More

    ಲಂಕಾದಲ್ಲಿ ಯೋಧರು vs ಪೊಲೀಸರು: ಮತ್ತಷ್ಟು ಬಿಗಡಾಯಿಸಿದ ಪರಿಸ್ಥಿತಿ, ಸರ್ಕಾರಿ ನೌಕರರ ಮನೆಗೆ ನುಗ್ಗಲು ಯತ್ನ

    ಕೊಲಂಬೊ: ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಶ್ರೀಲಂಕಾದಲ್ಲಿ, ಸರ್ಕಾರದ ವಿರುದ್ಧ ಜನರು ದಂಗೆ ಎದ್ದಿದ್ದು, ಬಿಕ್ಕಟ್ಟನ್ನು ಬಗೆಹರಿಸುವಂತೆ ಆಗ್ರಹಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆ ಕೊಲಂಬೊದಲ್ಲಿ ಲಂಕಾ ವಿಶೇಷ ಪಡೆಯ ಯೋಧರನ್ನು ಪ್ರತಿಭಟನೆಯ ಸ್ಥಳದಲ್ಲಿ ಪೊಲೀಸರು ತಡೆದಿದ್ದು, ಈ ಬಗ್ಗೆ ರಕ್ಷಣಾ ಮುಖ್ಯಸ್ಥರು ತನಿಖೆಗೆ ಆದೇಶ ಮಾಡಿದ್ದಾರೆ.

    ಶ್ರೀಲಂಕಾದಲ್ಲಿ ಸರ್ಕಾರದ ವಿರೋಧಿ ಪ್ರದರ್ಶನಗಳು ತೀವ್ರಗೊಳ್ಳುತ್ತಿದ್ದಂತೆ, ರಾಜಧಾನಿ ಕೊಲಂಬೊದಲ್ಲಿ ಸಂಸತ್ತಿನ ಬಳಿ ಪ್ರತಿಭಟನೆಯ ಸಂದರ್ಭದಲ್ಲಿ ಬೈಕ್‌ಗಳಲ್ಲಿ ಆಗಮಿಸಿದ ಶಸ್ತ್ರಸಜ್ಜಿತ ಯೋಧರು ಪೊಲೀಸ್ ಅಧಿಕಾರಿಗಳೊಂದಿಗೆ ಘರ್ಷಣೆ ಮಾಡುತ್ತಿರುವುದು ಕಂಡುಬಂದಿದೆ. ಯೋಧರು vs ಪೊಲೀಸ್​ ಸಿಬ್ಬಂದಿ ಎನ್ನುವ ರೀತಿಯಲ್ಲಿ ಪ್ರತಿಕೂಲಕರ ವಾತಾವರಣ ನಿರ್ಮಾಣವಾಗಿದೆ.

    ದಶಕಗಳಲ್ಲೇ ರಾಷ್ಟ್ರವು ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಇದರ ಮಧ್ಯೆ ಪ್ರತಿಭಟನೆಗಳನ್ನು ಹತ್ತಿಕ್ಕಲು ಸರ್ಕಾರ ಹೆಣಗಾಡುತ್ತಿದೆ. ಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸ ಅವರು ಏಪ್ರಿಲ್ 1 ರಂದು ತಕ್ಷಣದಿಂದಲೇ ಜಾರಿಗೆ ಬರುವಂತೆ ಘೋಷಿಸಿದ್ದ ತುರ್ತು ಪರಿಸ್ಥಿತಿಯನ್ನು ಮಂಗಳವಾರ ತಡರಾತ್ರಿ ಹಿಂತೆಗೆದುಕೊಂಡಿದ್ದಾರೆ.

    ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಶ್ರೀಲಂಕಾದಲ್ಲಿ, ಅಧ್ಯಕ್ಷ ಗೋತಬಯ ರಾಜಪಕ್ಸ ರಾಜೀನಾಮೆ ನೀಡಬೇಕೆಂಬ ಆಗ್ರಹಕ್ಕೆ ಈಗ ಆಡಳಿತಾರೂಢ ಮಿತ್ರಪಕ್ಷಗಳೂ ಧ್ವನಿಗೂಡಿಸಿವೆ. ಜತೆಗೆ 41 ಸಂಸದರು, ಈ ಮೈತ್ರಿಕೂಟವನ್ನು ತೊರೆದಿದ್ದಾರೆ. ಹೀಗಾಗಿ ಗೊತಬಯ ನೇತೃತ್ವದ ಮೈತ್ರಿಕೂಟ ಸಂಸತ್ತಿನಲ್ಲಿ ಬಹುಮತ ಕಳೆದು ಕೊಂಡಿದೆ.

    ಸಂಯುಕ್ತ ಸರ್ಕಾರವನ್ನು ಸೇರಬೇಕೆಂಬ ಗೋತಬಯ ಆಹ್ವಾನವನ್ನು ಪ್ರತಿಪಕ್ಷಗಳು ತಿರಸ್ಕರಿಸಿವೆ. ಇದೊಂದು ‘ಅವಿವೇಕದ ಕ್ರಮ’ ಎಂದಿರುವ ವಿಪಕ್ಷ ನಾಯಕರು, ರಾಜೀನಾಮೆ ಕೊಡುವಂತೆ ಅಧ್ಯಕ್ಷರನ್ನು ಒತ್ತಾಯಿಸಿದ್ದಾರೆ. ಆಹಾರ, ಇಂಧನ ಮತ್ತು ಔಷಧಿಗಳ ಕೊರತೆ ತೀವ್ರವಾಗಿದ್ದು ಅಧಿಕಾರದಲ್ಲಿ ಮುಂದುವರಿಯಲು ಅಧ್ಯಕ್ಷರಿಗೆ ನೈತಿಕ ಹಕ್ಕಿಲ್ಲ ಎಂದವರು ಪ್ರತಿಪಾದಿಸಿದ್ದಾರೆ.

    ಹಣಕಾಸು ಸಚಿವರಾಗಿ ಸೋಮವಾರವಷ್ಟೇ ಅಧಿಕಾರ ಸ್ವೀಕರಿಸಿದ್ದ ಅಲಿ ಸಬ್ರಿ, ಜನರ ಆಕ್ರೋಶ ಭುಗಿಲೆದ್ದಿದ್ದರಿಂದ ಮಂಗಳವಾರ ಪದತ್ಯಾಗ ಮಾಡಿದ್ದಾರೆ. ಸಬ್ರಿ ಮೂರು ದಿನಗಳಲ್ಲಿ ಎರಡನೇ ಸಲ ರಾಜೀನಾಮೆ ಕೊಟ್ಟಂತಾಗಿದೆ. ‘ತಾತ್ಕಾಲಿಕ ಕ್ರಮವಾಗಿ ನಾನು ವಿತ್ತ ಸಚಿವ ಸ್ಥಾನ ವಹಿಸಿಕೊಂಡಿದ್ದೆ’ ಎಂದು ಅಧ್ಯಕ್ಷರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಸಬ್ರಿ ಹೇಳಿದ್ದಾರೆ. ಎರಡು ದಿನಗಳ ಹಿಂದೆ ಅವರು ನ್ಯಾಯ ಖಾತೆ ಸಚಿವರಾಗಿದ್ದರು. ಮಾರ್ಚ್ 3ರಂದು ಎಲ್ಲ ಸಚಿವರೊಂದಿಗೆ ಅವರೂ ರಾಜೀನಾಮೆ ಕೊಟ್ಟ ನಂತರ ಸೋದರ ಬಾಸಿಲ್ ರಾಜಪಕ್ಸರನ್ನು ಹಣಕಾಸು ಸಚಿವ ಸ್ಥಾನದಿಂದ ವಜಾ ಮಾಡಿ ಸಬ್ರಿಯನ್ನು ಗೋತಬಯ ನೇಮಿಸಿದ್ದರು.

    ಮಾನವ ಹಕ್ಕುಗಳ ದಾಖಲೆಯ ಬಗ್ಗೆ ಈಗಾಗಲೇ ಅಂತಾರಾಷ್ಟ್ರೀಯ ಖಂಡನೆ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ನಿತ್ಯವೂ ಹದಗೆಡುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಹೇಳಿದೆ. ನಗದು ಕೊರತೆಯಿಂದ ಬಳಲುತ್ತಿರುವ ಲಂಕಾವು ನಾರ್ವೆ ಮತ್ತು ಇರಾಕ್‌ನಲ್ಲಿರುವ ತನ್ನ ರಾಯಭಾರ ಕಚೇರಿಗಳನ್ನು ಮತ್ತು ಸಿಡ್ನಿಯಲ್ಲಿರುವ ದೇಶದ ಕಾನ್ಸುಲೇಟ್ ಜನರಲ್ ಅನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಿದೆ.

    ಶ್ರೀಲಂಕಾದ ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳನ್ನು ‘ನಿಕಟವಾಗಿ’ ಗಮನಿಸುತ್ತಿರುವುದಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮಂಗಳವಾರ ಹೇಳಿದೆ. ಲಂಕಾ ಅಧಿಕಾರಿಗಳೊಂದಿಗೆ ಸಮಾಲೋಚನೆ ಯನ್ನು ಎದುರು ನೋಡುತ್ತಿರುವುದಾಗಿ ಐಎಂಎಫ್ ಶ್ರೀಲಂಕಾ ಮಿಷನ್ ಮುಖ್ಯಸ್ಥ ಮಸಾಹಿರೊ ನೊಝಾಕಿ ಹೇಳಿದ್ದಾರೆ.

    ವಿದೇಶಿ ವಿನಿಮಯ ಬಿಕ್ಕಟ್ಟು ಮತ್ತು ಪಾವತಿ ಬಾಕಿ ಸಮಸ್ಯೆಗಳಿಂದ ಉಂಟಾದ ಆರ್ಥಿಕ ಪರಿಸ್ಥಿತಿಯನ್ನು ತಪ್ಪಾಗಿ ನಿರ್ವಹಿಸಿದ್ದಕ್ಕಾಗಿ ಆಡಳಿತಾರೂಢ ರಾಜಪಕ್ಸ ಕುಟುಂಬದ ವಿರುದ್ಧ ಸಾಮೂಹಿಕ ಆಂದೋಲನಗಳು ಲಂಕಾದಲ್ಲಿ ನಡೆಯುತ್ತಿವೆ. ಲಂಕಾದಲ್ಲಿ ಸಾರ್ವಜನಿಕರ ಆಕ್ರೋಶವು ಉತ್ತುಂಗಕ್ಕೇರಿದೆ. ವಾರಾಂತ್ಯದ ಜನಸಮೂಹವು ಹಲವಾರು ಸರ್ಕಾರಿ ವ್ಯಕ್ತಿಗಳ ಮನೆಗಳಿಗೆ ನುಗ್ಗಲು ಪ್ರಯತ್ನವನ್ನು ನಡೆಸಿವೆ.

    ಶ್ರೀಲಂಕಾ ಸರ್ಕಾರ ಕಳೆದ ತಿಂಗಳು ತನ್ನ ಕರೆನ್ಸಿಯ ಮೌಲ್ಯವನ್ನು ತೀವ್ರವಾಗಿ ಅಪಮೌಲ್ಯಗೊಳಿಸಿದ ನಂತರ ಬೆಲೆಗಳು ಗಗನಕ್ಕೇರಿದ್ದು ಜೀವನಾವಶ್ಯಕ ಸಾಮಗ್ರಿಗಳ ಕೊರತೆ ಅತೀವವಾಗಿದೆ. ಇಂಧನ ಮತ್ತು ಔಷಧಿಗಳ ಅಭಾವವೂ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಶ್ರೀಲಂಕಾಕ್ಕೆ ಭಾರತ ಸರ್ಕಾರ ಸಾಲದ ರೂಪದಲ್ಲಿ ನೀಡುತ್ತಿರುವ ನೆರವು 1.5 ಶತಕೋಟಿ ಡಾಲರ್ ಮುಟ್ಟಿದೆ. ಮುಂದೆಯೂ ಸರಕು ಸಾಮಗ್ರಿಗಳನ್ನು ಪೂರೈಸಲಾಗುತ್ತದೆ ಎಂದು ಭಾರತೀಯ ಹೈ ಕಮಿಷನರ್ ಮಂಗಳವಾರ ತಿಳಿಸಿದ್ದಾರೆ. (ಏಜೆನ್ಸೀಸ್​)

    ಅಲ್ಪಮತಕ್ಕೆ ಕುಸಿದ ಸರ್ಕಾರ; ಆಡಳಿತಾರೂಢ ಮೈತ್ರಿಕೂಟದಿಂದ ಹೊರನಡೆದ 41 ಸಂಸದರು

    ಬಳ್ಳಾರಿಯ ಸಬ್​ ರಿಜಿಸ್ಟರ್​ ಕರ್ಮಕಾಂಡ: ಮಾಡೆಲ್​ ಜತೆ ಮಂಚವೇರಿ ಮಗು ಕರುಣಿಸಿದವನ ಕರಾಳ ಕತೆಯಿದು

    ನಿಲ್ಲದ ದರ ಏರಿಕೆಯ ಬರೆ: 16 ದಿನದಲ್ಲಿ 14 ಬಾರಿ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆ, ಇಂದಿನ ಇಂಧನ​ ದರ ಹೀಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts