More

    ಕಾವ್ಯ ಸಮಕಾಲೀನ ಬದುಕಿಗೆ ಕನ್ನಡಿಯಾಗಲಿ; ಸಾಹಿತಿ ಪವನಕುಮಾರ ಗುಂಡೂರು ಅಭಿಮತ

    ರಾಯಚೂರು: ಕಾವ್ಯ ಸಮಕಾಲೀನ ಬದುಕಿಗೆ ಕನ್ನಡಿಯಾದಾಗ ಓದುಗರ ಮನಸು ತಲುಪಲು ಸಾಧ್ಯ. ಹೊಸ ಸಾಹಿತಿಗಳು ಪರಂಪರೆಯ ಜತೆಗೆ ಸಮಕಾಲೀನ ಬರಹಗಾರರ ಕುರಿತು ಅರಿವು ಹೊಂದಿರಬೇಕು ಎಂದು ಗಂಗಾವತಿಯ ಸಾಹಿತಿ ಪವನಕುಮಾರ ಗುಂಡೂರು ಹೇಳಿದರು.

    ಸ್ಥಳೀಯ ಟ್ಯಾಗೋರ್ ಸಭಾಂಗಣದಲ್ಲಿ ಲೋಹಿಯಾ ಪ್ರತಿಷ್ಠಾನ, ಎಸ್‌ಆರ್‌ಕೆ ಶಿಕ್ಷಣ ಮಹಾವಿದ್ಯಾಲಯದಿಂದ ಶುಕ್ರವಾರ ಶಿಕ್ಷಕಿ ಕೆ.ಗಿರಿಜಾ ರಾಜಶೇಖರರ ಮೌನ ಮಾತಾಗಿ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾವ್ಯಕ್ಕೂ ಮೌನಕ್ಕೂ ಅವಿನಾಭಾವ ಸಂಬಂಧವಿದ್ದು, ಕಾವ್ಯಕ್ಕೆ ಮೌನವೇ ಭಾಷೆಯಾದರೆ, ಮೌನಕ್ಕೆ ಕಾವ್ಯವೇ ಭಾಷೆಯಾಗಿದೆ. ಮೌನದ ಕುರಿತು ಆಧುನಿಕತೆ ಹೊಂದಿರುವ ಅಸಡ್ಡೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೃತಿಯಲ್ಲಿ ಮೌಲ್ಯ, ಆದರ್ಶ, ಸಮಾಜದ ಕುರಿತು ಉತ್ತಮವಾಗಿ ಅಭಿವ್ಯಕ್ತಗೊಳಿಸಲಾಗಿದೆ ಎಂದರು.

    ವಕೀಲೆ ಚಂದ್ರಕಲಾ ಪಾಟೀಲ್ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು. ಕೃತಿಯಲ್ಲಿ ಮಹಿಳಾ ಸಂವೇದನೆಯನ್ನು ಕಾಣಬಹುದಾಗಿದ್ದು, ಸಮಾಜದಲ್ಲಿ ನಿತ್ಯ ಕಾಡುವಂತಹ ಪ್ರಸಂಗಗಳಿಗೆ ಕಾವ್ಯ ರೂಪ ನೀಡಲಾಗಿದೆ ಎಂದು ಹೇಳಿದರು.

    ಸಾಹಿತಿ ಡಾ.ದಸ್ತಗೀರಸಾಬ್ ದಿನ್ನಿ ಮಾತನಾಡಿ, ನಮ್ಮ ದೈನಿಕ ಬದುಕು ವ್ಯವಹಾರಿಕವಾಗಿ ಮಾರ್ಪಟ್ಟು ಮಾನವೀಯ ಸಂಬಂಧಗಳು ಪಲ್ಲಟಗೊಂಡಿವೆ. ಹಿಂಸೆ, ಅಸಹಿಷ್ಣುತೆ ಇನ್ನಿಲ್ಲದಂತೆ ಕನಲಿಸುತ್ತಿದೆ. ಅಂತಃಸತ್ತ್ವವನ್ನು ತೆರೆದಿಡುವುಂತಹ ಸಾಹಿತ್ಯ ಇಂದಿನ ಅವಶ್ಯವಾಗಿದೆ. ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹೊಸ ತಲೆಮಾರಿನ ಸಾಹಿತಿಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ. ಕೃತಿಯಲ್ಲಿ ಸತ್ಯವನ್ನು ಸ್ತ್ರೀತ್ವದ ನೆಲೆಯಿಂದ ನೋಡಲಾಗಿದೆ ಎಂದು ತಿಳಿಸಿದರು.

    ರೇಣು ಪ್ರಕಾಶನದ ಮುಖ್ಯಸ್ಥ ಭೀಮನಗೌಡ ಇಟಗಿ, ಡಾ.ಶಶಿಕಲಾ ಪಾಟೀಲ್, ಸಾಹಿತಿಗಳಾದ ಶೈಲಾ ಪಾಟೀಲ್, ಪ್ರಾಚಾರ್ಯೆ ಡಾ.ಅರುಣಾಕುಮಾರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts