More

    ದಂಡ ವಸೂಲಿ ಮಾಡ್ತಿದ್ದ ಪೊಲೀಸರಿಗೆ ಕ್ಲಾಸ್​: ಮಾಜಿ ಸ್ಪೀಕರ್ ರಮೇಶ್​ ಕುಮಾರ್​ ವಿರುದ್ಧ ತಿರುಗಿಬಿದ್ದ ಕೆಲ ಪೊಲೀಸರು!

    ಬೆಂಗಳೂರು: ಸಂಚಾರಿ ಪೊಲೀಸರ ವಿರುದ್ಧ ಮಾಜಿ ಸ್ಪೀಕರ್ ರಮೇಶ್​ ಕುಮಾರ್​ ಕೆಂಡಾಮಂಡಲವಾದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್​ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಕೂಡಲೇ ಕರ್ನಾಟಕ ಪೊಲೀಸರಿಗೆ ಕ್ಷಮೆ ಕೇಳುವಂತೆ ಆಗ್ರಹಗಳು ಕೇಳಿಬಂದಿವೆ.

    ನಿನ್ನೆ ಚಿಂತಾಮಣಿ ತಾಲೂಕಿನ ಐಮರೆಡ್ಡಹಳ್ಳಿ ಬಳಿ ಪೊಲೀಸರು ರಸ್ತೆಯಲ್ಲಿ ವಾಹನಗಳನ್ನ ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದ ವೇಳೆ ಶ್ರೀನಿವಾಸಪುರ ಚಿಂತಾಮಣಿ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಣಿಸುತ್ತಿದ್ದ ಶಾಸಕ ರಮೇಶ್ ಕುಮಾರ್ ಪೊಲೀಸರ ಕಾರು ಕಂಡು ನಿಲ್ಲಿಸಿದ್ದಾರೆ. ಬಳಿಕ ಕೆಳಗಿಳಿದು ಬಂದು ಅವರ ಬೆವರಿಳಿಸಿದರು. ಕಳೆದ ದಿನಗಳ ಹಿಂದೆ ಸಚಿವರೇ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸಬಾರದೆಂದು ಸೂಚಿಸಿದ್ದರು. ಆದರೆ ನೀವು ಏನು ಮಾಡುತ್ತಿದ್ದೀರಿ..? ಈ ರೀತಿ ಆದರೆ ‘ನಿಮ್ಮ ಮಕ್ಕಳು ಬದುಕುವುದಾದರು ಹೇಗೆ ಎಂದು ಪ್ರಶ್ನಿಸಿದರು. ಮೊದಲು ಇಲ್ಲಿಂದ ಹೊರಡಿ, ನಾಚಿಕೆ ಆಗಲ್ವಾ ನಿಮ್ಗೆ’ ಎಂದು ಕಿಡಿಕಾರಿದರು.

    ಇದರ ಬೆನ್ನಲ್ಲೇ ರಮೇಶ್ ಕುಮಾರ್‌ ವಿರುದ್ಧ ತಿರುಗಿ ಬಿದ್ದಿರುವ ಪೊಲೀಸರು ಕೂಡಲೇ ಕರ್ನಾಟಕ ಪೊಲೀಸರಿಗೆ ರಮೇಶ್​ ಕುಮಾರ್​ ಅವರು ಕ್ಷಮೆ ಕೇಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ. ರಾಜಕಾರಣಿಗಳ ಮಕ್ಕಳ ರೀತಿ ಪೊಲೀಸರ ಮಕ್ಕಳು ಇಲ್ಲ ಎಂದು ಪೊಲೀಸ್​ ಸಿಬ್ಬಂದಿ ಬರೆದಿರುವ ಪತ್ರ ಈ ಕೆಳಕಂಡಂತಿದೆ…

    ಮಾನ್ಯ ರಮೇಶ್ ಕುಮಾರ್ ರವರಿಗೊಂದು ನನ್ನ ಪತ್ರ. ಸರ್ ನಮಸ್ಕಾರ ತಾವು ರಾಜಕಾರಣದಲ್ಲಿ ಅತ್ಯಂತ ಹಿರಿಯರು, ಮುತ್ಸದ್ದಿಗಳು, ಬಹಳ ಚಿಂತನಾಶೀಲರು, ಅತ್ಯಂತ ವಾಗ್ಮಿಗಳು. ತಾವು ರಾಜಕೀಯ ಜೀವನದಲ್ಲಿ ಹಲವು ಉನ್ನತ ಸ್ಥಾನಮಾನವನ್ನು ಅಲಂಕರಿಸಿದ್ದೀರ. ಅದರಲ್ಲಿ ಸಭಾಪತಿ ಸ್ಥಾನವು ಒಂದು. ತಾವು ಸಭಾಪತಿ ಸ್ಥಾನದಿಂದ ಕೆಳಗಿಯುವಾಗ ಮಾಡಿದ ಅತ್ಯಂತ ಭಾವನಾತ್ಮಕ ಮತ್ತು ಪ್ರಬುದ್ಧ ಭಾಷಣವನ್ನು ನಾನು ನೋಡಿದ್ದೇನೆ. ಅದರಿಂದ ನಿಮ್ಮ ಬಗ್ಗೆ ಹೆಮ್ಮೆ ಪಟ್ಟಿದ್ದೇನೆ ಕೂಡ. ಆದರೆ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಾದ ವಾಟ್ಸ್​ಆ್ಯಪ್​ ಮತ್ತು ಫೇಸ್​ಬುಕ್ ನಲ್ಲಿ ವೀಡಿಯೋ ಒಂದು ಹರಿದಾಡುತ್ತಿದೆ. ಈ ವೀಡಿಯೋ ಒಬ್ಬ ಪೋಲಿಸ್ ಆದ ನನಗೆ ಮನಸ್ಸಿಗೆ ಘಾಸಿ ಉಂಟುಮಾಡಿದೆ. ಸರ್ ಪೋಲಿಸರಾದ ನಮಗೂ ಸ್ವಾಭಿಮಾನವಿದೆ. ಒಂದು ಗೌರವಯುತವಾದ ಜೀವನವಿದೆ. ನಮಗೂ ನಮ್ಮ‌ ಕುಟುಂಬದ ಒಳ್ಳೆಯ ಹಿನ್ನೆಲೆ ಇದೆ. ನಾವೂ ಕೂಡ ಅತ್ಯಂತ ಸಂಸ್ಕಾರಯುತ ಕುಟುಂಬಗಳಿಂದಲೇ ಬಂದಿದ್ದೇವೆ.

    ಸದರಿ ವೀಡಿಯೋದಲ್ಲಿ ನೀವು ರಸ್ತೆಯಲ್ಲಿ ರಸ್ತೆ ನಿಯಮ ಉಲ್ಲಂಘಿಸುತ್ತಿರುವ ವಾಹನ ಸವಾರರಿಗೆ ದಂಡ ಹಾಕುತ್ತಿರುವ ಪೋಲಿಸರನ್ನು ಕುರಿತು ಮಾತನಾಡಿ ಆಕ್ಷೇಪ ವ್ಯಕ್ತಪಡಿಸಿ ನಿಮ್ಮ ಮಕ್ಕಳಿಗೆ ಒಳ್ಳೆಯದಾಗುತ್ತಾ ಎಂದು ಪ್ರಶ್ನಿಸಿದ್ದರಾ. ನಿಮ್ಮ ಕಾಳಜಿ ನಮಗೆ ಅರ್ಥವಾಗುತ್ತದೆ. ಆದರೆ, ತಾವು ಹೇಳಿದ ರೀತಿ ಸರಿ ಕಾಣಲಿಲ್ಲ ಸರ್. ತಾವು ಸದರಿ ಸ್ಥಳದಲ್ಲಿ ಕೆಳಹಂತದ ಸಿಬ್ಬಂದಿಯ ಮೇಲೆ ಕೂಗಾಡುವ ಬದಲು ಅಲ್ಲಿಂದಲೇ ಸಂಬಂಧಪಟ್ಟ ಎಸ್.ಪಿ ರವರಿಗೆ ಅಥವಾ ಡಿಸಿಪಿರವರಿಗೆ ಕರೆ ಮಾಡಿ ವಾಹನ‌ ತಪಾಸಣೆ ಮಾಡದಂತೆ ತಮ್ಮ ಸಿಬ್ಬಂದಿಗೆ ತಿಳಿಸಿ ಎಂದು ಸೂಚಿಸಬಹುದಿತ್ತು. ಇದಕ್ಕೂ ಮಿಗಿಲಾಗಿ ತಮಗೆ ಇನ್ನೂ ಒಂದು ಅವಕಾಶ ಇದೆ ಸರ್. ತಾವು ರಾಜಕೀಯ ಧುರೀಣರು. ಈ ಸಂಬಂಧ ವಿಧಾನಸಭೆಯ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಿ ಒಂದು ನಿರ್ಣಯ ಮಾಡಿ ಪೋಲಿಸರು ರಸ್ತೆಗಳಲ್ಲಿ ಯಾವುದೇ ವಾಹನ ತಪಾಸಣೆ ಮಾಡಬಾರದು ಎನ್ನುವ ಶಾಸನವನ್ನು ಜಾರಿಗೆ ತನ್ನಿ ಸರ್. ಇದರಿಂದ ಪೋಲಿಸರ ಮೇಲೆ ಆಗುವ ಒತ್ತಡ ಕಡಿಮೆಯಾಗುತ್ತದೆ. ಜತೆಗೆ ಬಿಸಿಲು, ಮಳೆ ಧೂಳಿನಲ್ಲಿ ನಿಂತು ಜನರ ಕೈಲಿ ಬೈಸಿಕೊಂಡು ಜನಸಾಮಾನ್ಯರ ದೃಷ್ಟಿಯಲ್ಲಿ ಖಳನಾಯಕರಾಗುವುದು ತಪ್ಪುತ್ತದೆ. ಪೋಲಿಸರ ಆರೋಗ್ಯದ ಮೇಲಾಗುವ ತೊಂದರೆ ಕೂಡ ತಪ್ಪುತ್ತದೆ. ನಿನ್ನೆ ದಿನದ ವೀಡಿಯೋ ಫೇಸ್ ಬುಕ್ ನಲ್ಲಿ ಪೋಸ್ಟ್ ಆಗಿದ್ದು ಅದರ ಬಗ್ಗೆ ಜನರು ಮಾಡಿರುವ ಅಸಭ್ಯವಾದ, ಕೆಟ್ಟದಾದ ಹಾಗೂ ಋಣಾತ್ಮಕ ಕಮೆಂಟ್​ಗಳು ಪೋಲಿಸರ ಮನೋಸ್ಥೈರ್ಯವನ್ನು, ಆತ್ಮವಿಶ್ವಾಸವನ್ನು ಕುಗ್ಗಿಸಿ ಭ್ರಮನಿರಸನ ಮಾಡುತ್ತಿದೆ. ಈ ವೀಡಿಯೋ ಸಮಾಜದ ಮೇಲೆ ಪರಿಣಾಮ ಬೀರಿ ಪೊಲೀಸರ ಮೇಲೆ ಕೆಟ್ಟ ಅಭಿಪ್ರಾಯ ಮೂಡಲು ಪ್ರೇರಣೆಯಾಗುತ್ತದೆ.

    ಸರ್ ಮತ್ತೊಂದು ವಿಚಾರ. ನಮ್ಮ ಮಕ್ಕಳನ್ನು ಕೆಟ್ಟ ಹಣದಿಂದ ಸಾಕುವ ಅನಿವಾರ್ಯ ಮತ್ತು ಆಸೆ ಎರಡೂ ಇಲ್ಲ. ಅದೆಷ್ಟೋ ಪೋಲಿಸರ ಮಕ್ಕಳು ಕಷ್ಟಪಟ್ಟು ಓದಿ ಇಂದು ಅತ್ಯುನ್ನತ ಸ್ಥಾನದಲ್ಲಿದ್ದಾರೆ ಸರ್. ಸರ್ ನಮಗೆ ರಾಜಕಾರಣಿಗಳಂತೆ ಯಾವುದೂ ವಂಶಪಾರಂಪರ್ಯವಾಗಿ ಬರುವುದಿಲ್ಲ. ಅತ್ಯಂತ ಪರಿಶ್ರಮ ಮತ್ತು ಕಷ್ಟದಿಂದ ಬರುತ್ತದೆ ಸರ್. ಬಹುಶಃ ಸಮಾದ ಬಗ್ಗೆ ಪೋಲಿಸರಿಗೆ ಇರುವ ಕಾಳಜಿ ಸರ್ಕಾರದ ಬೇರೆ ಯಾವ ಇಲಾಖೆಗೂ ಇಲ್ಲ ಎನ್ನುವುದನ್ನು ನಾನು ಎದೆ ತಟ್ಟಿ ಹೇಳುತ್ತೇನೆ ಸರ್. ನಿನ್ನೆ ದಿನದ ವೀಡಿಯೋ ಸಾವಿರಾರು ಪೋಲಿಸರ ಗೌರವಕ್ಕೆ, ಸ್ವಾಭಿಮಾನದ ಬದುಕಿಗೆ ಧಕ್ಕೆ ಉಂಟುಮಾಡುತ್ತದೆ ಸರ್. ಪ್ರತಿ ಪೋಲಿಸರಿಗೆ ಜನರಿಗೆ ದಂಡ ಹಾಕಿ ತೊಂದರೆ ಕೊಡುವ ಉದ್ದೇಶ ಇರುವುದಿಲ್ಲ ಸರ್. ಕೆಲವೊಮ್ಮೆ ಅದು ಕರ್ತವ್ಯದ ಮುಖ್ಯ‌ ಭಾಗವಾಗಿರುತ್ತದೆ. ಈಗಲೂ ಕಾಲ ಮಿಂಚಿಲ್ಲ. ದಯವಿಟ್ಟು ಮುಂದಿನ‌ ವಿಧಾನಸಭೆ ಅಧಿವೇಶನದಲ್ಲಿ ಈ ಸಂಭಂದ ತಾವು ಚರ್ಚೆ ಮಾಡಿ ಪೋಲಿಸರಿಗಿರುವ ದಂಡ ಹಾಕುವ ಅಧಿಕಾರವನ್ನು ಹಿಂತೆಗೆದುಕೊಳ್ಳುವ ನಿರ್ಣಯ ಮಾಡಿಸಿ ಸರ್. ಇದರಿಂದ ಸಾವಿರಾರು ಪೋಲಿಸರಿಗಾಗುವ ತೊಂದರೆ ತಪ್ಪುತ್ತದೆ ಸಮಾಜದಿಂದ ನಿಂದನೆ ಕಮ್ಮಿಯಾಗುತ್ತದೆ. ಧನ್ಯವಾದಗಳು ರಮೇಶ್ ಕುಮಾರ್ ಸರ್.
    ಇಂತಿ‌ ನೊಂದ ಪೋಲಿಸ್ ಎಂದು ಸುದೀರ್ಘವಾಗಿ ಬರೆದುಕೊಂಡಿದ್ದು, ಸವಾಲುಗಳನ್ನು ಸಹ ಹಾಕಿದ್ದಾರೆ.

    ಇನ್ನು ಪೊಲೀಸ್​ ಬರೆದಿರುವ ಪತ್ರಕ್ಕೆ ಬೆಂಬಲಕ್ಕಿಂತ ವಿರೋಧವೇ ಸಾಮಾಜಿಕ ಜಾಲತಾಣದಲ್ಲಿ ಹರಿದುಬಂದಿದೆ. ಮೊದಲು ಪೊಲೀಸರು ಕಂಡ ಕಂಡಲ್ಲಿ ಚಿಲ್ಲರೆ ಕಾಸಿಗೆ ಕೈ ಒಡ್ಡುವುದನ್ನು ಬಿಡಬೇಕು ಅಂದಿದ್ದಾರೆ. ಸಾಕಷ್ಟು ಮಂದಿ ಪೊಲೀಸರಿಂದ ತಮಗಾದ ನೋವನ್ನು ಹೇಳಿಕೊಂಡಿದ್ದಾರೆ. ಇದೆನೆಲ್ಲಾ ಮಾಡುವಂತೆ ಸರ್ಕಾರ ಹೇಳಿದ್ಯಾ ಎಂದು ಪೊಲೀಸರನ್ನೇ ಮರು ಪ್ರಶ್ನಿಸಿದ್ದಾರೆ. ಸರ್ಕಾರ ನಿಯಮವನ್ನು ನೀವು ಕೂಡ ಸರಿಯಾಗಿ ಪಾಲಿಸಿ, ಜನರ ಸಾಮಾನ್ಯರ ಬಳಿ ಸುಲಿಗೆ ಮಾಡಬೇಡಿ ಎಂದು ತಾಕೀತು ಮಾಡಿದ್ದಾರೆ. ದುಡ್ಡಿರುವವರಾದರೆ ನಯಾವಾಗಿ ಮಾತನಾಡುತ್ತೀರಾ. ಯಾರಾದರೂ ಬಡವರು, ಅಮಾಯಕರು ಸಿಕ್ಕರೆ ಅವರ ಮೇಲೆ ನಿಮ್ಮ ಶಕ್ತಿ ಪ್ರದರ್ಶನ ಮಾಡುತ್ತೀರಾ ಎಂದು ಗರಂ ಆಗಿದ್ದಾರೆ. ಹಾಗೇ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ನಡೆಯನ್ನು ಮೆಚ್ಚಿಕೊಂಡಿದ್ದಾರೆ. ಅವರು ಮಾಡಿದ್ದು ಸರಿ ಎಂದು ಹೇಳಿದ್ದಾರೆ. ಟ್ರಾಫಿಕ್​ ನಿಯಂತ್ರಣ ಮಾಡುವುದನ್ನು ಬಿಟ್ಟು ದಂಡ ವಸೂಲಿ ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

    ಮೈಸೂರು ಗ್ಯಾಂಗ್​ರೇಪ್​ ಪ್ರಕರಣ: ಭಯಾನಕವಾಗಿದೆ ಆರೋಪಿಗಳ ಹಿನ್ನೆಲೆ, ದುಷ್ಕೃತ್ಯವೇ ಇವರ ಫುಲ್​ ಟೈಂ ಕೆಲ್ಸ!

    ಸೆಪ್ಟೆಂಬರ್​ 1 ರಿಂದ 5… ಆಫ್ಘಾನ್​ ಬೆಳವಣಿಗೆ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ..!

    ಟೋಕಿಯೊ ಪ್ಯಾರಾಲಿಂಪಿಕ್ಸ್‌: ಬೆಳ್ಳಿ ಗೆದ್ದು ಇತಿಹಾಸ ಬರೆದ ಟೇಬಲ್ ಟೆನಿಸ್ ಆಟಗಾರ್ತಿ ಭವಿನಾಬೆನ್ ಪಟೇಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts