More

    ಕೋವಿಡ್​ ನಿಯಮ ಪಾಲನೆ ವಿಚಾರದಲ್ಲಿ ಕಾಂಗ್ರೆಸ್​-ಬಿಜೆಪಿ ಕಚ್ಚಾಟದ ನಡುವೆ ದೆಹಲಿ ಪ್ರವೇಶಿಸಿದ ಭಾರತ್​ ಜೋಡೋ ಯಾತ್ರೆ

    ನವದೆಹಲಿ: ಇತ್ತೀಚೆಗಷ್ಟೇ ನೂರು ದಿನ ಪೂರೈಸಿದ ಕಾಂಗ್ರೆಸ್​ ನಾಯಕ ಹಾಗೂ ವಯನಾಡು ಸಂಸದ ರಾಹುಲ್​ ಗಾಂಧಿ ನೇತೃತ್ವದ ಭಾರತ್​ ಜೋಡೋ ಯಾತ್ರೆ ಇಂದು ರಾಷ್ಟ್ರ ರಾಜಧಾನಿ ದೆಹಲಿ ಪ್ರವೇಶ ಮಾಡಿದೆ. ಕರೊನಾ ಭೀತಿ ಶುರುವಾಗಿದ್ದು, ಕೋವಿಡ್​ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಕೇಂದ್ರ ಆರೋಗ್ಯ ಸಚಿವರ ಎಚ್ಚರಿಕೆಯ ನಡುವೆಯೂ ಭಾರತ್​ ಜೋಡೋ ಯಾತ್ರೆ ದೆಹಲಿಗೆ ಎಂಟ್ರಿ ನೀಡಿದ್ದು, ಬಿಜೆಪಿ ಮತ್ತು ಕಾಂಗ್ರೆಸ್​ ನಡುವಿನ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ಇದು ಕಾರಣವಾಗಲಿದೆ.

    ಜೈರಾಮ್ ರಮೇಶ್, ಪವನ್ ಖೇರಾ, ಭೂಪಿಂದರ್ ಸಿಂಗ್ ಹೂಡಾ, ಕುಮಾರಿ ಸೆಲ್ಜಾ ಮತ್ತು ರಣದೀಪ್ ಸುರ್ಜೆವಾಲಾ ಸೇರಿದಂತೆ ಹಲವಾರು ಪಕ್ಷದ ನಾಯಕರು ರಾಹುಲ್​ ಗಾಂಧಿಯವರೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ, ಸ್ವಲ್ಪ ಸಮಯದ ಬಳಿಕ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ರಾಹುಲ್ ಜೊತೆಗೂಡಿದರು. ಸೋನಿಯಾ ಗಾಂಧಿ ಅವರು ಯಾತ್ರೆಯಲ್ಲಿ ಭಾಗವಹಿಸುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ಅವರು ಅಕ್ಟೋಬರ್‌ನಲ್ಲಿ ಕರ್ನಾಟಕದಲ್ಲಿ ನಡೆದ ಕಾಂಗ್ರೆಸ್‌ನ ಮೆಗಾ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

    ಇಂದು ಮುಂಜಾನೆ ಯಾತ್ರೆಯು ಬಾದರ್‌ಪುರದಿಂದ ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸುತ್ತಿದ್ದಂತೆ, ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅನಿಲ್ ಚೌಧರಿ ಅವರು ರಾಹುಲ್ ಜಿಂದಾಬಾದ್ ಘೋಷಣೆ ಕೂಗುವ ಮೂಲಕ ಕಾಂಗ್ರೆಸ್​ ಮತ್ತು ಇತರ ಪಕ್ಷದ ನಾಯಕರು ಮತ್ತು ಪಾದಯಾತ್ರಿಗಳನ್ನು ಸ್ವಾಗತಿಸಿದರು.

    ರಾಜಧಾನಿ ಪ್ರವೇಶಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ‘ನಫ್ರತ್ ಕಾ ಬಜಾರ್’ (ದ್ವೇಷದ ಮಾರುಕಟ್ಟೆ) ನಡುವೆ ‘ಮೊಹಬ್ಬತ್ ಕಿ ದುಕಾನ್’ (ಪ್ರೀತಿಯ ಅಂಗಡಿ) ತೆರೆಯುವುದು ತಮ್ಮ ಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದು ಪುನರುಚ್ಚರಿಸಿದರು. ಪ್ರತಿ ರಾಜ್ಯದಲ್ಲೂ ಲಕ್ಷಾಂತರ ಜನರು ಯಾತ್ರೆಗೆ ಸೇರಿ ಬೆಂಬಲಿಸಿದ್ದಾರೆ. ದೇಶದ ಜನಸಾಮಾನ್ಯರು ಈಗ ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಯಾತ್ರೆಯ ಉದ್ದಕ್ಕೂ ದ್ವೇಷದ ಬಜಾರ್​ನಲ್ಲಿ ಪ್ರೀತಿಯ ಅಂಗಡಿ ತೆರೆಯಲು ನಾವು ಇಲ್ಲಿದ್ದೇವೆ ಎಂದು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಜನರಿಗೆ ಹೇಳಿದ್ದೇನೆ ಎಂದು ರಾಹುಲ್​ ಗಾಂಧಿ ತಿಳಿಸಿದರು.

    ಬಿಜೆಪಿ ಮತ್ತು ಆರ್​ಎಸ್​ಎಸ್​ ದ್ವೇಷವನ್ನು ಹರಡಿದರೆ, ನಾವು (ಕಾಂಗ್ರೆಸ್​) ಪ್ರೀತಿಯನ್ನು ಹರಡಿದ್ದೇವೆ ಎಂದು ರಾಹುಲ್​ ಗಾಂಧಿ ಹೇಳಿದರು.

    ಇನ್ನು ಚೀನಾದಲ್ಲಿ ಕರೊನಾ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್​ ಮಾಂಡೋವಿಯಾ ಅವರು ರಾಹುಲ್​ ಗಾಂಧಿ ಅವರಿಗೆ ಪತ್ರ ಬರೆದು ಯಾತ್ರೆಯಲ್ಲಿ ಕೋವಿಡ್​ ನಿಯಮಗಳನ್ನು ಕಟ್ಟನಿಟ್ಟಾಗಿ ಪಾಲಿಸಿ ಅಥವಾ ಯಾತ್ರೆ ರದ್ದು ಮಾಡಿ ಎಂದು ಹೇಳಿದ್ದಾರೆ. ಆರೋಗಯ ಸಚಿವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ ರಾಹುಲ್​ ಗಾಂಧಿ, ಇತ್ತೀಚೆಗೆ ಪ್ರಧಾನ ಮಂತ್ರಿ ಅವರ ಗುಜರಾತ್​ ಚುನಾವಣಾ ಪ್ರಚಾರ ಹಾಗೂ ರಾಜಸ್ಥಾನದ ಜನಾಕ್ರೋಶ ಯಾತ್ರೆಯನ್ನು ಉದಾಹರಣೆಯಾಗಿ ನೀಡಿ ತಿರುಗೇಟು ನೀಡಿದರು. ಬಿಜೆಪಿ ಅನೇಕ ರಾಜ್ಯಗಳಲ್ಲಿ ಯಾತ್ರೆಯನ್ನು ನಡೆಸುತ್ತಿದೆ. ಆದರೆ, ಆರೋಗ್ಯ ಸಚಿವರು ನಮಗೆ ಮಾತ್ರ ಪತ್ರ ಕಳುಹಿಸಿದ್ದಾರೆಂದು ಗುಡುಗಿದರು.

    ಭಾರತ್ ಜೋಡೋ ಯಾತ್ರೆಗೆ ಸಿಕ್ಕಿರುವ ಜನರ ಪ್ರೀತಿಗೆ ಹೆದರಿ ರಾಹುಲ್​ ಗಾಂಧಿಯವರ ಯಾತ್ರೆಯನ್ನು ನಿಲ್ಲಿಸಲು ಬಿಜೆಪಿ ಬಯಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

    ಇನ್ನೂ ಇಂದಿನ ಯಾತ್ರೆಯು ಆಶ್ರಮ ಚೌಕ್‌ನಲ್ಲಿ ಮೂರು ಗಂಟೆಗಳ ಕಾಲ ವಿರಾಮ ಪಡೆಯಲಿದ್ದು, ಮತ್ತೆ ಮಧ್ಯಾಹ್ನ 1 ಗಂಟೆಗೆ ತನ್ನ ಪ್ರಯಾಣವನ್ನು ಪುನರಾರಂಭಿಸುತ್ತದೆ. ಮಥುರಾ ರಸ್ತೆ, ಇಂಡಿಯಾ ಗೇಟ್ ಮತ್ತು ITO ಮೂಲಕ ಪ್ರಯಾಣಿಸಿದ ನಂತರ ಯಾತ್ರೆ ಕೆಂಪು ಕೋಟೆಯಲ್ಲಿ ಮುಕ್ತಾಯಗೊಳ್ಳುತ್ತದೆ. ಡಿಸೆಂಬರ್ 16 ರಂದು 100 ದಿನಗಳನ್ನು ಪೂರೈಸಿದ ಯಾತ್ರೆಯು ನಾಳೆಯಿಂದ ಒಂಬತ್ತು ದಿನಗಳ ವರ್ಷಾಂತ್ಯದ ವಿರಾಮವನ್ನು ತೆಗೆದುಕೊಳ್ಳುತ್ತದೆ ಮತ್ತು ಜನವರಿ 3ರರಿಂದ ಮತ್ತೆ ದೆಹಲಿಯಿಂದ ಯಾತ್ರೆ ಪುನರಾರಂಭವಾಗಲಿದೆ.

    ಭಾರತ್​ ಜೋಡೋ ಯಾತ್ರೆಯಿಂದ ಟ್ರಾಫಿಕ್​ ಜಾಮ್​ ಉಂಟಾಗಲಿದ್ದು, ಪ್ರಯಾಣಿಕರು ಆದಷ್ಟು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಕೆ ಮಾಡುವಂತೆ ಟ್ರಾಫಿಕ್ ಸಲಹೆಯನ್ನು ಬಿಡುಗಡೆ ಮಾಡಿದ್ದಾರೆ. ಬದರ್‌ಪುರ್‌ನಿಂದ ಕೆಂಪು ಕೋಟೆಯವರೆಗೆ ವಾಹನ ದಟ್ಟಣೆಯು ಭಾರೀ ಪ್ರಮಾಣದಲ್ಲಿ ಇರುವ ನಿರೀಕ್ಷೆಯಿದೆ. ಪ್ರಯಾಣಕ್ಕೆ ತೊಂದರೆಯಾಗದಂತೆ ಅಲ್ಲಲ್ಲಿ ಮಾರ್ಗ ಬದಲಾವಣೆ ಸಹ ಮಾಡಲಾಗಿದೆ. (ಏಜೆನ್ಸೀಸ್​)

    ಅಬ್ರಹಾರ್‌ ಗ್ಯಾಂಗ್ ಅಟ್ಟಹಾಸ: ಪೊಲೀಸರ ಮೇಲೆಯೇ ಅಟ್ಯಾಕ್ ಮಾಡುವ ಗ್ಯಾಂಗ್​ ನಗರದಲ್ಲಿ ಮತ್ತೆ ಆ್ಯಕ್ಟಿವ್

    ಕಣ್ಣಿಗೊಂದು ಸವಾಲ್​: ತೀಕ್ಷ್ಣ ದೃಷ್ಟಿ ಹೊಂದಿರುವವರು ಮಾತ್ರ ಈ ಫೋಟೋದಲ್ಲಿರೋ ಜಿಂಕೆ ಗುರುತಿಸಲು ಸಾಧ್ಯ!

    ಸಿನಿಮಾ ಬಿಡುಗಡೆಯಾಗಿ 3 ತಿಂಗಳಾದ್ಮೇಲೆ ಕಾಂತಾರ ಕ್ಲೈಮ್ಯಾಕ್ಸ್​ನ ಅಸಲಿ ಸತ್ಯ ಬಿಚ್ಚಿಟ್ಟ ರಿಷಭ್​ ಶೆಟ್ಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts