More

    ರುದ್ರಭೂಮಿ ಸಮಸ್ಯೆ ಇತ್ಯರ್ಥಪಡಿಸುವಂತೆ ತಹಸೀಲ್ದಾರ್‌ಗಳಿಗೆ ಡಿಸಿ ಚಂದ್ರಶೇಖರ ನಾಯಕ ಸೂಚನೆ

    ರಾಯಚೂರು: ಜಿಲ್ಲೆಯ ಹಲವು ಗ್ರಾಮಗಳಲ್ಲಿ ರುದ್ರಭೂಮಿ ಸಮಸ್ಯೆಯಿದ್ದು, ಗ್ರಾಮಸ್ಥರಿಂದ ಜಮೀನು ಖರೀದಿಗೆ ಸೂಕ್ತ ಕ್ರಮಕೈಗೊಳ್ಳುವ ಮೂಲಕ ಸಮಸ್ಯೆ ಇತ್ಯರ್ಥಗೊಳಿಸಲು ತಹಸೀಲ್ದಾರ್‌ಗಳು ಅಗತ್ಯ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಸೂಚನೆ ನೀಡಿದರು.

    ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಹಲವು ಗ್ರಾಮಗಳಲ್ಲಿ ರುದ್ರಭೂಮಿಗಾಗಿ ಜಮೀನು ಮಾರಾಟಕ್ಕೆ ರೈತರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಕೆಲ ಗ್ರಾಮಗಳಲ್ಲಿ ಜಮೀನು ನೀಡಲು ಹಿಂದೇಟು ಹಾಕುತ್ತಿದ್ದು, ಅಂತವರೊಂದಿಗೆ ಚರ್ಚಿಸಿ ಒಪ್ಪಿಗೆ ಪಡೆಯಬೇಕು ಎಂದರು.

    ರುದ್ರಭೂಮಿ ಕೊರತೆಯಿಂದ ಶವಸಂಸ್ಕಾರಕ್ಕೆ ಸಮಸ್ಯೆಯಾಗುತ್ತಿರುವ ಬಗ್ಗೆ ಹಲವು ದೂರುಗಳು ಬರುತ್ತಿವೆ. ರುದ್ರಭೂಮಿಗಾಗಿ ಆಯಾ ಗ್ರಾಮಗಳಲ್ಲಿ ಸೂಕ್ತ ಸ್ಥಳ ಗುರುತಿಸಿ ನೇರ ಖರೀದಿಗೆ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರ ಸಭೆ ನಡೆಸುವ ಮೂಲಕ ಜಮೀನು ಮಾಲೀಕರನ್ನು ಒಪ್ಪಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

    ಗ್ರಾಮಸ್ಥರ ಅನುಮತಿಯಿಲ್ಲದೆ ರುದ್ರಭೂಮಿ ನಿರ್ಮಾಣ ಮಾಡಿದಲ್ಲಿ ಕಾನೂನಾತ್ಮಕ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಗ್ರಾಮದ ಎಲ್ಲ ಸಮುದಾಯಗಳ ಮುಖಂಡರ ಸಭೆ ನಡೆಸಿ ಜಮೀನು ಗುರುತಿಸುವ ಕೆಲಸವಾಗಬೇಕು ಎಂದರು. ಎಡಿಸಿ ಡಾ.ಕೆ.ಆರ್.ದುರಗೇಶ, ತಹಸೀಲ್ದಾರ್‌ಗಳಾದ ರಾಜಶೇಖರ, ಎಲ್.ಡಿ.ಚಂದ್ರಕಾಂತ, ಆರ್.ಕವಿತಾ, ಶ್ರೀನಿವಾಸ ಚಾಪೇಲ್ ಇದ್ದರು.

    ಜಿಲ್ಲೆಯ ಬಹಳಷ್ಟು ಗ್ರಾಮಗಳಲ್ಲಿ ರುದ್ರಭೂಮಿಗಾಗಿ ಸರ್ಕಾರಿ ಜಮೀನು ಲಭ್ಯವಿಲ್ಲ. ಬಹಳಷ್ಟು ಗ್ರಾಮಗಳಲ್ಲಿ ನೀರಾವರಿ ಭೂಮಿ ಇರುವುದರಿಂದ ರೈತರು ಜಮೀನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಜನರಿಗೆ ಒಳಿತಾಗಲಿದೆ ಎನ್ನುವುದನ್ನು ಮನವರಿಕೆ ಮಾಡಿ ಜಮೀನು ಖರೀದಿಗೆ ಮುಂದಾಗಬೇಕು.
    | ಚಂದ್ರಶೇಖರ ನಾಯಕ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts