More

    ಹಸಿವು ಮರೆಯಲು ಯೂಟ್ಯೂಬ್​ ನೋಡ್ತಿದ್ದ ದಿನಗೂಲಿ ಕಾರ್ಮಿಕನಿಂದು ಅದೇ ಯೂಟ್ಯೂಬ್​ನಿಂದ ಲಕ್ಷಾಧಿಪತಿ!

    ಭುವನೇಶ್ವರ್​: ಕರೊನಾ ಲಾಕ್​ಡೌನ್​​ನಿಂದ ಕೆಲಸ ಕಳೆದುಕೊಂಡ ಅನೇಕ ಮಂದಿ ಇನ್ನು ಕೆಲಸಕ್ಕಾಗಿ ಪರಿತಪಿಸುತ್ತಿದ್ದಾರೆ. ದಿನ ನಿತ್ಯದ ಕೂಲಿ ಕಾರ್ಮಿಕನು ಇದಕ್ಕೆ ಹೊರತಾಗಿಲ್ಲ. ಆದರೆ, ತಾಳ್ಮೆಯಿಂದ ಯೋಚಿಸಿ ದೃಢಸಂಕಲ್ಪದಿಂದ ಮುನ್ನಡೆದರೆ ಎಲ್ಲದಕ್ಕೂ ಒಂದು ಪರಿಹಾರ ಇದ್ದೇ ಇದೆ ಎಂಬುದಕ್ಕೆ ಒಡಿಶಾ ಮೂಲದ ವ್ಯಕ್ತಿ ತಾಜಾ ಉದಾಹರಣೆ ಆಗಿದ್ದಾರೆ.

    ಹೌದು. ತನ್ನ ಹಸಿವಿನ ಬಗ್ಗೆ ಚಿಂತಿಸುವ ಮನಸ್ಸನ್ನು ಬೇರೆಡೆಗೆ ಹರಿಸಲು ಯೂಟ್ಯೂಬ್​ ವಿಡಿಯೋಗಳನ್ನು ನೋಡ್ತಿದ್ದ ವ್ಯಕ್ತಿ, ಈಗ ಅದೇ ಯೂಟ್ಯೂಬ್​ನಲ್ಲಿ ಇಸಾಕ್​ ಮುಂಡಾ ಹೆಸರಿನಲ್ಲಿ ಪ್ರಖ್ಯಾತಿಯಾಗಿದ್ದು, ಇದಕ್ಕಿಂತ ಸ್ಫೂರ್ತಿದಾಯಕ ಕತೆಗಿಂತ ಬೇರೊಂದಿಲ್ಲ ಎನ್ನುವ ಮಟ್ಟಿಗೆ ಇತರರನ್ನು ತನ್ನಡೆಗೆ ಗಮನ ಸೆಳೆದಿದ್ದಾರೆ.

    ಮುಖ್ಯ ಸ್ಟೋರಿಗೆ ಬರುವುದಾದರೆ, ಮುಂಡಾ ಎಂಬಾತ ಒಡಿಶಾದ ಸಂಬಲ್ಪುರ್​ ಜಿಲ್ಲೆಯ ಬುಡಕಟ್ಟು ಮೂಲದ ವ್ಯಕ್ತಿ. ದಿನಗೂಲಿ ನೌಕರನಾಗಿದ್ದ ಮುಂಡಾ ಲಾಕ್​ಡೌನ್​ನಿಂದ ಕೆಲಸವಿಲ್ಲದೆ, ಊಟಕ್ಕೂ ಪರದಾಡಿದ್ದರು. ಇತ್ತ ತನ್ನ ಹಸಿವನ್ನು ಮರೆಯಲು ಯೂಟ್ಯೂಬ್​ ವಿಡಿಯೋ ನೋಡ್ತಿದ್ದ ಮುಂಡಾ, ಫುಡ್​ ಬ್ಲಾಗ್ಗರ್ಸ್​ನಿಂದ ಸ್ಫೂರ್ತಿ ಪಡೆದು ತಾನೇ ಒಂದು ಚಾನೆಲ್​ ತೆರೆದು ಮಾರ್ಚ್​ 2020ರಿಂದ ವಿಡಿಯೋ ಮಾಡಲು ಆರಂಭಿಸಿದ.

    35 ವರ್ಷದ ಮುಂಡಾ ಮೊದಲು ಒಂದು ಪ್ಲೇಟ್​ನಲ್ಲಿ ಬೇಯಿಸಿದ ಅಕ್ಕಿ ಹಾಕಿಕೊಂಡು, ಸಾಂಬಾರ್, ಟೊಮ್ಯಾಟೋ ಮತ್ತು ಹಸಿರು ಮೆಣಸಿನಕಾಯಿಗಳನ್ನು ತಿನ್ನುತ್ತಿರುವ ವಿಡಿಯೋ ಮಾಡಿದ. ಅದು ಈವರೆಗೂ ಅರ್ಧ ಮಿಲಿಯನ್​ ವೀಕ್ಷಣೆ ಕಂಡಿದೆ. ಮುಂಡಾ ವಿಡಿಯೋ ಮಾಡುವುದಕ್ಕಾಗಿಯೇ 3,000 ರೂಪಾಯಿ ಸಾಲ ಮಾಡಿ ಒಂದು ಸ್ಮಾರ್ಟ್​ಫೋನ್​ ಕೊಂಡುಕೊಂಡಿದ್ದಾನೆ.

    ನನ್ನ ಬಡ ಮನೆ ಮತ್ತು ಹಳ್ಳಿಯಲ್ಲಿ ನಾನು ಹೇಗೆ ಜೀವನ ನಡೆಸುತ್ತೇವೆ ಎಂಬುದರ ಬಗ್ಗೆಯೇ ವಿಡಿಯೊಗಳನ್ನು ತಯಾರಿಸುತ್ತೇನೆ. ನಾವು ಹೇಗೆ ತಿನ್ನುತ್ತೇವೆ ಎಂಬುದನ್ನು ವಿಡಿಯೋದಲ್ಲಿ ತೋರಿಸುತ್ತೇನೆ. ನನ್ನ ವಿಡಿಯೊಗಳಿಗೆ ಉತ್ತಮ ಸ್ಪಂದನೆ ಬರುತ್ತಿರುವುದನ್ನು ತಿಳಿದು ನನಗೆ ತುಂಬಾ ಖುಷಿಯಾಗಿದೆ. ನಾನೀಗ ಯೋಗ್ಯ ಆದಾಯವನ್ನು ಗಳಿಸುತ್ತಿದ್ದೇನೆ ಎಂದು ಮುಂಡಾ ಹೇಳಿದ್ದಾರೆ.

    ಮುಂಡಾ ಸದ್ಯ ಯೂಟ್ಯೂಬ್​ನಲ್ಲಿ 7 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಇಸಾಕ್​​ ಮುಂಡಾ ಈಟಿಂಗ್​ (Isak Munda Eating) ಎಂದು ಯೂಟ್ಯೂಬ್​ ಚಾನೆಲ್​ ಹೆಸರಿಡಲಾಗಿದೆ. ಅವರ ಹೆಚ್ಚಿನ ವಿಡಿಯೋಗಳು ಸ್ಥಳೀಯತೆ ಮತ್ತು ಪ್ರಾದೇಶಿಕ ಪಾಕಪದ್ಧತಿಯನ್ನು ತೋರಿಸುತ್ತವೆ ಮತ್ತು ಸರಳ, ದೈನಂದಿನ ಆಹಾರ ವಿಡಿಯೋಗಳು ಇಂದು ದಿನಗೂಲಿ ಕಾರ್ಮಿಕನನ್ನು ಲಕ್ಷಪತಿಯನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದೆ.

    2020 ಆಗಸ್ಟ್​ನಲ್ಲಿ ಯೂಟ್ಯೂಬ್​ನಿಂದ 5 ಲಕ್ಷ ರೂ. ಆದಾಯವನ್ನು ಸ್ವೀಕರಿಸಿದೆ. ಬಂದ ಹಣದಿಂದ ಮನೆಯನ್ನು ನಿರ್ಮಿಸಿದ್ದೇನೆ. ನನ್ನ ಕುಟುಂಬದ ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಿದ್ದೇನೆ ಎಂದು ಮುಂಡಾ ಸಂತಸ ಹಂಚಿಕೊಂಡಿದ್ದಾರೆ.

    ಅಂದಹಾಗೆ ಮುಂಡಾ ಅವರ ಏಕೈಕ ಗುರಿ ಯೂಟ್ಯೂಬ್ ವಿಡಿಯೋಗಳಿಂದ ಹಣ ಸಂಪಾದಿಸುವುದು ಮಾತ್ರವಲ್ಲ, ನಮ್ಮ ಸ್ಥಳೀಯ ಸಂಪ್ರದಾಯಗಳ ಬಗ್ಗೆ ಮತ್ತು ಅದು ಹೋರಾಡುತ್ತಿರುವ ಋಣಾತ್ಮಕ ಪ್ರಭಾವಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಾನು ಬಯಸುತ್ತೇನೆಂದು ಹೇಳಿದ್ದಾರೆ. (ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts