More

    ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರನಿಲ್​ ವಿಕ್ರಮಸಿಂಘೆ ಆಯ್ಕೆ

    ಕೊಲಂಬೊ: ಆರ್ಥಿಕ ಬಿಕಟ್ಟು ಹಾಗೂ ರಾಜಕೀಯ ಅರಾಜಕತೆಯಿಂದ ಬಳಲುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರನಿಲ್​ ವಿಕ್ರಮಸಿಂಘೆ ಅವರು ಆಯ್ಕೆಯಾಗಿದ್ದಾರೆ. ಜನಾಕ್ರೋಶಕ್ಕೆ ಮಣಿದು ಜುಲೈ 14ರಂದು ರಾಜೀನಾಮೆ ನೀಡಿರುವ ಗೋತಬಯ ರಾಜಪಕ್ಷ ಅವರಿಂದ ತೆರವಾದ ಸ್ಥಾನಕ್ಕೆ ವಿಕ್ರಮಸಿಂಘೆ ಇಂದು ಆಯ್ಕೆಯಾದರು.

    ಶ್ರೀಲಂಕಾದಲ್ಲಿ ನಲವತ್ತನಾಲ್ಕು ವರ್ಷಗಳ ನಂತರ ನೂತನ ಅಧ್ಯಕ್ಷ ಆಯ್ಕೆ ಸಂಸತ್ತಿನ ಮೂಲಕ ನಡೆಯಿತು. ಬುಧವಾರದ ನಡೆದ ಚುನಾವಣೆಯಲ್ಲಿ ಹಂಗಾಮಿ ಅಧ್ಯಕ್ಷರಾಗಿದ್ದ ರನಿಲ್ ವಿಕ್ರಮಸಿಂಘೆ ಮತ್ತು ಆಡಳಿತ ಪಕ್ಷದ ಬಂಡಾಯ ನಾಯಕ ಡುಲ್ಲಾಸ್​ ಅಲಹಪ್ಪೆರುಮ ಹಾಗೂ ಜೆವಿಪಿ ನಾಯಕ ಅರುಣಾ ಕುಮಾರ ಡಿಸ್ಸಾನಾಯಕೆ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ 134 ಮತಗಳಿಂದ ರನಿಲ್ ವಿಕ್ರಮಸಿಂಘೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. ರನಿಲ್​ ವಿರುದ್ಧ ಜನಾಕ್ರೋಶವಿದ್ದರೂ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.

    ಶ್ರೀಲಂಕಾ ಸಂಸತ್ತು ಒಟ್ಟು 225 ಸದಸ್ಯ ಸ್ಥಾನಗಳನ್ನು ಹೊಂದಿದೆ. ಇಂದು ನಡೆದ ಚುನಾವಣೆಗೆ ಇಬ್ಬರು ಸದಸ್ಯರು ಗೈರಾಗಿದ್ದನ್ನು ಹೊರತುಪಡಿಸಿದರೆ, ಒಟ್ಟು 223 ಸದಸ್ಯರು ಮತದಾನ ಮಾಡಿದರು. ಅದರಲ್ಲಿ 4 ಮತಗಳು ತಿರಸ್ಕೃತಗೊಂಡವು. 219 ಮತಗಳನ್ನು ಮಾತ್ರ ಮಾನ್ಯ ಎಂದು ಪರಿಗಣಿಸಲಾಯಿತು. ವಿಕ್ರಮಸಿಂಘೆ ಅವರು 134 ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.

    ಚುನಾವಣೆ ಬಳಿಕ ಮಾತನಾಡಿದ ನೂತನ ಅಧ್ಯಕ್ಷ ವಿಕ್ರಮಸಿಂಘೆ, ನಾಳೆಯಿಂದ ಸರ್ವಪಕ್ಷಗಳ ಜೊತೆ ಚರ್ಚೆ ಆರಂಭಿಸಲು ಸಿದ್ಧ ಎಂದು ಹೇಳಿದರು. ಅಲ್ಲದೆ, ಸಂಸತ್ತಿನ ಆವರಣದಲ್ಲಿ ಸಂಸತ್ತಿನ ಸಭಾಂಗಣದ ಹೊರಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡುವಂತೆ ಸ್ಪೀಕರ್‌ಗೆ ವಿಕ್ರಮಸಿಂಘೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

    ಅಂದಹಾಗೆ ದ್ವೀಪ ರಾಷ್ಟ್ರ ಶ್ರೀಲಂಕಾ ಹಿಂದೆಂದೂ ಕಾಣದಂತಹ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಗತ್ಯ ವಸ್ತುಗಳ ಬೆಲೆ ಕೊಳ್ಳಲಾರದಷ್ಟು ಗಗನಕ್ಕೇರಿದೆ. ಇಂಧನ ಪಡೆಯಲು ವಾರಗಟ್ಟಲೇ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ತುತ್ತು ಅನ್ನಕ್ಕೂ ಪರದಾಡುವಂತಹ ಅರಾಜಕತೆ ಲಂಕಾದಲ್ಲಿ ನಿರ್ಮಾಣವಾಗಿದ್ದು, ಇದರಿಂದ ರೊಚ್ಚಿಗೆದ್ದಿರುವ ಲಂಕಾ ಜನರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

    ಜನಾಕ್ರೋಶ ಮತ್ತು ಬಂಧನದ ಸಾಧ್ಯತೆಯಿಂದ ಪಾರಾಗಲು ಅಧ್ಯಕ್ಷ ಹುದ್ದೆಯಲ್ಲಿ ಇರುವಾಗಲೇ ಗೋತಬಯ ರಾಜಪಕ್ಸ ಅವರು ಜುಲೈ 13ರಂದು ದೇಶ ಬಿಟ್ಟು ಮಾಲ್ಡೀವ್ಸ್​ಗೆ ಹಾರಿದರು. ಇದಾದ ಬಳಿಕ ಜುಲೈ 14ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಗೋತಬಯ ಮಾಲ್ಡೀವ್ಸ್​ನಲ್ಲಿ ಇರುವುದು ಸೂಕ್ತವಲ್ಲ ಅಂದುಕೊಂಡು ಅಲ್ಲಿಂದ ಮತ್ತೆ ಸಿಂಗಪೂರ್​ಗೆ ಹಾರಿ, ಅಲ್ಲಿಯೇ ನೆಲೆಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts