More

    ನನ್ನ ಸಾವು ನನ್ನ ಮುಗ್ಧತೆಯನ್ನು ನಿರೂಪಿಸುತ್ತದೆ: ಆತ್ಮಹತ್ಯೆ ಮಾಡ್ಕೊಂಡ ವೈದ್ಯೆಯ ನೋವಿನ ಮಾತು

    ಜೈಪುರ: ನನ್ನ ಸಾವು ನನ್ನ ಮುಗ್ಧತೆಯನ್ನು ಸಾಬೀತು ಮಾಡುತ್ತದೆ. ದಯವಿಟ್ಟು ಅಮಾಯಕ ವೈದ್ಯರಿಗೆ ಕಿರುಕುಳ ನೀಡಬೇಡಿ… ಇದು ಈ ವಾರದ ಆರಂಭದಲ್ಲಿ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವೈದ್ಯೆ ಡಾ. ಅರ್ಚನಾ ಶರ್ಮಾರ ನೋವಿನ ನುಡಿಗಳು.

    ಡಾ. ಅರ್ಚನಾ ಶರ್ಮಾ ದೌಸಾ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯೊಬ್ಬರ ಸಾವಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ)ರ ಅಡಿಯಲ್ಲಿ ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಇದರಿಂದ ಮನನೊಂದು ಅರ್ಚನಾ ಕಳೆದ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸಾಯುವ ಮುನ್ನ ಅರ್ಚನಾ ಡೆತ್​ನೋಟ್​ಗ ಬರೆದಿಟ್ಟಿದ್ದು, ಮನದ ನೋವನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ನನ್ನ ಸಾವಿನ ಬಳಿಕ ನನ್ನ ಗಂಡ ಮತ್ತು ಮಕ್ಕಳಿಗೆ ಕಿರುಕುಳ ನೀಡಬೇಡಿ ಎಂದು ಜನರಿಗೆ ಅರ್ಚನಾ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ಮುಗ್ಧ ವೈದ್ಯರಿಗೆ ಕಿರುಕುಳ ನೀಡಬೇಡಿ ಎಂದು ಕೇಳಿಕೊಂಡಿದ್ದಾರೆ.

    ಡೆತ್​ನೋಟ್​ನ ಸಾರಾಂಶ ಹೀಗಿದೆ…
    ನಾನು ನನ್ನ ಗಂಡ ಮತ್ತು ಮಕ್ಕಳನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಸಾವಿನ ಬಳಿಕ ಅವರಿಗೆ ಕಿರುಕುಳ ನೀಡಬೇಡಿ. ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಯಾರನ್ನೂ ಕೊಲೆ ಮಾಡಿಲ್ಲ. ಪ್ರಸವಾನಂತರದ ರಕ್ತಸ್ರಾವ (PPH) ಒಂದು ಸಮಸ್ಯೆ ಎಂಬುದು ಎಲ್ಲರಿಗೂ ತಿಳಿದಿದೆ. ಇದಕ್ಕಾಗಿ ವೈದ್ಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ. ನಾನು ಮುಗ್ಧಳು ಎಂಬುದನ್ನು ನನ್ನ ಸಾವು ನಿರೂಪಿಸುತ್ತದೆ. ದಯವಿಟ್ಟು ಅಮಾಯಕ ವೈದ್ಯರಿಗೆ ಕಿರುಕುಳ ನೀಡಬೇಡಿ ಎಂದು ಮನವಿ ಮಾಡಿರುವ ಅರ್ಚನಾ, ಗಂಡನನ್ನು ಉದ್ದೇಶಿಸಿ ನಾನು ನಿಮ್ಮನ್ನು ತುಂಬಾ ಇಷ್ಟಪಡುತ್ತೇನೆ. ನನ್ನ ಅನುಪಸ್ಥಿತಿ ಕಾಡದಿರುವಂತೆ ಮಕ್ಕಳನ್ನು ನೋಡಿಕೊಳ್ಳಿ ಎಂದು ಡೆತ್​ ನೋಟ್​ ಬರೆದಿಟ್ಟು ನೋವಿನಿಂದಲೇ ಅರ್ಚನಾ ಸಾವಿನ ಹಾದಿ ಹಿಡಿದಿದ್ದಾರೆ.

    ಏನಿದು ಪ್ರಕರಣ?
    ಡಾ ಅರ್ಚನಾ ಶರ್ಮಾ ಅವರ ಮೇಲೆ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಅರ್ಚನಾ, ಗರ್ಭಿಣಿ ಮಹಿಳೆಯೊಬ್ಬರು ತೀವ್ರ ರಕ್ತಸ್ರಾವದ ಪರಿಣಾಮವಾಗಿ ಸಾವಿಗೀಡಾದರು. ರೋಗಿಯ ಸಾವಿನ ನಂತರ, ಗರ್ಭಿಣಿಯ ಕುಟುಂಬ ಸದಸ್ಯರು ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯವನ್ನು ಆರೋಪಿಸಿದರು. ಇತ್ತ ರಾಜಕೀಯ ಒತ್ತಡಕ್ಕೆ ಮಣಿದ ಲಾಲ್ಸೋಟ್ ಪೊಲೀಸರು ಡಾ.ಅರ್ಚನಾ ಶರ್ಮಾ ವಿರುದ್ಧ ಐಪಿಸಿ 302ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಇದು ಡಾ ಶರ್ಮಾ ಅವರ ಆತ್ಮಹತ್ಯೆಗೆ ನೂಕಿದೆ ಎಂದು ವರದಿಯಾಗಿದೆ.

    ಪೊಲೀಸ್​ ಅಧಿಕಾರಿ ಅಮಾನತು
    ಅರ್ಚನಾ ಶರ್ಮಾ ಆತ್ಮಹತ್ಯೆಯ ಬೆನ್ನಲ್ಲೇ ದೌಸಾ ಜಿಲ್ಲೆಯ ಲಾಲ್ಸೊಟ್​ ಪೊಲೀಸ್​ ಠಾಣೆಯ ಉಸ್ತುವಾರಿ ಅಧಿಕಾರಿ ಅಂಕಿತ್​ ಚೌಧರಿ ಅವರನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಪ್ರಕರಣವನ್ನು ಸರಿಯಾಗಿ ನಿರ್ವಹಿಸದಿದ್ದಕ್ಕೆ ದೌಸಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವರನ್ನು ವಜಾಗೊಳಿಸಲು ರಾಜಸ್ಥಾನ ಸರ್ಕಾರವು ಆದೇಶಿಸಿದೆ. ಬುಧವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. ಸಭೆಯಲ್ಲಿ ಮಹಿಳೆಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮಕೈಗೊಳ್ಳಲು ನಿರ್ಧರಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ. (ಏಜೆನ್ಸೀಸ್​)

    ಕಚ್ಚಾ ಬಾದಾಮ್​ ಹಾಡಿಗೆ ಸೊಂಟ ಬಳುಕಿಸಿದ ಶಾಸಕಿ ರೋಜಾ: ವಿಡಿಯೋ ವೈರಲ್​!

    ಏರುತ್ತಲೇ ಇದೆ ಇಂಧನ ದರ, ಜನ ಸಾಮಾನ್ಯರ ಬದುಕು ಭಾರ: ಇಂದಿನ ಪೆಟ್ರೋಲ್​-ಡೀಸೆಲ್​ ದರ ಹೀಗಿದೆ

    ಪುರಿ ಜತೆ ವಿಜಯ್ ದೇವರಕೊಂಡ; ಲೈಗರ್ ಬಿಡುಗಡೆಗೂ ಮೊದಲೇ ಜನಗಣಮನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts