More

    ಸೂಪರ್​ ಟೆಕ್​ ಅವಳಿ ಗೋಪುರ ನೆಲಸಮ! 55 ಸಾವಿರ ಟನ್ ಅವಶೇಷ ತೆರವಿಗೆ ಬೇಕಿದೆ ಇಷ್ಟೊಂದು ಸಮಯ…

    ನೋಯ್ಡಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಬೃಹತ್​ ಅವಳಿ ಗೋಪುರ ಸೂಪರ್​ ಟೆಕ್​ ಅಪೆಕ್ಸ್​ ಮತ್ತು ಸಿಯಾನಿಯನ್ನು ಭಾರಿ ಸ್ಫೋಟಕ ಸಹಾಯದಿಂದ ಇಂದು ಮಧ್ಯಾಹ್ನ ನೆಲಸಮ ಮಾಡಲಾಯಿತು. 2004ರಲ್ಲಿ ಸುಮಾರು 70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಈ ಗೋಪುರವನ್ನು ಇದೀಗ 20 ಕೋಟಿ ರೂಪಾಯಿ ಖರ್ಚು ಮಾಡಿ ಕೇವಲ 9 ಸೆಕೆಂಡ್​ಗಳಲ್ಲಿ ಧರೆಗುರುಳಿಸಲಾಯಿತು.

    ಅವಳಿ ಗೋಪುರ ನೆಲಸಮವೇನೋ ಆಯಿತು. ಇದೀಗ ಅಧಿಕಾರಿಗಳ ಮುಂದಿರುವ ಸವಾಲು ಏನೆಂದರೆ, ಅವಶೇಷಗಳು ತುಂಬಿರುವ ಆ ಸ್ಥಳವನ್ನು ಸ್ವಚ್ಛಗೊಳಿಸುವುದು. ಸ್ಫೋಟದಿಂದ ಸುಮಾರು 55 ಸಾವಿರ ಟನ್​ ಅವಶೇಷ ಉತ್ಪತಿಯಾಗಿದ್ದು, ಬಹುಶಃ ಅದನ್ನು ತೆರವು ಮಾಡಲು ಸುಮಾರು 3 ತಿಂಗಳುಗಳ ಕಾಲ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ತ್ಯಾಜ್ಯವನ್ನು ನಿಗದಿತ ಜಾಗದಲ್ಲಿ ಸುರಿಯಲಾಗುತ್ತದೆ.

    ಅವಳಿ ಗೋಪುರ ಸ್ಫೋಟಿಸುವ ಕೆಲವು ಗಂಟೆಗಳ ಮುಂಚೆಯೇ ಆ ಪ್ರದೇಶದಲ್ಲಿರುವ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು ಮತ್ತು ಸ್ಫೋಟದಿಂದ ಅಕ್ಕ-ಪಕ್ಕದಲ್ಲಿ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಯಿತು. ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಂಚಾರ ಮಾರ್ಗಗಳನ್ನು ಯೋಜಿಸಲಾಗಿದೆ ಮತ್ತು ಮಾರ್ಗಸೂಚಿಗಳನ್ನೂ ಪ್ರಕಟಿಸಲಾಗಿದೆ.

    ಅವಳಿ ಗೋಪುರಗಳಲ್ಲಿ 3,700 ಕೆಜಿ ಸ್ಫೋಟಕಗಳನ್ನು ಸಜ್ಜುಗೊಳಿಸಲಾಗಿತ್ತು. ಕಟ್ಟಡಗಳ ಕಂಬಗಳಲ್ಲಿ ಸುಮಾರು 7,000 ರಂಧ್ರಗಳನ್ನು ಕೊರೆದು ಸ್ಫೋಟಕಗಳನ್ನು ಸೇರಿಸಲಾಯಿತು ಮತ್ತು 20,000 ಸರ್ಕ್ಯೂಟ್‌ಗಳನ್ನು ಅಳವಡಿಸಲಾಯಿತು. “ಜಲಪಾತ ತಂತ್ರ” ಎಂದು ಕರೆಯಲ್ಪಡುವ ಗೋಪುರಗಳು ನೇರವಾಗಿ ಕೆಳಗೆ ಬೀಳುವಂತೆ ಖಚಿತಪಡಿಸಿಕೊಳ್ಳಲು ಸ್ಫೋಟಕಗಳನ್ನು ಯೋಜಿಸಲಾಗಿತ್ತು.

    ಸ್ಫೋಟಕ ಪ್ರದೇಶದಲ್ಲಿ ವಾಸಿಸುತ್ತಿದ್ದ ಸುಮಾರು 7,000 ನಿವಾಸಿಗಳನ್ನು ಇಂದು ಬೆಳಿಗ್ಗೆ ಬೇರಡೆಗೆ ಸ್ಥಳಾಂತರ ಮಾಡಲಾಯಿತು. ಅಕ್ಕಪಕ್ಕದ ಕಟ್ಟಡಗಳಲ್ಲಿ ಗ್ಯಾಸ್ ಮತ್ತು ವಿದ್ಯುತ್ ಪೂರೈಕೆಯನ್ನು ಮುನ್ನೆಚ್ಛರಿಕಾ ಕ್ರಮವಾಗಿ ಸ್ಥಗಿತಗೊಳಿಸಲಾಗಿದ್ದು, ಸಂಜೆ 4 ಗಂಟೆಯ ಬಳಿಕ ಅವುಗಳನ್ನು ಪುನಃಸ್ಥಾಪಿಸಲಾಗಿದೆ. ಸ್ಥಳೀಯ ನಿವಾಸಿಗಳಿಗೆ ಸಂಜೆ 5.30 ರೊಳಗೆ ತಮ್ಮ ಮನೆಗಳಿಗೆ ಹಿಂತಿರುಗಲು ಅನುಮತಿಸಲಾಗಿದೆ. ತುಂಬಾ ಧೂಳು ಇರುವುದರಿಂದ ಅದರ ವಿರುದ್ಧ ರಕ್ಷಿಸಿಕೊಳ್ಳಲು ಮನೆಗಳಿಗೆ ಹಿಂತಿರುಗಿದಾಗ ಮುಖ ಮುಚ್ಚಿಕೊಳ್ಳುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

    ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ 450 ಮೀಟರ್ ನಿಷೇಧಿತ ವಲಯದೊಳಗೆ ಸಂಚಾರವನ್ನು ನಿಲ್ಲಿಸಲಾಯಿತು.. ಮಧ್ಯಾಹ್ನ 2.15 ರಿಂದ 2.45 ರವರೆಗೆ ಸ್ಫೋಟದ ಎರಡೂ ಬದಿಯಲ್ಲಿ 15 ರಿಂದ 30 ನಿಮಿಷಗಳ ಕಾಲ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಅಕ್ಕಪಕ್ಕದ ಕೆಲವು ಕಟ್ಟಡಗಳು ಅವಳಿ ಗೋಪುರಗಳಿಗೆ 8 ಮೀಟರ್‌ಗಳಷ್ಟು ಹತ್ತಿರದಲ್ಲಿವೆ. 12 ಮೀಟರ್ ತ್ರಿಜ್ಯದೊಳಗೆ ಇತರ ಕಟ್ಟಡಗಳಿದ್ದು, ಧೂಳಿನ ಕಣ ಒಳಗಡೆ ನುಗ್ಗುವುದನ್ನು ಕಡಿಮೆ ಮಾಡಲು ವಿಶೇಷ ಬಟ್ಟೆಯಿಂದ ಮುಚ್ಚಲಾಗಿದೆ. ಸದ್ಯ ಸ್ಫೋಟದ ಪ್ರದೇಶವನ್ನು ಒಂದು ನಾಟಿಕಲ್ ಮೈಲಿ ದೂರದ ವರೆಗೆ ಹಾರಾಟ ನಿಷೇಧ ವಲಯ ಎಂದು ಘೋಷಿಸಲಾಗಿದೆ.

    ಈ ಸ್ಫೋಟಕ ಬ್ಲಾಸ್ಟ್‌ ಮಾಡುವ ಕಾರ್ಯವನ್ನು ಎಡಿಫೈಸ್ ಇಂಜಿನಿಯರಿಂಗ್ ಕಂಪೆನಿಗೆ ವಹಿಸಿಕೊಡಲಾಗಿತ್ತು. ಇದನ್ನು ಬ್ಲಾಸ್ಟ್​ ಮಾಡಲು ಹರಿಯಾಣದ ಹಿಸಾರ್‌ನವರಾದ ಚೇತನ್ ದತ್ತಾ ನಿಯೋಜನೆಗೊಂಡಿದ್ದರು. ಸ್ಫೋಟಕಗಳನ್ನು ತುಂಬಿದ ನಂತರ, ಮೂರು ಬಾರಿ ತಪಾಸಣೆ ಮಾಡಲಾಯಿತು. ಸ್ಫೋಟದ ಸಂದರ್ಭದಲ್ಲಿ ಹಾರುವ ಅವಶೇಷಗಳು ಒಂದು ಪ್ರಮುಖ ಕಾಳಜಿಯಾಗಿದ್ದು ಅದನ್ನು ತಡೆಯಲು, ಸ್ಫೋಟದ ಪ್ರದೇಶವನ್ನು ನಾಲ್ಕು ಪದರಗಳ ಕಬ್ಬಿಣದ ಜಾಲರಿ ಮತ್ತು ಎರಡು ಪದರಗಳ ಕಂಬಳಿಯಿಂದ ಮುಚ್ಚಲಾಗಿತ್ತು. ಇದರಿಂದಾಗಿ ಯಾವುದೇ ಕಲ್ಲುಮಣ್ಣುಗಳು ಹಿಂದೆ ಹಾರುವುದಿಲ್ಲ, ಆದರೆ ಧೂಳು ಮೇಲೇರಬಹುದು, ಬ್ಲಾಸ್ಟ್‌ ಮಾಡುವ ಗುಂಡಿಯನ್ನು ಒತ್ತುವ ಸಂದರ್ಭದಲ್ಲಿ ಕಟ್ಟಡದಿಂದ ಸುಮಾರು 50-70 ಮೀಟರ್ ದೂರದಲ್ಲಿ ಇರಿಸಲಾಗುವುದು. ಇದೊಂದು ಸರಳ ಪ್ರಕ್ರಿಯೆ” ಎಂದು ಅವರು ಚೇತನ್ ದತ್ತಾ ವಿವರಣೆ ನೀಡಿದರು.

    ಈ ಗೋಪುರಗಳನ್ನು ಅಕ್ರಮವಾಗಿ ಕಟ್ಟಿರುವ ಕಾರಣ ನೆಲಸಮ ಮಾಡುವಂತೆ ಕಳೆದ ವರ್ಷ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್​ ಆದೇಶಿಸಿತು. ಸೂಪರ್‌ ಟೆಕ್ ಎಮರಾಲ್ಡ್ ಸಂಸ್ಥೆ ನಿಯಮಾವಳಿ ಉಲ್ಲಂಘಿಸಿ ನಿರ್ಮಿಸಿದ್ದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಿಬಂಧನೆಗಳಿಗೆ ವಿರುದ್ಧವಾಗಿ ನಿರ್ಮಿಸುತ್ತಿದ್ದ ಅವಳಿ ಗೋಪುರಗಳನ್ನು ಕೆಡವಲು ಆಗಸ್ಟ್​ 31, 2021ರಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕಟ್ಟಡವನ್ನು ಇಂದು ಮಧ್ಯಾಹ್ನ 2.30ಕ್ಕೆ ನೆಲಸಮ ಮಾಡಲಾಯಿತು. (ಏಜೆನ್ಸೀಸ್​)

    ಅವಳಿ ಕಟ್ಟಡ ನೆಲಸಮಗೊಳಿಸ್ತಿರೋ ಬ್ಲಾಸ್ಟರ್​ ಚೇತನ್​ರ ಕನಸಿಂದು ನನಸಾಗ್ತಿದೆ! ಅವರ ಮಾತಲ್ಲೇ ಕೇಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts