More

    ಖಾದಿ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ 1.60 ಕೋಟಿ ರೂ. ವಹಿವಾಟು

    ರಾಯಚೂರು: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹದಿನೈದು ದಿನಗಳ ಕಾಲ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಏರ್ಪಡಿಸಿದ್ದ ಖಾದಿ ಮತ್ತು ಗುಡಿ ಕೈಗಾರಿಕೆಗಳ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಒಟ್ಟು 1.60 ಕೋಟಿ ರೂ.ಗಳ ವಹಿವಾಟು ನಡೆದಿದೆ.

    ಕೋವಿಡ್‌ನಿಂದಾಗಿ ಕಳೆದ 2 ವರ್ಷಗಳಿಂದ ಖಾದಿ ಮೇಳ ನಡೆದಿರಲಿಲ್ಲ. ಹೀಗಾಗಿ ಮಂಡಳಿ ಉತ್ಪಾದಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಾರಾಟ ಮೇಳಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಸಲು ನಿರ್ಧರಿಸಿದೆ. ವಿಜಯಪುರದಲ್ಲಿ ನಡೆದ ಮೇಳದಲ್ಲಿನ ವಹಿವಾಟಿಗೆ ಹೋಲಿಸಿದಲ್ಲಿ ರಾಯಚೂರಿನಲ್ಲಿ ವಹಿವಾಟು ಕಡಿಮೆಯಾಗಿದ್ದರೂ ಉತ್ತಮ ವ್ಯಾಪಾರವಾಗಿದೆ ಎನ್ನುವ ಅಭಿಪ್ರಾಯ ಕೇಳಿಬಂದಿದೆ.

    ಅ.20ರಿಂದ ನ.3ರವರೆಗೆ ನಡೆದ ಮೇಳದಲ್ಲಿ ಭಾನುವಾರ ಮತ್ತು ಕೊನೆಯ ಮೂರು ದಿನಗಳಲ್ಲಿ ಉತ್ತಮ ವಹಿವಾಟು ನಡೆದಿದ್ದು, ಅದರಲ್ಲೂ ಗುಡಿ ಕೈಗಾರಿಕೆ ಸಾಮಗ್ರಿಗಳ ಖರೀದಿ ನಡೆದಿದ್ದರೂ ಖಾದಿ ವಸ್ತ್ರಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. 15 ದಿನಗಳಲ್ಲಿ ಮೇಳಕ್ಕೆ ಒಟ್ಟು 72,572 ಜನರು ಭೇಟಿ ನೀಡಿದ್ದಾರೆ.

    ಒಟ್ಟು 1.60 ಕೋಟಿ ರೂ. ವಹಿವಾಟಿನಲ್ಲಿ 91.36 ಲಕ್ಷ ರೂ. ಖಾದಿ ವಸ್ತ್ರಗಳ ಖರೀದಿ ನಡೆದಿದ್ದು, 68.71 ಲಕ್ಷ ರೂ. ಗುಡಿ ಕೈಗಾರಿಕೆಯ ಸಾಮಗ್ರಿಗಳ ಮಾರಾಟವಾಗಿವೆ. ಖಾದಿ ಶರ್ಟ್, ಜುಬ್ಬಾಗಳು ಹೆಚ್ಚು ಮಾರಾಟವಾಗಿದ್ದು, ಮಹಿಳೆಯರು ಕೂಡ ಖಾದಿ ವಸ್ತ್ರಗಳನ್ನು ಖರೀದಿಸಿದ್ದಾರೆ.

    ರಾಜ್ಯದ ವಿವಿಧ ಜಿಲ್ಲೆಗಳಿಂದ ಖಾದಿ ಗ್ರಾಮೋದ್ಯೋಗ ಮಂಡಳಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದು, ಉತ್ತಮ ಮಾರಾಟ ನಡೆದಿರುವುದರಿಂದ ಮಳಿಗೆ ಹಾಕಿದ್ದ ಮಾರಾಟಗಾರರಲ್ಲಿಯೂ ಸಂತಸ ಕಂಡುಬರುತ್ತಿತ್ತು.

    ಮಾರಾಟ ಹೆಚ್ಚಳಕ್ಕೆ ಅಡ್ಡಿ: ಮೇಳದಲ್ಲಿ ಇನ್ನೂ ಹೆಚ್ಚಿನ ವಹಿವಾಟು ನಡೆಯುವ ಸಾಧ್ಯತೆಗಳಿದ್ದವು. ಮೇಳದ ಅವಧಿಯಲ್ಲಿ ರಾಹುಲ್‌ಗಾಂಧಿಯ ಭಾರತ್ ಐಕ್ಯತಾ ಯಾತ್ರೆ ಹಾಗೂ ದೀಪಾವಳಿ ಸಮಯದಲ್ಲಿ ಗ್ರಹಣ ಬಂದಿರುವುದರಿಂದ ವಹಿವಾಟಿನಲ್ಲಿ ಇಳಿಕೆಯಾಗಿದೆ ಎಂದು ಅಂದಾಜಿಸಲಾಗುತ್ತಿದೆ. ಜತೆಗೆ ತಿಂಗಳ ಕೊನೆಯಲ್ಲಿ ಮೇಳ ಇರುವುದರಿಂದ ಜನರಲ್ಲಿ ಹಣದ ಕೊರತೆಯೂ ಖರೀದಿ ಕಡಿಮೆಯಾಗಲು ಕಾರಣ ಎನ್ನಲಾಗುತ್ತಿದೆ. ಮೇಳವನ್ನು ಮತ್ತೊಂದು ವಾರ ಮುಂದುವರಿಸಿದ್ದರೆ ಇನ್ನೂ ಉತ್ತಮ ವಹಿವಾಟು ನಡೆಯುತ್ತಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts