More

    ಒಳ ಮೀಸಲಾತಿ ಹೆಸರಲ್ಲಿ ದಾರಿ ತಪ್ಪಿಸುವ ಕೆಲಸ

    ರಾಯಚೂರು: ಚುನಾವಣೆ ಹೊಸ್ತಿಲಲ್ಲಿ ಒಳ ಮೀಸಲಾತಿ ಹೆಸರಿನಲ್ಲಿ ದಲಿತ ಸಮುದಾಯಕ್ಕೆ ದ್ರೋಹ ಬಗೆಯುವ ಮೂಲಕ ರಾಜ್ಯ ಸರ್ಕಾರ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಪ್ರಯತ್ನ ನಡೆಸಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಆರೋಪಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ರಾಜ್ಯ ಸರ್ಕಾರ ಪ್ರಕಟಿಸಿರುವ ಮೀಸಲಾತಿ ಹಂಚಿಕೆ ಅವೈಜ್ಞಾನಿಕವಾಗಿದ್ದು, 9ನೇ ಷೆಡ್ಯೂಲ್‌ನಲ್ಲಿ ಸೇರಿಸಿ ಸಂಸತ್ತಿನಲ್ಲಿ ಅಂಗೀಕರಿಸದೆ ಅದನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಆದರೂ, ಒಳ ಮೀಸಲಾತಿ ಹೆಸರಿನಲ್ಲಿ ದಲಿತರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

    ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡಲು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಹಾಗೂ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲು ಹೆಚ್ಚಿಸಲು ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ಸರ್ಕಾರಕ್ಕೆ ವರದಿ ನೀಡಿವೆ. ಈ ಆಯೋಗದ ವರದಿಗಳನ್ನು ಅಂಗೀಕರಿಸದೆ ಯಾವ ಮಾನದಂಡಗಳ ಮೇಲೆ ಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದು ಹೇಳುತ್ತಿಲ್ಲ.

    ಮೀಸಲು ಪರಿಷ್ಕರಣೆ ಘೋಷಿಸುತ್ತಿದ್ದಂತೆ ಎಸ್ಸಿ ಸಮುದಾಯದ ಅನೇಕ ಸಂಘಟನೆಗಳು ವಿಜಯೋತ್ಸವ ಆಚರಿಸುತ್ತಿವೆ. ಆದರೆ, ರಾಜ್ಯ ಸರ್ಕಾರದ ಶಿಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಸಂಸತ್ತಿನಲ್ಲಿ ಅಂಗೀಕಾರಗೊಳಿಸಬೇಕಿದೆ.

    ಆಂಧ್ರಪ್ರದೇಶದಲ್ಲಿ ಒಳ ಮೀಸಲಾತಿ ಜಾರಿ ಹಾಗೂ ಪಂಜಾಬಿನ ದಲವೀರ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಒಳ ಮೀಸಲಾತಿಯನ್ನು ರದ್ದುಗೊಳಿಸಿ ಆದೇಶಿದೆ. ನ್ಯಾ.ಮೀರಾ ನಾಯ್ಕ ನೇತೃತ್ವದಲ್ಲಿ ಅಧ್ಯಯನ ಸಮಿತಿ ರಚಿಸಿ ವರದಿ ಪಡೆಯಲಾಗಿದ್ದು, ಅವರ ವರದಿಯಂತೆ ಸಂವಿಧಾನಾತ್ಮಕ ತಿದ್ದುಪಡಿಗೆ ಅವಕಾಶ ನೀಡಲು ಶಿಾರಸು ಮಾಡಲಾಗಿದೆ.

    ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚು ಮಾಡದಂತೆ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ ನೀಡಿರುವ ಆದೇಶ ಪರಿಷ್ಕರಣೆಗೆ ಏಳು ಜನ ನ್ಯಾಯಮೂರ್ತಿಗಳ ಪೀಠ ರಚನೆಯಾಗಬೇಕಿದೆ. ಆರ್ಥಿಕವಾಗಿ ಹಿಂದುಳಿದವರು ಯಾರೂ ಮೀಸಲಾತಿ ಕೇಳದೇ ಇದ್ದರೂ ಕೇಂದ್ರ ಸರ್ಕಾರ ಕಳೆದ ಬಾರಿ ಲೋಕಸಭೆ ಚುನಾವಣೆಗೂ ಮುನ್ನ ಶೇ.10 ಪ್ರಮಾಣ ನೀಡಿತ್ತು.

    ಧರ್ಮದ ಆಧಾರದ ಮೇಲೆ ಮೀಸಲಾತಿ ಸೌಲಭ್ಯ ನೀಡಲಾಗಿಲ್ಲ. ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಪರಿಗಣಿಸಿ ಮುಸ್ಲಿಮರಿಗೆ ಶೇ.4 ಮೀಸಲಾತಿ ನೀಡಲಾಗಿತ್ತು. ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿ ಒಕ್ಕಲಿಗರು ಮತ್ತು ಲಿಂಗಾಯತರಿಗೆ ತಲಾ ಶೇ.2 ಮೀಸಲಾತಿ ನೀಡಿರುವುದು ದ್ರೋಹವಾಗಿದೆ ಎಂದು ಎಂ.ವಿರೂಪಾಕ್ಷಿ ಹೇಳಿದರು. ಪದಾಧಿಕಾರಿಗಳಾದ ಯುಸೂಫ್ ಖಾನ್, ಈ.ವಿನಯಕುಮಾರ, ಎನ್.ಶಿವಶಂಕರ, ವಿಶ್ವನಾಥ ಪಟ್ಟಿ, ಅಮ್ಜದ್ ಹುಸೇನ್, ಫಾತೀಮಾ ಹುಸೇನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts