More

    ಫಲಿತಾಂಶ ವಿಳಂಬ, ಬಿಇಡಿ ಪ್ರವೇಶದಿಂದ ವಂಚಿತ

    ರಾಯಚೂರು: ಗುಲ್ಬರ್ಗ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯ ಫಲಿತಾಂಶ ವಿಳಂಬದಿಂದ ವಿವಿ ವ್ಯಾಪ್ತಿಯ ಸಾವಿರಾರು ವಿದ್ಯಾರ್ಥಿಗಳು ಬಿಇಡಿ ಪ್ರವೇಶದಿಂದ ವಂಚಿತರಾಗುವಂತಾಗಿದೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಗವೇಣಿ ಪಾಟೀಲ್ ದೂರಿದರು.

    ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ಪ್ರವೇಶಕ್ಕೆ ದಾಖಲೆ ಪರಿಶೀಲನೆ ಅವಧಿ ಮುಗಿದ ನಂತರ ವಿವಿ ಫಲಿತಾಂಶ ಬಿಡುಗಡೆಯಾಗಿದೆ. ಹೀಗಾಗಿ ಕಾಲೇಜು ಶಿಕ್ಷಣ ನಿರ್ದೇಶನಾಲಯ ದಾಖಲೆ ಪರಿಶೀಲನೆ ಅವಧಿ ಮುಂದೂಡುವ ಮೂಲಕ ವಿದ್ಯಾರ್ಥಿಗಳಿಗೆ ಬಿಇಡಿ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

    ವಿದ್ಯಾರ್ಥಿಗಳು ಬಿಇಡಿ ಪ್ರವೇಶಕ್ಕಾಗಿ ಐದು ಸೆಮಿಸ್ಟರ್‌ಗಳ ಅಂಕಗಳನ್ನು ಆಧರಿಸಿ ಅರ್ಜಿ ಸಲ್ಲಿಸಿದ್ದರು. ಅದರ ಆಧಾರದಲ್ಲಿಯೇ ಬಿಇಡಿ ಪ್ರವೇಶಕ್ಕೆ ಮೆರಿಟ್ ಪಟ್ಟಿಯನ್ನು ದಾಖಲಿಸಲಾಗಿತ್ತು. ದಾಖಲೆ ಪರಿಶೀಲನೆಗೆ ಜ.14 ಕೊನೆ ದಿನವಾಗಿದ್ದು, ಬಿಎ 6ನೇ ಸೆಮಿಸ್ಟರ್ ಫಲಿತಾಂಶ ಬಾರದೆ ವಿದ್ಯಾರ್ಥಿಗಳು ಪ್ರವೇಶದಿಂದ ವಂಚಿತರಾಗುವಂತಾಗಿದೆ ಎಂದು ದೂರಿದರು.

    ಗುಲ್ಬರ್ಗ ವಿವಿ ಪ್ರತಿಬಾರಿ ಪರೀಕ್ಷೆ ನಡೆಸುವಲ್ಲಿ ಹಾಗೂ ಫಲಿತಾಂಶ ಬಿಡುಗಡೆಯಲ್ಲಿ ವಿಳಂಬ ಮಾಡುತ್ತಿದ್ದರಿಂದ ವಿದ್ಯಾರ್ಥಿಗಳು ಬಿಇಡಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ಉನ್ನತ ಶಿಕ್ಷಣ ಸಚಿವರು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ನಾಗವೇಣಿ ಪಾಟೀಲ್ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಚನ್ನಬಸವ, ಸ್ವಾಮಿ, ಸ್ವಾತಿ, ಅಕ್ಷತಾ, ಶಿವರಾಜ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts