More

    ರಾಹುತನಕಟ್ಟಿ ಗ್ರಾಮಸ್ಥರು ಕೊಡ ನೀರಿಗೆ ಅರ್ಧಗಂಟೆ ಕಾಯುವ ಸ್ಥಿತಿ

    ರಾಣೆಬೆನ್ನೂರ: ಬೇಸಿಗೆ ಕಾಲಿಡುವ ಮುನ್ನವೇ ತಾಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

    ಗ್ರಾಮದಲ್ಲಿ 300ಕ್ಕೂ ಅಧಿಕ ಮನೆಗಳಿದ್ದು, ಅಂದಾಜು 2 ಸಾವಿರ ಜನಸಂಖ್ಯೆಯಿದೆ. ಹಲವಾರು ವರ್ಷಗಳಿಂದಲೂ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ಕಟ್ಟಿಟ್ಟ ಬುತ್ತಿಯಂತಾಗಿದೆ.

    ಗ್ರಾಮದಲ್ಲಿ ಎರಡು ಕಡೆ ಕುಡಿಯುವ ನೀರಿನ ನಲ್ಲಿ ಅಳವಡಿಸಲಾಗಿದೆ. ಆದರೂ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ. ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಇದೆಯಾದರೂ ಇನ್ನೂ ಆರಂಭಗೊಂಡಿಲ್ಲ. ಶುದ್ಧ ನೀರು ಒದಗಿಸುವಂತೆ ಗ್ರಾಪಂ, ತಾಪಂಗೆ ಅಲೆದಾಡಿ ಜನತೆ ಸುಸ್ತಾಗಿ ಹೋಗಿದ್ದಾರೆ. ತಾಲೂಕು ಆಡಳಿತ ಹಾಗೂ ಗ್ರಾಪಂ ವತಿಯಿಂದ ನೀರು ಪೂರೈಸುವ ಕೆಲಸವಾಗುತ್ತಿಲ್ಲ. ಗ್ರಾಮದಲ್ಲಿ ಬೋರ್​ವೆಲ್ ನೀರೂ ಸಮರ್ಪಕವಾಗಿ ಲಭ್ಯವಿಲ್ಲ. ಆದ್ದರಿಂದ ಟ್ಯಾಂಕರ್ ಮೂಲಕ ಪೂರೈಸುವಂತೆ ಗ್ರಾಪಂ ಅಧಿಕಾರಿಗಳಿಗೆ ಕೇಳಿಕೊಂಡರೂ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

    ಗ್ರಾಮದ ಮುಖ್ಯರಸ್ತೆಗೆ ಹೊಂದಿಕೊಂಡು ಎರಡು ನಲ್ಲಿಗಳಿವೆ. ವಿದ್ಯುತ್ ಇದ್ದಾಗ ಬೋರ್​ವೆಲ್ ನೀರು ದೊರಕುತ್ತಿದೆ. ಅದೂ ಒಂದು ಕೊಡ ನೀರಿಗೆ ಅರ್ಧಗಂಟೆ ಕಾಯಬೇಕು. ಆದರೆ, ಕೂಲಿ-ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡವರಿಗೆ ಇದು ನುಂಗಲಾರದ ತುತ್ತಾಗಿದೆ. ನೀರಿಗಾಗಿ ಕೂಲಿ ಕೆಲಸ ಬಿಡಬೇಕಾದ ಸ್ಥಿತಿ ನಿರ್ವಣವಾಗಿದೆ.

    ತಾಲೂಕು ಆಡಳಿತ ಹಾಗೂ ಗ್ರಾಪಂ ಅಧಿಕಾರಿಗಳು ಕೂಡಲೆ ಸೂಕ್ತ ಕ್ರಮ ಕೈಗೊಂಡು ಗ್ರಾಮದ ಶುದ್ಧ ನೀರಿನ ಘಟಕ ದುರಸ್ತಿ ಪಡಿಸಬೇಕು. ಜತೆಗೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ನೀರಿಗಾಗಿ ತೋಟ ಆಶ್ರಯ: ರಾಣೆಬೆನ್ನೂರ ತಾಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ಅಗತ್ಯದಷ್ಟು ನೀರ ಲಭ್ಯವಾಗದ್ದರಿಂದ ಜನ ಅಕ್ಕಪಕ್ಕದ ತೋಟ, ಗದ್ದೆಗಳಿಗೆ ಹೋಗಿ ಬೋರ್​ವೆಲ್ ನೀರು ತರುತ್ತಿದ್ದಾರೆ. ದೂರದ ಜಮೀನುಗಳಿಂದ ನೀರು ಹೊತ್ತು ತರುವುದೇ ತಲೆ ನೋವಾಗಿದೆ. ಅದಕ್ಕಾಗಿ ಬಹಳಷ್ಟು ಸಮಯವೂ ವ್ಯರ್ಥವಾಗುತ್ತಿದೆ ಎಂದು ಕೂಲಿ ಕಾರ್ವಿುಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಒಂದು ಕೊಡ ನೀರು ತುಂಬಿಕೊಳ್ಳಲು ಅರ್ಧತಾಸು ಕಾಯಬೇಕು. ಬಳಕೆಗೆ ಒತ್ತೊಟ್ಟಿಗಿರಲಿ, ಕುಡಿಯಲೂ ನೀರು ಸಿಗುತ್ತಿಲ್ಲ. ಅಧಿಕಾರಿಗಳಿಗೆ ನೀರಿನ ಸಮಸ್ಯೆ ಹೇಳಿ ಹೇಳಿ ಬೇಸರವಾಗಿದೆ. ಯಾರೊಬ್ಬರೂ ಇತ್ತ ಸುಳಿದಿಲ್ಲ.

    | ಹೇಮವ್ವ ಎಲ್., ರಾಹುತನಕಟ್ಟಿ ಗ್ರಾಮಸ್ಥೆ

    ಬೋರ್​ವೆಲ್ ನೀರು ಪೂರೈಕೆ ಹಿನ್ನೆಲೆಯಲ್ಲಿ ಶುದ್ಧ ನೀರಿನ ಘಟಕ ಇನ್ನೂ ಆರಂಭಿಸಿಲ್ಲ. ಆದಷ್ಟು ಬೇಗ ಆರಂಭಿಸಲು ಗ್ರಾಪಂ ಪಿಡಿಒಗೆ ಸೂಚಿಸುತ್ತೇನೆ. ಸದ್ಯ ಬೋರ್​ವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ. ಅಗತ್ಯ ಬಿದ್ದರೆ ಇನ್ನೊಂದು ಬೋರ್ ವ್ಯವಸ್ಥೆ ಕಲ್ಪಿಸಲಾಗುವುದು.

    | ಟಿ.ಆರ್. ಮಲ್ಲಾಡದ, ರಾಣೆಬೆನ್ನೂರ ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts