More

    ಭಕ್ತಿ ಇಲ್ಲದ ಪುಣ್ಯ ಕಾರ್ಯಗಳಿಂದ ದುರ್ಗತಿ, ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರ ಹೇಳಿಕೆ

    ರಾಯಚೂರು: ಶ್ರದ್ಧಾ ಭಕ್ತಿಯಿಂದ ಮಾಡಿದ ಕರ್ಮಗಳು ನಮಗೆ ಸದ್ಗತಿ ನೀಡಿದರೆ, ಭಕ್ತಿಯಿಲ್ಲದೆ ಮಾಡುವ ಪುಣ್ಯ ಕಾರ್ಯಗಳಿಂದ ದುರ್ಗತಿಯೂ ಬರುತ್ತದೆ ಎಂದು ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ನಗರದ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿರುವ ಇಷ್ಟಲಿಂಗ ಪೂಜೆ ಮತ್ತು ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದ ಮೂರನೇ ದಿನವಾದ ಭಾನುವಾರ ರಾತ್ರಿ ಆಶೀರ್ವಚನ ನೀಡಿ, ದೇವರು, ಗುರುವಿನ ಮೇಲೆ ಎಷ್ಟು ಭಕ್ತಿ, ವಿಶ್ವಾಸ ಇಡುತ್ತೀರೋ ಅಷ್ಟು ಫಲ ಸಿಗುತ್ತದೆ ಎಂದರು.

    ಭಕ್ತಿಗೆ ಯಾವುದೇ ವರ್ಣ, ಜಾತಿ-ಬೇಧ ಇರುವುದಿಲ್ಲ. ಜಾತಿ, ವರ್ಣಗಳನ್ನು ಮಾಡಿದ್ದು ನಾವು. ದೇವರು ಯಾವುದೇ ಭೇದಭಾವ ಇಲ್ಲದೆ ಎಲ್ಲರನ್ನೂ ಸಮನಾಗಿ ಸ್ವೀಕರಿಸುತ್ತಾನೆ. ಯಾವುದೇ ದೇವರಿಗೆ ಪೂಜೆ ಸಲ್ಲಿಸಿದರೂ ಅದು ಶಿವನಿಗೆ ಅರ್ಪಿತವಾಗುತ್ತದೆ. ಇಷ್ಟಲಿಂಗ ಪೂಜೆಯಿಂದ ಮನಸ್ಸಿನಲ್ಲಿರುವ ಕೋರಿಕೆಗಳು ಈಡೇರುತ್ತವೆ ಎಂದು ಹೇಳಿದರು.

    ಶಿವನಿಗೆ ಅನನ್ಯ ಭಕ್ತಿಯಿಂದ ಪೂಜೆ ಸಲ್ಲಿಸುವವರೇ ಶಿವ ಸ್ವರೂಪಿಗಳು. ಹೀಗಾಗಿ ಶರಣರು, ಸಂತರು, ಸ್ವಾಮೀಜಿಗಳನ್ನು ಶಿವನ ಸ್ವರೂಪರೆಂದು ಕರೆಯಲಾಗುತ್ತದೆ. ಎಲ್ಲ ದೇವಾನುದೇವತೆಗಳ ಮುಕುಟದಲ್ಲಿ ಶಿವ ನೆಲೆಸಿದ್ದು, ಶಿವನಿಗೆ ನಿಷ್ಠೆ, ಭಕ್ತಿಯಿಂದ ಪೂಜೆ ಸಲ್ಲಿಸಿದಾಗ ಅನ್ಯ ದೇವರಿಗೆ ಬೇಡುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.

    ಆಂಧ್ರಪ್ರದೇಶದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ನೀಲಗಲ್‌ನ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಮಂಗಳವಾರಪೇಟೆ ಮಠದ ವೀರ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಧರ್ಮ ಸಂದೇಶ ನೀಡಿದರು.

    ಬಿಚ್ಚಾಲಿಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬೆಟ್ಟಪ್ಪ ಶರಣರು, ಮುಖಂಡರಾದ ಮಲ್ಲಿಕಾರ್ಜುನ ದೋತರಬಂಡಿ, ಎನ್.ಗಿರಿಜಾಶಂಕರ, ಬಸವರಾಜ ಸಕ್ರಿ, ವೀರಭದ್ರಪ್ಪ ಆಲ್ದಾಳ, ಶಿವಬಸಪ್ಪ ಮಾಲಿಪಾಟೀಲ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts