More

    ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆ, ಕೌನ್ಸಿಲಿಂಗ್ ಆಧರಿಸಿ ಜಿಲ್ಲೆಯಲ್ಲಿ 23 ಸ್ಥಾನಗಳಿಗೆ ನಿಯೋಜನೆ

    ರಾಯಚೂರು: ಶಾಲೆಗೆ ಪ್ರವೇಶ ಪಡೆದ ಮಕ್ಕಳ ಸಂಖ್ಯೆಗೆ ಅನುಪಾತಕ್ಕಿಂತ ಹೆಚ್ಚಿನ ಶಿಕ್ಷಕರು ಇರುವ ಅನುದಾನಿತ ಪ್ರಾಥಮಿಕ ಶಾಲೆಗಳನ್ನು ಗುರುತಿಸಿ ಅಲ್ಲಿನ ಶಿಕ್ಷಕರನ್ನು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ಇಲ್ಲದ ಶಾಲೆಗಳಿಗೆ ನಿಯೋಜನೆ ಮಾಡುವ ಮೂಲಕ ಮರು ಹೊಂದಾಣಿಕೆ ಮಾಡಲಾಗಿದೆ.

    ಜಿಲ್ಲೆಯ ಕೆಲವು ಅನುದಾನಿತ ಶಾಲೆಗಳಲ್ಲಿ ಕೆಲವು ವರ್ಷಗಳಿಂದ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಕೆಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗಿಂತ ಶಿಕ್ಷಕರ ಸಂಖ್ಯೆ ಹೆಚ್ಚಾಗಿದೆ. ಮತ್ತೊಂದೆಡೆ ಕೆಲವೊಂದು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರೂ ಶಿಕ್ಷಕರ ಸಂಖ್ಯೆ ಕಡಿಮೆಯಿದೆ.

    ಈ ಹಿನ್ನೆಲೆಯಲ್ಲಿ ಇಲಾಖೆ ಹೆಚ್ಚುವರಿ ಶಿಕ್ಷಕರನ್ನು ಮರು ಹೊಂದಾಣಿಕೆ ಮಾಡುವ ನಿಟ್ಟಿನಲ್ಲಿ ಶಿಕ್ಷಕರ ಕೌನ್ಸೆಲಿಂಗ್ ನಡೆಸಿ ಶಾಲೆಗಳಿಗೆ ನಿಯೋಜನೆ ಮಾಡಿದೆ. ಜಿಲ್ಲೆಯಲ್ಲಿ ಈ ರೀತಿಯಾಗಿ ಒಟ್ಟು 23 ಶಿಕ್ಷಕರನ್ನು ಮರು ಹೊಂದಾಣಿಕೆ ಮಾಡಲಾಗಿದೆ. ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಅತ್ಯಧಿಕ 21 ಅನುದಾನಿತ ಪ್ರಾಥಮಿಕ ಶಾಲೆಗಳಿದ್ದು, ರಾಯಚೂರು ತಾಲೂಕಿನಲ್ಲಿ 17, ಲಿಂಗಸುಗೂರು ತಾಲೂಕಿನಲ್ಲಿ 11, ಮಾನ್ವಿ ತಾಲೂಕಿನಲ್ಲಿ 6, ದೇವದುರ್ಗ ತಾಲೂಕಿನಲ್ಲಿ 3 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 58 ಅನುದಾನಿತ ಪ್ರಾಥಮಿಕ ಶಾಲೆಗಳಿವೆ.

    ಕೌನ್ಸೆಲಿಂಗ್ ನಡೆಸುವ ಮೂಲಕ ರಾಯಚೂರು ಮತ್ತು ಲಿಂಗಸುಗೂರು ತಾಲೂಕಿನಲ್ಲಿ ತಲಾ 7 ಶಿಕ್ಷಕರು, ಸಿಂಧನೂರು ತಾಲೂಕಿನಲ್ಲಿ 6 ಮತ್ತು ಮಾನ್ವಿ ತಾಲೂಕಿನಲ್ಲಿ 3 ಶಿಕ್ಷಕರು ಸೇರಿದಂತೆ ಒಟ್ಟು 23 ಶಿಕ್ಷಕರನ್ನು ಜಿಲ್ಲೆಯಲ್ಲಿ ಮರು ಹೊಂದಾಣಿಕೆ ಮಾಡಲಾಗಿದೆ. ದೇವದುರ್ಗ ತಾಲೂಕಿನಲ್ಲಿ ಮರು ಹೊಂದಾಣಿಕೆ ನಡೆದಿಲ್ಲ.

    ಅನುಪಾತ ಹೇಗೆ?
    ಇಲಾಖೆ ನಿಯಮದ ಪ್ರಕಾರ 40 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿರಬೇಕು. ಈ ನಿಯಮಕ್ಕೆ ಅನುದಾನಿತ ಶಾಲೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ಗುರುತಿಸಿ ಹೆಚ್ಚುವರಿಯಾಗಿದ್ದರೆ ಅವರನ್ನು ಬೇರೆ ಅನುದಾನಿತ ಶಾಲೆಗೆ ಮರು ಹೊಂದಾಣಿಕೆ ಮಾಡಲಾಗಿದೆ. ಇದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯದಾದರೂ ಕೆಲವೊಂದು ಅನುದಾನಿತ ಶಾಲೆಯಲ್ಲಿ ಇಬ್ಬರು, ಮೂವರು ಶಿಕ್ಷಕರು ಮಾತ್ರ ಉಳಿಯುತ್ತಿದ್ದು, ಅವರು ನಿವೃತ್ತಿ ಹೊಂದಿದಲ್ಲಿ ಅತಿಥಿ ಶಿಕ್ಷಕರನ್ನಿಟ್ಟುಕೊಂಡು ಶಾಲೆಗಳು ಮುನ್ನಡೆಸಬೇಕಾದ ಅನಿವಾರ್ಯತೆ ಎದುರಾಗಲಿದೆ.

    ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅನುದಾನಿತ ಶಾಲೆಗಳಲ್ಲಿನ ಹೆಚ್ಚುವರಿ ಶಿಕ್ಷಕರನ್ನು ಕೌನ್ಸೆಲಿಂಗ್ ನಡೆಸುವ ಮೂಲಕ ಮರು ಹೊಂದಾಣಿಕೆ ಮಾಡಲಾಗಿದ್ದು, ಶಿಕ್ಷಕರು ಕೂಡಾ ಅದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದ್ದಾರೆ.
    | ಎಚ್.ಸುಖದೇವ, ಜಿಲ್ಲಾ ಶಿಕ್ಷಣಾಧಿಕಾರಿ, ರಾಯಚೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts