More

    ಏಮ್ಸ್ ಬಗ್ಗೆ ಧ್ವನಿಯೆತ್ತುವ ಶಕ್ತಿ ಜನಪ್ರತಿನಿಧಿಗಳಿಗಿಲ್ಲ

    ರಾಯಚೂರು: ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವ ಕುರಿತಂತೆ ಸದನದಲ್ಲಿ ಧ್ವನಿ ಎತ್ತದೆ ಜನಪ್ರತಿನಿಧಿಗಳು ನಿಷ್ಕ್ರಿಯರಾಗಿರುವುದರಿಂದ ಜನಪ್ರತಿನಿಧಿಗಳನ್ನು ನಂಬಿಕೊಂಡು ಕೂಡದೇ ಹೋರಾಟ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಏಮ್ಸ್ ಹೋರಾಟ ಸಮಿತಿ ಸಂಚಾಲಕ ಡಾ.ಬಸವರಾಜ ಕಳಸ ತಿಳಿಸಿದರು.

    ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಮಾ.24ರಂದು ಸ್ಟೇಷನ್ ವೃತ್ತದಿಂದ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುತ್ತಿದ್ದು, ಈ ವೇಳೆ ಜಿಲ್ಲೆಯ ಶಾಸಕರ ಪ್ರತಿಕೃತಿ ದಹನ ಮಾಡಲಾಗುವುದು ಎಂದರು.

    ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರಿಗೆ ಏಮ್ಸ್ ಮಂಜೂರಾತಿ ಕುರಿತಂತೆ ಮನವಿ ಸಲ್ಲಿಸುತ್ತಾ ಬರಲಾಗಿದೆ. ಹೋರಾಟಕ್ಕಿಂತ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಶಾಸಕರುಗಳು ಭರವಸೆ ನೀಡಿದ್ದರಿಂದ ಹೋರಾಟವನ್ನು ಕೈಬಿಡಲಾಗಿತ್ತು. ಆದರೆ ಶಾಸಕರಿಗೆ ಹೋರಾಟಗಾರರನ್ನು ಮುಖ್ಯಮಂತ್ರಿಗೆ ಭೇಟಿ ಮಾಡಿಸಲು ಸಾಧ್ಯವಾಗಿಲ್ಲ.

    ಜಿಲ್ಲೆಯ ಶಾಸಕರು ಹಲವು ವಿಷಯಗಳ ಬಗ್ಗೆ ಸದನದಲ್ಲಿ ಮಾತನಾಡುತ್ತಾರೆ. ಆದರೆ ಏಮ್ಸ್ ಮಂಜೂರಾತಿ ಕುರಿತಂತೆ ಒಬ್ಬರೂ ಧ್ವನಿ ಎತ್ತಲಿಲ್ಲ. ಸಂಸದ ರಾಜಾ ಅಮರೇಶ್ವರ ನಾಯಕ ಕೂಡಾ ಕೇಂದ್ರ ಸಚಿವರ ಮನವೊಲಿಸುವಲ್ಲಿ ವಿಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ಸಭೆ ನಡೆಸಿ ಹೋರಾಟದ ತೀರ್ಮಾನ ಕೈಗೊಳ್ಳಲಾಗಿದೆ.

    ರಾಜ್ಯ ಸರ್ಕಾರದ ಮನವಿ ಮೇರೆಗೆ ಈಗಾಗಲೇ ಹುಬ್ಬಳ್ಳಿ ಧಾರವಾಡದಲ್ಲಿ ಏಮ್ಸ್ ಸ್ಥಾಪನೆಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ರಾಜ್ಯಸಭೆಯಲ್ಲಿ ಸಚಿವರು ತಿಳಿಸಿದ್ದು, ಅದು ಗೊತ್ತಿದ್ದರೂ ಯಾವೊಬ್ಬ ಶಾಸಕರು ಅದರ ಬಗ್ಗೆ ಗಮನ ಹರಿಸದೆ ನಿರ್ಲಕ್ಷೃ ತೋರುತ್ತಿದ್ದಾರೆ. ಇದರಿಂದ ಐಐಟಿ ವಂಚನೆಯಾದಂತೆ ಏಮ್ಸ್‌ನಿಂದಲೂ ಜಿಲ್ಲೆ ವಂಚಿತವಾಗಲಿದೆ.

    ಪ್ರತಿಭಟನಾ ಮೆರವಣಿಗೆ ಕುರಿತು ಶಾಸಕರು ಹಾಗೂ ಇತರ ಜನಪ್ರತಿನಿಧಿಗಳಿಗೆ ಪತ್ರವನ್ನು ಕಳುಹಿಸಲಾಗುವುದು. ನಂತರದಲ್ಲಿ ಹಂತ ಹಂತವಾಗಿ ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಹೋರಾಟವನ್ನು ಆರಂಭಿಸಲು ವಿವಿಧ ಸಂಘಟನೆಗಳು ಭಾಗವಹಿಸಿದ್ದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಡಾ.ಬಸವರಾಜ ಕಳಸ ತಿಳಿಸಿದರು. ಸಮಿತಿ ಪದಾಧಿಕಾರಿಗಳಾದ ಜಿ.ವೆಂಕಟರೆಡ್ಡಿ, ಡಿ.ವೀರೇಶಕುಮಾರ, ಮುನಿರೆಡ್ಡಿ, ಖಾಜಾ ಅಸ್ಲಂ ಪಾಷಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts