More

    ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸು ಮಾಡಿ

    ರಾಯಚೂರು: ಸಾಮಾಜಿಕ ನ್ಯಾಯ ಕಾಪಾಡುವ ನಿಟ್ಟಿನಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿ ನ.11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ಮಾರೆಪ್ಪ ತಿಳಿಸಿದರು.

    ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಅಧಿಕಾರಕ್ಕೆ ಬಂದ ಪಕ್ಷಗಳು ಈ ಬಗ್ಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷೃ ವಹಿಸುತ್ತಾ ಬಂದಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

    ಜನಸಂಖ್ಯೆಗೆ ಅನುಗುಣವಾಗಿ ಸಂಪತ್ತು, ಅಧಿಕಾರ ಹಂಚಿಕೆಯಾಗಬೇಕೆಂದು ಅಂಬೇಡ್ಕರ್ ಪ್ರತಿಪಾದಿಸುವ ಮೂಲಕ ಮೀಸಲಾತಿಯನ್ನು ಸಂವಿಧಾನದಲ್ಲಿ ಅಳವಡಿಸಿದ್ದರು. ಜನಸಂಖ್ಯೆ ಆಧರಿಸಿ ಮೀಸಲಾತಿ ಹಂಚಿಕೆಗೆ ಸಂವಿಧಾನದ ಪರಿಚ್ಛೇದ 341(3)ಗೆ ತಿದ್ದುಪಡಿ ತರಬೇಕಾಗಿದೆ.

    ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರದ ಸಂವಿಧಾನದ ಪರಿಚ್ಛೇದ 341(3)ಕ್ಕೆ ತಿದ್ದುಪಡಿ ತರಬೇಕು. ತಮಿಳುನಾಡು ಮಾದರಿಯಲ್ಲಿ ಆರುಂಧತಿಯರ್ ಸಮುದಾಯಕ್ಕೆ ಶೇ.2.84 ಮೀಸಲಾತಿ ನೀಡಿದಂತೆ ರಾಜ್ಯ ಸರ್ಕಾರ ತನ್ನ ಅಧಿಕಾರ ಉಪಯೋಗಿಸಿ ಮಾದಿಗ ಸಂಬಂಧಿತ ಜಾತಿಗಳಿಗೆ ಶೇ.6 ಮೀಸಲಾತಿ ನೀಡಬೇಕು.

    ನಾಗಮೋಹನ್‌ದಾಸ್ ಮತ್ತು ಕಾಂತರಾಜ ವರದಿ ಬಹಿರಂಗಪಡಿಸಿ ಯಥಾವತ್ ಜಾರಿ ಮಾಡಬೇಕು. ಎಲ್ಲ ಪಕ್ಷಗಳು ಬಹುಸಂಖ್ಯಾತ ಮಾದಿಗರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು. ರಾಜ್ಯದಲ್ಲಿನ 43 ಸಾವಿರ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು.

    ಹೋರಾಟಗಾರರ ವಿರುದ್ಧ ಹೂಡಿದ ರೌಡಿಶೀಟರ್ ಪ್ರಕರಣ ರದ್ದುಗೊಳಿಸಬೇಕು. ದಲಿತ ಸಂಘಟನೆ ಮುಖಂಡರ ಮೇಲೆ ದಾಖಲಾದ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು. ಪೌರ ಕಾರ್ಮಿಕರು ಪಡೆದ ಸಾಲ ಮನ್ನಾ ಮಾಡಬೇಕು ಎಂದು ಸಮಾವೇಶದ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಎಸ್.ಮಾರೆಪ್ಪ ತಿಳಿಸಿದರು.

    ಸಮಿತಿ ಪದಾಧಿಕಾರಿಗಳಾದ ಅಂಬಣ್ಣ ಅರೋಲಿಕರ್, ಜೆ.ಬಿ.ರಾಜು, ಹೇಮರಾಜ ಅಸ್ಕಿಹಾಳ, ಹನುಮಂತಪ್ಪ ಕಾಕರಗಲ್, ರಾಘವೇಂದ್ರ ಬೋರಡ್ಡಿ, ಅಬ್ರಾಹಂ ಹೊನ್ನಟಗಿ, ಬಸವರಾಜ ಕವಿತಾಳ, ಶಿವರಾಯ ಅಕ್ಕರಕಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts