More

    ತಾಲೂಕು ಕೇಂದ್ರ ಘೋಷಣೆಗೆ ಸೀಮಿತ

    ರಬಕವಿ/ಬನಹಟ್ಟಿ: ರಬಕವಿ-ಬನಹಟ್ಟಿ ನಗರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ ಮೂರು ವರ್ಷ ಗತಿಸಿದರೂ ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಚೇರಿ ಹೊರತುಪಡಿಸಿ ಉಳಿದ ಯಾವ ಕಚೇರಿಗಳು ಕಾರ್ಯಾರಂಭ ಆಗದಿರುವುದರಿಂದ ಜನತೆಗೆ ಸರ್ಕಾರಿ ಸೌಲಭ್ಯಗಳು ಮರೀಚಿಕೆಯಾಗುತ್ತಿವೆ.

    ಹೆಸರಿಗೆ ಮಾತ್ರ ತಾಲೂಕು ಕೇಂದ್ರವಾಗಿದ್ದು, ಆರೋಗ್ಯ, ಕಂದಾಯ, ಶೈಕ್ಷಣಿಕ ಸೇರಿ ಇತರ ಸಂಬಂಧಿಸಿದ ಕೆಲಸಗಳಿಗೆ ಜಮಖಂಡಿ ತಾಲೂಕಿಗೆ ಹೋಗುವುದು ಮಾತ್ರ ಜನರಿಗೆ ತಪ್ಪುತ್ತಿಲ್ಲ.

    ಪೂರಕ ಅನುದಾನವಿಲ್ಲ
    ರಾಜ್ಯ ಬಜೆಟ್‌ನಲ್ಲಿ ತಾಲೂಕು ಕೇಂದ್ರಗಳ ಅಭಿವೃದ್ಧಿಗೆ ಪೂರಕ ಅನುದಾನ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿದೆ. ಹಣದ ಕ್ರೋಡೀಕರಣವಾದ ಬಳಿಕ ಅಭಿವೃದ್ಧಿ ಮಾಡುವುದಾಗ ಹೇಳುತ್ತಿರುವ ಸರ್ಕಾರದ ಕ್ರಮ ಎಷ್ಟು ಸರಿ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

    ಯಾವ್ಯಾವ ಇಲಾಖೆಗಳಿಲ್ಲ
    ಪ್ರಮುಖವಾಗಿ ಉಪ ನೋಂದಣಿ, ಆರೋಗ್ಯ, ಶಿಕ್ಷಣ, ಕೃಷಿ, ಶಿಶು ಅಭಿವೃದ್ಧಿ, ಸಮಾಜ ಕಲ್ಯಾಣ, ಪಶು ಸಂಗೋಪನೆ, ಬಿಸಿಎಂ, ಕರ್ನಾಟಕ ಭೂ ಸೇನಾ, ತೋಟಗಾರಿಕೆ, ರೇಷ್ಮೆ, ಲೋಕೋಪಯೋಗಿ, ಮೀನುಗಾರಿಕೆ ಹೀಗೆ ಹತ್ತು ಹಲವು ಇಲಾಖೆ ಕಚೇರಿಗಳು ಇಲ್ಲದೆ ಇದು ತಾಲೂಕು ಕೇಂದ್ರವಾಗಿದೆ. ಈ ಎಲ್ಲ ಇಲಾಖೆಗಳಿಗೆ ಸಂಬಂಧಿಸಿದ ಕೆಲಸಗಳೇನೆ ಇದ್ದರೂ ಇಲ್ಲಿನ ನಾಗರಿಕರು ಜಮಖಂಡಿಗೆ ಹೋಗಬೇಕಾದ ಪರಿಸ್ಥಿತಿ ಇದೆ.

    ರಬಕವಿ-ಬನಹಟ್ಟಿಗೆ ತಾಲೂಕು ಕಚೇರಿಗಳಿಗೆ ಸೂಕ್ತವಾದ ಸ್ಥಳಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಖಾಸಗಿ ವ್ಯಕ್ತಿಗಳು ಗುರುತಿಸಿದ್ದಾರೆ. ಸರ್ಕಾರ ಕಾರ್ಯಾರಂಭ ಮಾಡುವುದೊಂದೆ ಬಾಕಿ, ಹೀಗಿದ್ದಾಗ್ಯೂ ವಿಳಂಬವೇಕೆ? ಸ್ಥಳೀಯ ಶಾಸಕರು ಕಾಳಜಿ ಪೂರ್ವಕವಾಗಿ ಕಚೇರಿಗಳನ್ನು ತೆರೆಯಬೇಕು ಎನ್ನುತ್ತಾರೆ ತಾಲೂಕು ಹೋರಾಟ ಸಮಿತಿ ಕಾರ್ಯದರ್ಶಿ ನೀಲಕಂಠ ಮುತ್ತೂರ.

    ಶೇ.70 ರಷ್ಟು ಇಲಾಖೆಗಳ ಸಮಸ್ಯೆಯಿದೆ. ಸರ್ಕಾರ ವಿಳಂಬನೀತಿ ಅನುಸರಿಸದೆ ಕೂಡಲೇ ಕಾರ್ಯರೂಪಕ್ಕೆ ತರಬೇಕು. ಇಲ್ಲವಾದಲ್ಲಿ ತಾಲೂಕು ಸಮನ್ವಯ ಸಮಿತಿಯಿಂದ ಮತ್ತೆ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ ಎಂದು ರಬಕವಿ-ಬನಹಟ್ಟಿ ತಾಲೂಕು ಹೋರಾಟ ಸಮಿತಿ ಮಾಜಿ ಅಧ್ಯಕ್ಷ ಭೀಮಶಿ ಮಗದುಮ್ ಎಚ್ಚರಿಸಿದ್ದಾರೆ.

    ಸರ್ಕಾರಗಳಿಗೆ ಸಂಕಷ್ಟ ಹೊಸದಲ್ಲ. ರಾಜ್ಯದಲ್ಲಿ ಅಧಿಕೃತ ಘೋಷಣೆಯಾದ ಎಲ್ಲ 49 ತಾಲೂಕುಗಳಿಗೆ ಪೂರ್ಣ ಪ್ರಮಾಣದ ಕಚೇರಿ ಕಾರ್ಯಾರಂಭಕ್ಕೆ ಇಚ್ಛಾಶಕ್ತಿ ಇಲ್ಲದಿರುವುದು ಎದ್ದು ಕಾಣುತ್ತಿದೆ.
    ಶಂಕರ ಸೊರಗಾಂವಿ, ನಿಕಟಪೂರ್ವ ಅಧ್ಯಕ್ಷ, ರಬಕವಿ-ಬನಹಟ್ಟಿ ತಾಲೂಕು ಹೋರಾಟ ಸಮಿತಿ

    ಕರೊನಾ ಕಾರಣದಿಂದಾಗಿ ತಾಲೂಕು ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಶಾಸಕಾಂಗದಲ್ಲಿಯೂ ಪ್ರಸ್ತಾಪಿಸಿ, ಮುಖ್ಯಮಂತ್ರಿಗಳಿಗೂ ಪತ್ರ ನೀಡಲಾಗಿದೆ. ಹಲವಾರು ಸಮಸ್ಯೆಗಳಿಂದಾಗಿ ವಿಳಂಬಕ್ಕೆ ಕಾರಣವಾಗಿದೆ. ರಬಕವಿ ಬಸ್ ನಿಲ್ದಾಣ ಹತ್ತಿರದ ನಾಯಕರ ಗುಡ್ಡದಲ್ಲಿ 10 ರಿಂದ 15 ಕೋಟಿ ರೂ.ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ನಿರ್ಮಿಸಬೇಕೆಂದು ನೀಲಿನಕ್ಷೆಯನ್ನೂ ತಯಾರಿಸಲಾಗಿದೆ. ಅತಿ ಅವಶ್ಯಕ ಕಚೇರಿಗಳನ್ನು ಶೀಘ್ರದಲ್ಲಿ ಆರಂಭಿಸಲಾಗುವುದು.
    ಸಿದ್ದು ಸವದಿ, ಶಾಸಕ, ತೇರದಾಳ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts