ರಬಕವಿ/ಬನಹಟ್ಟಿ: ಪ್ರಧಾನಮಂತ್ರಿ ಭಾರತೀಯ ಜನೌಷಧ ಅಡಿ ಜನರಿಕ್ ಔಷಧ ಮಾರಾಟ ಮಾಡುತ್ತಿದ್ದು, ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ವರದಾನವಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ನಗರದ ಮಂಗಳವಾರ ಪೇಟೆಯಲ್ಲಿ ಗುರುವಾರ ಸ್ವಸ್ಥ ಜನೌಷಧ ಸೇವಾ ಜನರಿಕ್ ಮೆಡಿಸಿನ್ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೆಡಿಕಲ್ ಕೌನ್ಸಿಲ್ ಆಲ್ ಇಂಡಿಯಾ ದೇಶದ ಎಲ್ಲ ವೈದ್ಯರಿಗೂ ಜನರಿಕ್ ಔಷಧಗಳನ್ನು ಬರೆದುಕೊಡುವಂತೆ ಶಿಫಾರಸು ಮಾಡಿದೆ. ಕ್ಯಾನ್ಸರ್, ಎಚ್‌ಐವಿ, ಹೃದಯರೋಗ, ಮೂತ್ರಪಿಂಡರೋಗ, ಮಾನಸಿಕ ರೋಗಗಳಿಗೆ ಕಡಿಮೆ ಬೆಲೆಗೆ ಔಷಧಗಳನ್ನು ನೀಡಲಾಗುತ್ತದೆ. ಜನರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಸುಣದೋಳಿಯ ಜಡಿಸಿದ್ಧೇಶ್ವರ ಮಠದ ಶಿವಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಬಾಬಾಗೌಡ ಪಾಟೀಲ, ಧರೆಪ್ಪ ಉಳ್ಳಾಗಡ್ಡಿ, ಸೋಮನಾಥ ಗೊಂಬಿ, ಬಸಯ್ಯ ಕಾಡದೇವರ, ಸಲೀಂ ಸೈಯ್ಯದ್, ಅಶೋಕ ಗರಬುಡೆ, ಸುಹಾಸ ಪಾಟೀಲ, ಶ್ರೀಪಾದ ಕೋಲಟ್ಕರ, ಪಂಕಜ ಖಡೇದ ಉಪಸ್ಥಿತರಿದ್ದರು. ಈರಯ್ಯ ಜಡಿಮಠ ಸ್ವಾಗತಿಸಿದರು. ಮಲ್ಲಿಕಾರ್ಜುನ ತುಂಗಳ ನಿರೂಪಿಸಿದರು. ಶಂಕರ ಕೆಸರಗೊಪ್ಪ ವಂದಿಸಿದರು.