More

    ಗ್ರಾಪಂಗಳಿಗೆ ಅನುದಾನ, ಸ್ವಾಯತ್ತತೆ ನೀಡಿ- ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದಿಂದ ಪ್ರತಿಭಟನೆ

    ರಾಯಚೂರು: ಗ್ರಾಪಂಗಳಿಗೆ ಅನುದಾನ, ಸ್ವಾಯತ್ತತೆ ಹಾಗೂ ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ಆಯವ್ಯಯದ ಪ್ರಕಾರ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿ ಜಿಪಂ ಕಚೇರಿ ಮುಂದೆ ಸಿಂಧನೂರು ತಾಲೂಕು ಗ್ರಾಪಂ ಸದಸ್ಯರ ಒಕ್ಕೂಟದಿಂದ ಗುರುವಾರ ಪ್ರತಿಭಟನೆ ನಡೆಸಿ, ಸಿಇಒ ಶಶಿಧರ ಕುರೇರಗೆ ಮನವಿ ಸಲ್ಲಿಸಲಾಯಿತು.

    ಗ್ರಾಮ ಸಭೆಯಲ್ಲಿ ಕ್ರಿಯಾಯೋಜನೆಗೆ ಅನುಮೋದನೆ ಪಡೆದ ಕಾಮಗಾರಿಗಳನ್ನು ರದ್ದುಗೊಳಿಸುವ ಮೂಲಕ ಅಧಿಕಾರಿಗಳು ಗ್ರಾಪಂ ಅಧಿಕಾರವನ್ನು ಮೊಟಕುಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

    ತಾಲೂಕಿನ 30 ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ಹಿಂದಿನ ಸಿಇಒ ರದ್ದುಗೊಳಿಸಿದ್ದರು. ಈಗ ನಮ್ಮ ಹೊಲ ನಮ್ಮ ರಸ್ತೆ ಕಾಮಗಾರಿ ಕ್ರಿಯಾಯೋಜನೆ ತಯಾರಿಸುವುದಕ್ಕೆ ಹೇಳಿದ್ದು, ಕ್ರಿಯಾಯೋಜನೆ ತಯಾರಿಸಿದರೂ ಅನುಮೋದನೆ ನೀಡಲಾಗಿಲ್ಲ.

    ಗ್ರಾಮದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಗುಂಡಿಗಳಿಗೆ ಮರಂ ಹಾಕಲು ಸಾಧ್ಯವಾಗದ ಕಾರಣ ಜನರು ಸದಸ್ಯರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಗ್ರಾಪಂಗಳಿಗೆ ಸ್ವಾಯತ್ತತೆ ನೀಡಲಾಗಿದೆ ಎಂದು ಕಾಟಾಚಾರಕ್ಕೆ ಹೇಳಲಾಗುತ್ತಿದ್ದರೂ ಅಧಿಕಾರ ನೀಡಲಾಗುತ್ತಿಲ್ಲ. ಅಧಿಕಾರಿಗಳು ಆಡಿದ್ದೇ ಆಟವಾಗಿದೆ ಎಂದು ದೂರಿದರು.
    ಕೂಡಲೇ ಗ್ರಾಪಂಗಳಿಂದ ಕಳಿಸಲಾದ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡಬೇಕು. ಮೂಲ ಸೌಕರ್ಯಗಳ ವೈಯಕ್ತಿಕ ಕಾಮಗಾರಿಗಳಿಗೆ ಅನುಮೋದನೆ ನೀಡಬೇಕು. ಚುನಾಯಿತ ಪ್ರತಿನಿಧಿಗಳ ಗೌರವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

    ಒಕ್ಕೂಟದ ಅಧ್ಯಕ್ಷ ಮಹಾಂತೇಶ ಹಿರೇಗೌಡ್ರು, ಪ್ರಧಾನ ಕಾರ್ಯದರ್ಶಿ ರವಿಗೌಡ ಮಲ್ಲದಗುಡ್ಡ, ಪದಾಧಿಕಾರಿಗಳಾದ ಶಾಮೀದ್ ಸಾಬ್, ರಮೇಶ ಮುಕ್ಕುಂದ, ಚಂದ್ರಶೇಖರ ರೌಡಕುಂದಾ, ಲಕ್ಷ್ಮ ರೌಡಕುಂದಾ, ಹುಲಿಗೆಮ್ಮ ಭೋವಿ, ಹನುಮಂತಪ್ಪ ಅಳ್ಳಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts