More

    ಗುರುಕುಲ ಶಿಕ್ಷಣ ಪದ್ಧತಿಯತ್ತ ಜಗತ್ತಿನ ನಿರೀಕ್ಷೆ

    ಚಿಕ್ಕಮಗಳೂರು: ಭಾರತೀಯ ಗುರುಕುಲ ಶಿಕ್ಷಣ ಪದ್ಧತಿಯನ್ನು ಇಡೀ ಜಗತ್ತು ನಿರೀಕ್ಷಿಸುತ್ತಿದ್ದು ಅದನ್ನು ಪೂರೈಸಲು ನಾವು ಸನ್ನದ್ಧರಾಗಬೇಕಿದೆ ಎಂದು ಆರ್​ಎಸ್​ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು.

    ಕೊಪ್ಪ ತಾಲೂಕು ಹರಿಹರಪುರ ಚಿತ್ರಕೂಟದಲ್ಲಿರುವ ಪ್ರಬೋಧಿನಿ ಗುರುಕುಲಮ್ ಅರ್ಧಮಂಡಲೋತ್ಸವ ಮುಕ್ತಾಯ ಸಮಾರಂಭದಲ್ಲಿ ಭಾನುವಾರ ಅವರು ಸಮಾರೋಪ ಭಾಷಣ ಮಾಡಿದರು.

    ಶಿಕ್ಷಣ ಹಾಗೂ ಜೀವನ ಪದ್ಧತಿ ವಿಚಾರದಲ್ಲಿ ವಿಶ್ವ ನಮ್ಮನ್ನು ಎದುರು ನೋಡುತ್ತಿದೆ. ಆದರೆ ನಾವು ವಿದೇಶಿಯರತ್ತ ದೃಷ್ಟಿ ನೆಟ್ಟಿದ್ದೇವೆ. ಅದರ ಅಗತ್ಯವೇನಿದೆ ಎಂದು ಪ್ರಶ್ನಿಸಿದ ಅವರು, ಮೊದಲು ನಮ್ಮ ಆಂತರ್ಯದೊಳಗೇನಿದೆ ಎಂಬುದನ್ನು ಗಮನಿಸಿ ಹೊರಗಿನಿಂದ ಬರುವ ವಿಚಾರಗಳು ಉತ್ತಮವಾಗಿದ್ದರೆ ಸ್ವೀಕರಿಸೋಣ. ಅಷ್ಟಕ್ಕೂ ನಮ್ಮ ಬಳಿ ಅಂತಹ ಸಾಕಷ್ಟು ಉತ್ತಮ ವಿಚಾರಗಳಿವೆ. ಅವುಗಳಲ್ಲಿ ಗುರುಕುಲ ಶಿಕ್ಷಣ ಪದ್ಧತಿ ಉತ್ತಮ ನಿದರ್ಶನ ಎಂದು ಹೇಳಿದರು.

    ಭಾರತದ ಸನಾತನ ಆತ್ಮವನ್ನು ಯುಗಾನುಕೂಲಗೊಳಿಸಿ ಎತ್ತಿ ನಿಲ್ಲಿಸುವ ಪ್ರಯತ್ನವೇ ಗುರುಕುಲ ಶಿಕ್ಷಣ ಪದ್ಧತಿ. ವಿಶ್ವವೇ ಇದನ್ನು ಬಯಸುವ ಕಾಲ ಬರುತ್ತದೆ. ಆಗ ನಾವು ಅದನ್ನು ಒದಗಿಸಲು ಸಿದ್ಧರಾಗಬೇಕು. ಗುರುಕುಲ ಶಿಕ್ಷಣ ಪದ್ಧತಿಯನ್ನು ಸೀಮಿತಗೊಳಿಸದೆ ವಿಶ್ವವ್ಯಾಪಿಗೊಳಿಸಬೇಕಿದೆ. ವಿಶ್ವವೇ ಇದನ್ನು ಬಯಸುತ್ತಿದ್ದು, ಅವರಿಗೂ ಈ ಪದ್ಧತಿ ಪರಿಚಯಿಸಬೇಕಿದೆ. ಈ ಪ್ರಯತ್ನಕ್ಕೆ ಇಲ್ಲಿಂದಲೇ ನಾವು ಸಿದ್ಧರಾದರೆ ವಿಶ್ವವೇ ನಮ್ಮತ್ತ ಒಲಿದುಬರಲಿದೆ ಎಂದರು.

    ವೇದ ವಿದ್ವಾಂಸ ಅಮೆರಿಕದ ಡೇವಿಡ್ ಫ್ರಾಲಿ ಮಾತನಾಡಿ, ನಮ್ಮನ್ನು ನಾವು ಅರಿತುಕೊಳ್ಳಬೇಕು. ಹಲವರು ಹೊರಗಿನದನ್ನು ನೋಡುತ್ತಾರೆ. ನಮ್ಮನ್ನು ನಾವು ನೋಡಿಕೊಳ್ಳುವ ವಿಚಾರದಲ್ಲಿ ಜಾಗೃತರಾಗುತ್ತಿಲ್ಲ. ಪ್ರಪಂಚವೇ ಒಂದು ಮಾಯೆ. ಆದರೆ ನಮ್ಮ ನಡುವಿನ ಮಾಧ್ಯಮಗಳು ಮಾಯೆಯೊಳಗಿನ ಮಾಯೆಯಾಗಿವೆ. ಅದಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕೋ ಅಷ್ಟು ಪ್ರಾಮುಖ್ಯತೆ ಕೊಡಬೇಕು. ಇಂದು ನಾವು ಗಳಿಸುತ್ತಿರುವ, ಗ್ರಹಿಸುತ್ತಿರುವ ಎಲ್ಲ ಮಾಹಿತಿಗಳು ಎರಡನೇ ಹಂತದ್ದಾಗಿದೆ. ಈ ಹಿನ್ನೆಲೆಯಲ್ಲಿ ನೇರ ಮಾಹಿತಿಯನ್ನು ನೀಡಬಲ್ಲ ಯೋಗ, ವೇದಾಂತಗಳಿಗೆ ಪ್ರಾಮುಖ್ಯತೆ ಕೊಡಬೇಕಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಅರ್ಧಮಂಡಲೋತ್ಸವ ಸಮಿತಿ ಗೌರವಾಧ್ಯಕ್ಷ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಡಾ. ವಿ.ಆರ್.ಗೌರಿಶಂಕರ್ ಮಾತನಾಡಿದರು. ಸ್ವಾಗತ ಸಮಿತಿ ಕಾರ್ಯದರ್ಶಿ ಹರಿಪ್ರಕಾಶ್ ಕೋಣೆಮನೆ ಸ್ವಾಗತಿಸಿದರು. ಗುರುಕುಲದ ಸ್ಥಾಪನೆಯ ಮೂಲ ಚಿಂತಕ ಪ್ರೊ. ರಾಮಚಂದ್ರ ಭಟ್ ಕೋಟೆಮನೆ, ಅರ್ಧಮಂಡಲೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಚ್.ಬಿ.ರಾಜಗೋಪಾಲ್ ಇತರರಿದ್ದರು.

    ಇದಕ್ಕೂ ಮೊದಲು ಗುರುಕುಲದ ವಿದ್ಯಾರ್ಥಿಗಳು ನೀಡಿದ ಗುರುಕುಲ ದರ್ಶನಮ್ ಕಾರ್ಯಕ್ರಮದಲ್ಲಿ ಗೀತರೂಪಕ, ಯೋಗ ಪ್ರದರ್ಶನ ಗಮನ ಸೆಳೆಯಿತು. ಬೆಂಗಳೂರಿನಲ್ಲಿ ಸ್ವಯಂ ಗುರುಕುಲ ಶಿಕ್ಷಣ ಶಾಲೆ ಆರಂಭಿಸಿರುವ ಹಳೇ ವಿದ್ಯಾರ್ಥಿ ಚಿದ್ರೂಪ ಶರ್ಮ ಅನುಭವ ಹಂಚಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts