜನಿಕರಿಗೆ ಸಮಸ್ಯೆಯಾಗಲಿದೆ ಹಾಗೂ ಸಂಚಾರದ ವೇಳೆ ಸಾರ್ವಜನಿಕರು ಅಡ್ಡಾಡಿದರೆ ತೊಂದರೆಯಾಗಲಿದೆ ಎನ್ನುವ ಕಾರಣಕ್ಕೆ ಮಹಾವೀರ ವೃತ್ತದಿಂದ ಪೇಟೆಬೀದಿಗೆ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿರುವ ರೈಲು ಹಳಿಗೆ ಕೆಳಸೇತುವೆ ನಿರ್ಮಾಣ ಮಾಡಲಾಗುತ್ತಿದೆ.
    ಸುಮಾರು 10ರಿಂದ 12 ವರ್ಷದಿಂದ ಈ ಮಾರ್ಗದಲ್ಲಿ ಸೇತುವೆ ನಿರ್ಮಾಣ ಮಾಡಬೇಕೆನ್ನುವ ಯೋಜನೆ ಇದೆ. ಇದಕ್ಕಾಗಿ 10 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಆದರೆ ಕಾರಣಾಂತರಗಳಿಂದ ಟೆಂಡರ್ ಹಂತಕ್ಕೆ ಹೋಗಿ ರದ್ದಾಗುತ್ತಿತ್ತು. ಇದೀಗ ಕಾಮಗಾರಿಗೆ ಚಾಲನೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸದೆ ಸುಮಲತಾ ಅವರು ಸ್ಥಳ ಪರಿಶೀಲನೆ ನಡೆಸಿದರು. ಜತೆಗೆ ರೈಲ್ವೆ, ನಗರಸಭೆ ಹಾಗೂ ಸ್ಥಳೀಯರೊಂದಿಗೆ ಕಾಮಗಾರಿಯ ಬಗ್ಗೆ ಮಾತುಕತೆ ನಡೆಸಿದರು.
    ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಜಿಲ್ಲಾಡಳಿತ ಹಾಗೂ ನಗರಸಭೆ ಅನುಮತಿ ನೀಡುತ್ತಿದ್ದಂತೆ ಕಾಮಗಾರಿ ಪ್ರಾರಂಭವಾಗಲಿದೆ. ಅಂತೆಯೆ, ಎಲ್ಲವೂ ಅಂದುಕೊಂಡಂತಾದರೆ ಮೂರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
    ರೈಲ್ವೆ ಚೀಫ್ ಇಂಜಿನಿಯರ್ ಪ್ರಭು, ತಹಸೀಲ್ದಾರ್ ಕುಂಞ ಅಹಮದ್, ನಗರಸಭೆ ಆಯುಕ್ತ ಮಂಜುನಾಥ್, ಇಂಜಿನಿಯರ್ ರವಿಕುಮಾರ್, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ ಅಧ್ಯಕ್ಷ ಪ್ರಭಾಕರ್, ವಿಭಾಗೀಯ ರೈಲ್ವೆ ಗ್ರಾಹಕರ ಸಂರಕ್ಷಣಾ ಸಮಿತಿ ಸದಸ್ಯ ಶಿವಪ್ರಕಾಶ್, ಹನಕೆರೆ ಶಶಿಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts