More

    ಗೆದ್ದು ಬೀಗಿದ ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಬಯ್ಯಪುರ

    ರಾಯಚೂರು: ರಾಯಚೂರು-ಕೊಪ್ಪಳ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಬಯ್ಯಪುರ ಗೆಲುವು ಸಾಧಿಸಿದ್ದು, ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.

    ಗೆದ್ದು ಬೀಗಿದ ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಬಯ್ಯಪುರ
    ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಬಯ್ಯಪುರ.

    ನಗರದ ಎಸ್‌ಆರ್‌ಪಿಎಸ್ ಪಿಯು ಕಾಲೇಜಿನಲ್ಲಿ ಮಂಗಳವಾರ ಜರುಗಿದ ಮತ ಎಣಿಕೆಯಲ್ಲಿ ಆರಂಭದಿಂದಲೂ ಶರಣಗೌಡ ಬಯ್ಯಪುರ ಮುನ್ನಡೆ ಸಾಧಿಸಿದ್ದರು. ಅರ್ಧದಷ್ಟು ಮತಗಳ ಎಣಿಕೆ ಮುಗಿದಾಗ ಮುನ್ನಡೆ ಅಂತರ 100 ರಿಂದ 150ರ ವರೆಗೆ ಇದ್ದರಿಂದ ಅಭ್ಯರ್ಥಿಗಳಲ್ಲಿ ಕೊನೆವರೆಗೂ ಆತಂಕ ಮನೆ ಮಾಡಿತ್ತು. ಕೊನೆಗೆ ಕಾಂಗ್ರೆಸ್‌ನ ಶರಣಗೌಡ ಬಯ್ಯಪುರ 427 ಮತಗಳ ಅಂತರದಿಂದ ಜಯ ಸಾಧಿಸಿದರು. ಶರಣಗೌಡ 3,369, ವಿಶ್ವನಾಥ 2,942, ಜನಹಿತ ಪಕ್ಷದ ತಿರುಪತಿ 17, ಪಕ್ಷೇತರ ಅಭ್ಯರ್ಥಿ ನರೇಂದ್ರ ಆರ್ಯ 7 ಮತಗಳನ್ನು ಪಡೆದರೆ, 153 ಮತಗಳು ತಿರಸ್ಕೃತಗೊಂಡವು.

    ಒಟ್ಟು 14 ಟೇಬಲ್‌ಗಳಲ್ಲಿ ನಡೆದ ಮತ ಎಣಿಕೆಯಲ್ಲಿ ಮೂರು ಟೇಬಲ್‌ಗಳಲ್ಲಿ ಮಾತ್ರ ಬಿಜೆಪಿಗೆ ಮುನ್ನಡೆ ದೊರೆತಿದ್ದು, ಉಳಿದ 11 ಟೇಬಲ್‌ಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ ದೊರೆತಿದೆ. ಉಭಯ ಜಿಲ್ಲೆಗ ಒಟ್ಟು 6,497 ಮತದಾರರಲ್ಲಿ 6,488 ಜನರು ಮತ ಚಲಾಯಿಸಿದ್ದು, ಎಲ್ಲ ಮತಗಟ್ಟೆಗಳಲ್ಲಿನ ಮತಪತ್ರಗಳನ್ನು ಒಗ್ಗೂಡಿಸಿದ ನಂತರ 14 ಟೇಬಲ್‌ಗಳಲ್ಲಿ ಮತ ಎಣಿಕೆ ಕಾರ್ಯ ನಡೆಸಲಾಯಿತು. ಕೋವಿಡ್ ಹಿನ್ನೆಲೆಯಲ್ಲಿ ಎಣಿಕೆ ಕೇಂದ್ರದೊಳಗೆ ಎಲ್ಲರನ್ನೂ ಸ್ಕ್ರೀನಿಂಗ್ ನಡೆಸಿ ಒಳಗೆ ಬಿಡಲಾಯಿತು.

    ಎಣಿಕೆ ಕಾರ್ಯ ವಿಳಂಬ
    ರಾಜ್ಯದಲ್ಲಿನ ಇತರ ಕ್ಷೇತ್ರಗಳಲ್ಲಿನ ಫಲಿತಾಂಶ ಪ್ರಕಟಗೊಳ್ಳುತ್ತಿದ್ದರೂ ರಾಯಚೂರಿನ ಮತ ಎಣಿಕೆ ಕೇಂದ್ರದಲ್ಲಿ ಎಣಿಕೆ ಕಾರ್ಯ ಆರಂಭವಾಗಿರಲಿಲ್ಲ. ಬೆಳಗ್ಗೆ 8ಕ್ಕೆ ಮತ ಪೆಟ್ಟಿಗೆಗಳನ್ನು ತಂದು ಪರಿಶೀಲಿಸಿ ಒಡೆದು ಮತಪತ್ರಗಳನ್ನು ಒಗ್ಗೂಡಿಸುವ ಕಾರ್ಯ ನಿಧಾನಗತಿಯಲ್ಲಿ ನಡೆದಿದ್ದರಿಂದ ಬೆಳಗ್ಗೆ 11 ಗಂಟೆವರೆಗೆ ಮತಪತ್ರಗಳನ್ನು ಒಗ್ಗೂಡಿಸುವಲ್ಲಿ ಸಮಯ ಕಳೆಯಿತು. ಆ ನಂತರದಲ್ಲಿ ಮತ ಎಣಿಕೆ ಕಾರ್ಯ ನಡೆದಿದ್ದರಿಂದ ಫಲಿತಾಂಶ ಬರುವಲ್ಲಿ ವಿಳಂಬವಾಗುವಂತಾಯಿತು.

    ಪ್ರತಿಜ್ಞಾವಿಧಿ ಬೋಧನೆ
    ಮತ ಎಣಿಕೆಗೆ ಮುನ್ನ ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಮತ್ತು ಏಜೆಂಟರಿಗೆ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಪ್ರತಿಜ್ಞಾವಿಧಿ ಬೋಧಿಸಿದರು. ನಿಷ್ಪಕ್ಷಪಾತವಾಗಿ ಮತ್ತು ಪ್ರಾಮಾಣಿಕತೆಯಿಂದ ಎಣಿಕೆ ಕಾರ್ಯದಲ್ಲಿ ಪಾಲ್ಗೊಳ್ಳುವುದಾಗಿ ಪ್ರತಿಜ್ಞಾವಿಧಿಯನ್ನು ಸಿಬ್ಬಂದಿ ಸ್ವೀಕರಿಸಿದರು. ಹಿಂದಿನ ಚುನಾವಣೆ ಮತ ಎಣಿಕೆಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸದಿದ್ದ ಸಿಬ್ಬಂದಿಗಳಿಗೆ ಇದು ಹೊಸದರಂತೆ ಕಂಡುಬಂದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts