More

    ರೈತ ವಿರೋಧಿ ಬಿಜೆಪಿ ಸರ್ಕಾರ

    ರಾಯಚೂರು: ಬಿಜೆಪಿ ಸರ್ಕಾರ ರೈತ ವಿರೋಧಿಯಾಗಿದ್ದು, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡದೇ ವಂಚಿಸುತ್ತಿದೆ. ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಆದಿವಾಸಿಗಳ ಜಮೀನನ್ನು ಅದಾನಿ, ಅಂಬಾನಿಯಂತಹ ಕಾರ್ಪೋರೇಟ್ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಹನನ್ ಮುಲ್ಲಾ ಹೇಳಿದರು.

    ಅಧಿಕಾರಕ್ಕೆ ಬರುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು, ರೈತರಿಗೆ ಹಲವು ಸೌಲಭ್ಯಗಳನ್ನು ನೀಡಲಾಗುವುದೆಂದು ಸುಳ್ಳು ಭರವಸೆಗಳನ್ನು ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ರೈತರ ಬೇಡಿಕೆಗಳನ್ನು ಈಡೇರಿಸಲು ಆಗುವುದಿಲ್ಲ ಎಂಬ ಲಿಖಿತ ರೂಪದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯ ಆರೋಪಿಸಿದರು.

    ಬಗರ್‌ಹುಕುಂ ಸಾಗುವಳಿದಾರರಿಗೆ ಜಮೀನಿನ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಡಿ.10ರಂದು ಮಾನವ ಹಕ್ಕುಗಳ ದಿನದಂದು ಆದಿವಾಸಿಗಳ ಜಮೀನು ಹಕ್ಕುಗಳ ದಿನವನ್ನಾಗಿ ಆಚರಿಸಿ ಆಂದೋಲನ ನಡೆಸಲಾಗುವುದು ಎಂದು ತಿಳಿಸಿದರು.

    ದೆಹಲಿಯಲ್ಲಿ 500 ರೈತಪರ ಸಂಘಟನೆಗಳು ಒಟ್ಟುಗೂಡಿಕೊಂಡು ಸಂಯುಕ್ತ ಕಿಸಾನ್ ಮೋರ್ಚಾ ಎಂಬ ಸಂಘಟನೆ ನೇತೃತ್ವದಲ್ಲಿ ಹೋರಾಟ ನಡೆಸಿದ್ದವು. ಒಂದು ವರ್ಷಗಳ ಕಾಲ ಚಳಿ, ಮಳೆ, ಬಿಸಿಲೆನ್ನದೇ ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದರು.

    ಹೋರಾಟದಲ್ಲಿ 715 ರೈತರು ಮರಣ ಹೋದಿದ್ದಾರೆ ಹಾಗೂ ನಲವತ್ತಾರು ಸಾವಿರ ಜನರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ನಂತರ ಹೋರಾಟಕ್ಕೆ ಮಣಿದ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಿತು. ಆದರೆ ಹೋರಾಟದಲ್ಲಿ ಮರಣ ಹೊಂದಿದ ಯಾವುದೇ ರೈತನಿಗೆ ಇದುವರೆಗೂ ಪರಿಹಾರ ನೀಡಿಲ್ಲ ಎಂದು ದೂರಿದರು.

    ಸ್ವಾಮಿನಾಥನ್ ವರದಿ ಅನುಸಾರ ರೈತ ಬೆಳೆದ ಬೆಳೆಯ ಖರ್ಚಿನ ಮೇಲೆ ಶೇ.1.5 ಹೆಚ್ಚುವರಿ ಬೆಲೆ ನೀಡಬೇಕು. ರೈತ ಉಳಿದರೆ ದೇಶ ಉಳಿಯುತ್ತದೆ. ಆದ್ದರಿಂದ ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಬೇಕಾಗಿದೆ ಎಂದು ಆಗ್ರಹಿಸಿದರು. ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ರೈತರಿಗೆ ಪರಿಹಾರ ನೀಡುವ ಯೋಜನೆಯಲ್ಲ. ಇದೊಂದು ವಂಚನೆಯ ಯೋಜನೆ. ಇದರಿಂದ ರೈತರಿಗೆ ಯಾವುದೇ ರೀತಿ ಪರಿಹಾರ ಸಿಗುವುದಿಲ್ಲ ಎಂದರು. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ವೀರನಗೌಡ, ಜಿಲ್ಲಾ ಉಪಾಧ್ಯಕ್ಷ ಕೆ.ಜಿ.ವಿರೇಶ, ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts