More

    ವಿಮಾನ ನಿಲ್ದಾಣ ಯೋಜನೆಗೆ ಒಪ್ಪಿಗೆ ಸೂಚಿಸಿ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಹೇಳಿಕೆ

    ರಾಯಚೂರು: ಉಡಾನ್ ಯೋಜನೆಯಡಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವುದು ಸರ್ಕಾರದ ಉದ್ದೇಶವಾಗಿದೆ. ವಿಮಾನ ನಿಲ್ದಾಣದ ವ್ಯಾಪ್ತಿಗೆ ಒಳಪಡುವ ಏಗನೂರು ಹಾಗೂ ಯರಮರಸ್ ದಂಡ್ ಪ್ರದೇಶದಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏಗನೂರು ಗ್ರಾಮಸ್ಥರೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಬೆಲೆ ನಿರ್ಧರಣಾ ಸಭೆಯಲ್ಲಿ ಮಾತನಾಡಿದರು. ವಿಮಾನ ನಿಲ್ದಾಣಕ್ಕಾಗಿ ಏಗನೂರು ಬಳಿ 300 ಎಕರೆ ಸರ್ಕಾರಿ ಜಾಗವನ್ನು ಮೀಸಲಿರಿಸಿದ್ದು, ಉಳಿದ 18 ಎಕರೆ 28 ಗುಂಟೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದರು.

    ನೋಂದಣಿ ಇಲಾಖೆ ನಿರ್ಧರಿಸಿದ ಬೆಲೆಗಿಂತ ಉತ್ತಮ ಬೆಲೆಯನ್ನು ನಿಗದಿಪಡಿಸಲಾಗಿದೆ. ಅಲ್ಲದೇ ಜಿಲ್ಲೆಯ ಹಾಗೂ ಸಾರ್ವಜನಿಕರ ಉದ್ದೇಶಕ್ಕಾಗಿ ಕೈಗೊಂಡಿರುವ ಯೋಜನೆಗೆ ಎಲ್ಲರೂ ಒಪ್ಪಿಗೆ ಸೂಚಿಸಬೇಕು. ಏಗನೂರು ಗ್ರಾಮದಲ್ಲಿ ಈಗಾಗಲೇ ಶೇ.90 ಜಾಗವು ಸರ್ಕಾರದ್ದಾಗಿದ್ದು, ಉಳಿದ ಶೇ.10 ಪಟ್ಟಾ ಜಾಗವನ್ನು ಸ್ವಾಧೀನಡಿಸಿಕೊಳ್ಳಲಾಗುವುದು. ನೋಂದಣಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಏಗನೂರು ಪ್ರದೇಶದಲ್ಲಿ ಪ್ರತಿ ಎಕರೆಗೆ 2 ಲಕ್ಷ 30 ಸಾವಿರ ಬೆಲೆ ಇದ್ದು, ಸರ್ಕಾರದಿಂದ 5 ಪಟ್ಟು ಹೆಚ್ಚಿನ ಬೆಲೆ ನೀಡಲಾಗುತ್ತಿದೆ. ಜಮೀನು ನೀಡಿದವರ ಕುಟುಂಬಕ್ಕೆ ಉದ್ಯೋಗ ನೀಡುವ ಕುರಿತು ಸರ್ಕಾರದೊಂದಿಗೆ ಚರ್ಚಿಸಲಾಗುವುದು. ವಿಮಾನ ನಿಲ್ದಾಣದ ಅಕ್ಕ ಪಕ್ಕದ ಉಳಿದ ಜಮೀನುಗಳಿಗೆ ರಸ್ತೆ ನಿರ್ಮಿಸಿ ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸಹಾಯಕ ಆಯುಕ್ತ ರಜನಿಕಾಂತ್ ಚವ್ಹಾಣ್, ತಹಸೀಲ್ದಾರ್ ರಾಜಶೇಖರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts