More

    ರಾಯಚೂರು-ಕೊಪ್ಪಳ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್?

    ವಿ.ಕೆ.ರವೀಂದ್ರ ಕೊಪ್ಪಳ

    ರಾಯಚೂರು-ಕೊಪ್ಪಳ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಆಡಳಿತಾರೂಢ ಬಿಜೆಪಿಯಿಂದ ಸ್ಪರ್ಧೆಗೆ ಸಿ.ವಿ.ಚಂದ್ರಶೇಖರ್ ಹಿಂದೇಟು ಹಾಕಿದ ಬೆನ್ನಲ್ಲೇ ಉಳಿದ ಆಕಾಂಕ್ಷಿಗಳು ಪೈಪೋಟಿ ಬಿರುಸುಗೊಳಿಸಿದ್ದು, ಕಮಲ ಹೈಕಮಾಂಡ್ ಕೃಪೆ ಯಾರಿಗೆ ಒಲಿಯಲಿದೆ ಎಂಬ ತೀವ್ರ ಕುತೂಹಲ ಮೂಡಿದೆ.

    ಈ ಮೊದಲು ಕೊಪ್ಪಳದಿಂದ ಮೂವರು ಹಾಗೂ ರಾಯಚೂರಿನಿಂದ ನಾಲ್ವರು ಆಕಾಂಕ್ಷಿಗಳ ಪಟ್ಟಿಯನ್ನು ವೀಕ್ಷಕರು ಹೈಕಮಾಂಡ್‌ಗೆ ಕಳಿಸಿಕೊಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದ ಸಿವಿಸಿಗೆ ಹೈಕಮಾಂಡ್ ಮಣೆ ಹಾಕಿದರೂ, ಅವರು ಸಮ್ಮತಿಸಿಲ್ಲವೆನ್ನಲಾಗಿದೆ. ಹೀಗಾಗಿ ಉಳಿದ ಅಭ್ಯರ್ಥಿಗಳು ತಮ್ಮ ಸಂಪರ್ಕ ಬಳಸಿ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಕೊಪ್ಪಳದಿಂದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗದಮ ಅಧ್ಯಕ್ಷ ಶರಣು ತಳ್ಳಿಕೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಗುಳಗಣ್ಣನವರ್ ರೇಸ್‌ನಲ್ಲಿದ್ದಾರೆ. ರಾಯಚೂರಿನಿಂದ ಬಸವನಗೌಡ ಬ್ಯಾಗವಾಟ, ಇ.ಆಂಜನೇಯ ಹಾಗೂ ವಿಶ್ವನಾಥ ಬನ್ನಟ್ಟಿ ಹೆಸರು ಬಲವಾಗಿ ಕೇಳಿಬರುತ್ತಿವೆ.

    ಬಿ.ವೈ.ವಿಜಯೇಂದ್ರ ಬಣದಲ್ಲಿ ತಳ್ಳಿಕೇರಿ ಗುರುತಿಸಿಕೊಂಡಿದ್ದು, ಜಿಲ್ಲಾ ಯುವಮೋರ್ಚಾ, ತಾಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಗುಳಗಣ್ಣನವರ್ ಸಹ ಪಕ್ಷ ವಹಿಸಿದ ಜವಾಬ್ದಾರಿ ನಿಭಾಯಿಸುತ್ತಿದ್ದು, ನಿಷ್ಠೆ ಮೆರೆದಿದ್ದಾರೆ. ಇ.ಆಂಜನೇಯ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದು, ಬಿಜೆಪಿಯಿಂದ ಉಚ್ಛಾಟಿಸಲ್ಪಟ್ಟಿದ್ದರು. ಸದ್ಯ ಪಕ್ಷ ಸೇರ್ಪಡೆಗೊಂಡಿದ್ದಾರೆ. ಇವರ ಪುತ್ರ ವಿನಯಕುಮಾರ್ ರಾಯಚೂರು ನಗರಸಭೆ ಚುಕ್ಕಾಣಿ ಹಿಡಿದಿದ್ದಾರೆ. ವಿಶ್ವನಾಥ ಬನ್ನಟ್ಟಿ ಚಿಕ್ಕೊಡಿಯವರಾಗಿದ್ದರೂ, ಶಾಸಕ ಶಿವನಗೌಡ ಬೆಂಬಲದ ಕಾರಣ ಹೆಸರು ಬಲವಾಗಿ ಕೇಳಿಬರುತ್ತಿದೆ ಎನ್ನಲಾಗುತ್ತಿದೆ. ಮತ್ತೋರ್ವ ಹಿರಿಯ ಮುಖಂಡ ಬಸವನಗೌಡ ಬ್ಯಾಗವಾಟ ಪಕ್ಷದಲ್ಲಿ ಪ್ರಭಾವ ಹೊಂದಿದ್ದು, ಉಳಿದವರಿಗೆ ತೀವ್ರ ಪೈಪೋಟಿ ಕೊಡುತ್ತಿದ್ದಾರೆಂದು ಪಕ್ಷದ ಮೂಲಗಳಲ್ಲಿ ಚರ್ಚೆಯಾಗುತ್ತಿದೆ.

    ಸದ್ಯ ಚರ್ಚೆಯಲ್ಲಿರುವ ಕ್ಷೇತ್ರಕ್ಕೆ ಟಿಕೆಟ್ ಹಂಚಿಕೆಗೆ ಹೈಕಮಾಂಡ್ ಹಲವು ವಿಧದಲ್ಲಿ ಲೆಕ್ಕಾಚಾರ ಹಾಕುತ್ತಿದೆ. ಆದರೆ, ಉಭಯ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಪಕ್ಷದ ಮುಖಂಡರು ತಮ್ಮದೇ ಲೆಕ್ಕಾಚಾರವನ್ನು ವರಿಷ್ಠರ ಮುಂದಿಟ್ಟಿದ್ದಾರೆ. ಬ್ಯಾಕ್ವರ್ಡ್ ವರ್ಸಸ್ ಫಾರ್ವರ್ಡ್ ಆಧಾರದಡಿ ಟಕೆಟ್ ಹಂಚಿಕೆ ಸೂತ್ರವಿದೆ ಎಂಬ ಚರ್ಚೆಗಳು ಒಂದೆಡೆ ಇವೆ.

    ಯಾವ ಅಂಶ ಪರಿಗಣನೆ ?
    ಕಳೆದ ಬಾರಿ ಕೊಪ್ಪಳ ಭಾಗದ ಅಭ್ಯರ್ಥಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ರಾಯಚೂರಿಗೆ ನೀಡಬೇಕೆಂಬ ವಾದಗಳಿವೆ. ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಯಾರಾಗಬಹುದೆಂಬ ಆಧಾರದಲ್ಲಿ ಕಮಲ ಟಿಕೆಟ್ ನಿರ್ಧಾರವಾಗಲಿದೆ ಎನ್ನಲಾಗುತ್ತಿದೆ. ಬ್ಯಾಕ್ವರ್ಡ್‌ಗೆ ಮಣೆ ಹಾಕಿದಲ್ಲಿ ಶರಣು ತಳ್ಳಿಕೇರಿ, ವಿಶ್ವನಾಥ ಬನ್ನಟ್ಟಿ, ಇ.ಆಂಜನೇಯ ಪೈಕಿ ಒಬ್ಬರಿಗೆ ಟಿಕೆಟ್ ಪಕ್ಕಾ ಆಗಲಿದೆ. ಲಿಂಗಾಯತ ಸಮುದಾಯದ ಚಂದ್ರಶೇಖರ್ ಟಿಕೆಟ್ ನಿರಾಕರಿಸಿದ್ದು, ಈ ಸಮುದಾಯಕ್ಕೆ ಆದ್ಯತೆ ನೀಡಿದಲ್ಲಿ ಬಸವನಗೌಡ ಬ್ಯಾಗವಾಟಗೆ ಸುಲಭವಾಗಿ ಟಿಕೆಟ್ ಒಲಿಯಲಿದೆ ಎನ್ನಲಾಗುತ್ತಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಹೈಕಮಾಂಡ್ ಆದ್ಯತೆ ನೀಡಿದಲ್ಲಿ ಪಟ್ಟಿಯಲ್ಲಿ ಇಲ್ಲದವರ ಹೆಸರು ಫೈನಲ್ ಆದರೂ ಅಚ್ಚರಿಯಿಲ್ಲ ಎಂಬ ಮಾತು ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿದೆ.

    ಪಕ್ಷ ವಹಿಸಿದ ಜವಾಬ್ದಾರಿ ನಿಭಾಯಿಸಿದ್ದೇನೆ. ವರಿಷ್ಠರು ಒಂದು ಅವಕಾಶ ನೀಡಿದಲ್ಲಿ ಮತ್ತಷ್ಟು ಕೆಲಸ ಮಾಡಲು ಅನುಕೂಲವಾಗಲಿದೆ.
    | ಶರಣು ತಳ್ಳಿಕೇರಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ

    ಯಾವುದೇ ಅಧಿಕಾರವಿಲ್ಲದಿದ್ದರೂ ಜನರ ಸೇವೆ ನಿರಂತರವಾಗಿ ಮಾಡುತ್ತಿರುವೆ. ಹೈಕಮಾಂಡ್ ಒಂದು ಅವಕಾಶ ನೀಡಿದಲ್ಲಿ ಮತ್ತಷ್ಟು ಕೆಲಸ ಮಾಡಲು ಅವಕಾಶ ದೊರೆಯಲಿದೆ.
    | ಇ.ಆಂಜನೇಯ

    ಕಳೆದ ಬಾರಿ ಪರಾಭವಗೊಂಡ ಚಂದ್ರಶೇಖರ್ ಸ್ಪರ್ಧೆಗೆ ಆಸಕ್ತಿ ತೋರಿಲ್ಲ. ನಾನು ಹಿರಿಯನಿದ್ದೇನೆ. ಹಲವರ ಹೆಸರು ಕೇಳಿಬರುತ್ತಿವೆ. ನನ್ನ ಹೆಸರು ಪಟ್ಟಿಯಲ್ಲಿದ್ದು, ಯಾರಿಗೆ ಟಿಕೆಟ್ ಸಿಗಲಿದೆ ಎಂದು ಕಾದು ನೋಡಬೇಕಿದೆ.
    | ಬಸವನಗೌಡ ಬ್ಯಾಗವಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts