More

    ಏಮ್ಸ್‌ಗಾಗಿ ಬೀದಿಗಿಳಿದ ವಿದ್ಯಾರ್ಥಿಗಳು- ರಾಯಚೂರಿಗಾದ ಅನ್ಯಾಯ ಸರಿಪಡಿಸಿ

    ರಾಯಚೂರು: ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿ ನಗರದಲ್ಲಿ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲಾ, ಕಾಲೇಜು ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.

    ಎಲ್‌ವಿಡಿ ಕಾಲೇಜಿನಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿತು. ನಂತರ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರಗೇಶಗೆ ಮನವಿ ಸಲ್ಲಿಸಿ, ಏಮ್ಸ್ ಮಂಜೂರಿಗೆ ಕೇಂದ್ರ ಸರ್ಕಾರಕ್ಕೆ ರಾಯಚೂರು ಹೆಸರನ್ನು ಮಾತ್ರ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

    ನಂಜುಂಡಪ್ಪ ವರದಿ ಶಿಫಾರಸಿನಂತೆ ಜಿಲ್ಲೆಗೆ ಮಂಜೂರು ಮಾಡಬೇಕಾಗಿದ್ದ ಐಐಟಿಯನ್ನು ಧಾರವಾಡಕ್ಕೆ ತೆಗೆದುಕೊಂಡು ಹೋಗಲಾಯಿತು. ಈಗ ಏಮ್ಸ್ ವಿಚಾರದಲ್ಲಿಯೂ ಜಿಲ್ಲೆಗೆ ಅನ್ಯಾಯ ಮಾಡುವ ನಿಟ್ಟಿನಲ್ಲಿ ರಾಯಚೂರು ಜತೆಗೆ ಧಾರವಾಡದ ಹೆಸರನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಜಿಲ್ಲೆಗೆ ಏಮ್ಸ್ ಮಂಜೂರಿಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಕೂಡಾ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನವನ್ನು ನಡೆಸದೆ, ಸರ್ಕಾರ ಮೇಲೆ ಒತ್ತಡ ಹಾಕದೆ ನಿರ್ಲಕ್ಷೃ ಧೋರಣೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.

    ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಏಮ್ಸ್ ಸ್ಥಾಪನೆಗೆ ರಾಯಚೂರು ಒಂದೇ ಹೆಸರನ್ನು ಶಿಫಾರಸು ಮಾಡಿ ಪತ್ರ ಕಳುಹಿಸಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎ.ಪಾಪಾರೆಡ್ಡಿ, ತಾರಾನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರಸಮಲ್ ಸುಖಾಣಿ, ಎಎಂಇ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬೆಟ್ಟಪ್ಪ ಗಧಾರ್, ಕಾರ್ಯದರ್ಶಿ ಬಸವರಾಜ ಪಾಟೀಲ್ ದರೂರು, ಟ್ಯಾಗೋರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಕೆ.ಅಮರೇಶ, ಪದಾಧಿಕಾರಿಗಳಾದ ನಾಗರಾಜ ಮಸ್ಕಿ, ಬಸ್ಸಪ್ಪ ತಿಪ್ಪಾರೆಡ್ಡಿ, ಅಂಬಾಪತಿ ಪಾಟೀಲ್, ರುದ್ರಪ್ಪ ಅಂಗಡಿ ಹಾಗೂ ವಿವಿಧ ಶಾಲೆ, ಕಾಲೇಜುಗಳು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಂಚಾರ ಅಸ್ತವ್ಯಸ್ತ: ಅಂಬೇಡ್ಕರ್ ವೃತ್ತದಲ್ಲಿ ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ ಪ್ರತಿಭಟನೆಯಲ್ಲಿ ತೊಡಗಿದ್ದರಿಂದ ಒಂದು ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಸ್ ಸೇರಿದಂತೆ ವಾಹನಗಳನ್ನು ನಗರಸಭೆ ರಸ್ತೆ ಮಾರ್ಗವಾಗಿ ಸಂಚರಿಸುವಂತೆ ಮಾಡಲಾಗಿತ್ತು. ಪ್ರತಿಭಟನೆ ವೇಳೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಸಂಚಾರಕ್ಕೆ ಸಮಸ್ಯೆಯಾಗಿತ್ತು. ನಂತರ ವಿದ್ಯಾರ್ಥಿಗಳು ದಾರಿ ಮಾಡಿಕೊಡುವ ಮೂಲಕ ಸಹಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts