More

    ಜಾರ್ಖಂಡ್​ ರಾಜಕೀಯ ಬಿಕ್ಕಟ್ಟು: ಶಾಸಕರ ಖರೀದಿ ಭೀತಿ, ಸಿಎಂ ಸೊರೆನ್​ ಸೇರಿ ಶಾಸಕರೆಲ್ಲರು ಹೋಟೆಲ್​ಗೆ ಶಿಫ್ಟ್​

    ರಾಂಚಿ: ಜಾರ್ಖಂಡ್​ ರಾಜ್ಯ ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ ಸಂಭವಿಸಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಹೇಮಂತ್​ ಸೊರೆನ್, ಅಧಿಕಾರ ದುರ್ಬಳಕೆ ಆರೋಪ ಎದುರಿಸುತ್ತಿದ್ದು, ಅವರ ಶಾಸಕ ಸ್ಥಾನ ವಜಾಗೊಳ್ಳುವ ಭೀತಿ ಎದುರಾಗಿರುವ ಬೆನ್ನಲ್ಲೇ ಮೈತ್ರಿ ಪಕ್ಷ ಕಾಂಗ್ರೆಸ್​, ತನ್ನ ಶಾಸಕರನ್ನು ಹೋಟೆಲ್​ಗೆ ಸ್ಥಳಾಂತರ ಮಾಡುತ್ತಿದೆ.

    ಸದ್ಯ ಜಾರ್ಖಂಡ್​ ಸರ್ಕಾರದಲ್ಲಿ ಅಭದ್ರತೆ ಎದುರಾಗಿದ್ದು, ಶಾಸಕರ ಕುದರೆ ವ್ಯಾಪಾರ ಭೀತಿ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷ ಕಾಂಗ್ರೆಸ್​ ಶಾಸಕರನ್ನು ಸ್ಥಳಾಂತರ ಮಾಡುತ್ತಿದೆ. ಸಿಎಂ ಹೇಮಂತ್ ಸೋರೆನ್​ ಅವರ ಜಾರ್ಖಂಡ್​ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್​ ಸೇರಿ ಜಾರ್ಖಂಡ್​​ನಲ್ಲಿ ಸರ್ಕಾರ ರಚನೆ ಮಾಡಿದ್ದು​, ಇದೀಗ ಅಕ್ರಮ ಗಣಿಗಾರಿಕೆ ಪ್ರಕರಣ ಸರ್ಕಾರದ ಬುಡ ಅಲುಗಾಡಿಸುತ್ತಿದೆ.

    ಸಿಎಂ ಅಧಿಕೃತ ನಿವಾಸದಲ್ಲಿ ಸಭೆ ನಡೆದ ಬಳಿಕ ಸೊರೆನ್​ ಮತ್ತು ಶಾಸಕರು ತಮ್ಮ ಲಗೇಜುಗಳನ್ನು ತೆಗೆದುಕೊಂಡು ಬಸ್ಸನ್ನೇರಿ ಹೊರಡುತ್ತಿರುವ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಎಲ್ಲ ಶಾಸಕರು ಜಾರ್ಖಂಡ್​ ರಾಜಧಾನಿ ರಾಂಚಿಯಿಂದ 30 ಕಿ.ಮೀ ದೂರದಲ್ಲಿರುವ ಖುಂತಿಗೆ ತೆರಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ತಮ್ಮ ಸ್ನೇಹ ರಾಜ್ಯಗಳಾದ ಪಶ್ಚಿಮ ಬಂಗಾ ಮತ್ತು ಛತ್ತೀಸ್​ಗಢಕ್ಕೆ ತೆರಳಲು ನಿರ್ಧಾರ ಮಾಡಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ತಮ್ಮ ಯೋಜನೆ ಬದಲಾಗಿದ್ದು, ಖುಂತಿ ಕಡೆಗೆ ತೆರಳಿದ್ದಾರೆ.

    ಎಲ್ಲ ಶಾಸಕರು ಹಾಗೂ ಪಕ್ಷದ ನಾಯಕರು ಹೊರಡುವ ಮುನ್ನ ಸಿಎಂ ಸೊರೆನ್​ ಅವರು ಮೂರು ಸುತ್ತಿನ ಸಭೆ ನಡೆಸಿ, ರಾಜ್ಯ ರಾಜಕಾರಣದಲ್ಲಿ ಎದುರಾಗಿರುವ ರಾಜಕೀಯ ತುರ್ತುಪರಿಸ್ಥಿತಿಯನ್ನು ಯಾವ ರೀತಿಯಲ್ಲಿ ನಿಭಾಯಿಸಬೇಕೆಂದು ಚರ್ಚೆ ನಡೆಸಿದರು. ಒಟ್ಟು 43 ಶಾಸಕರ ಗುಂಪು ಖುಂತಿಗೆ ಕಡೆ ತೆರಳಿದೆ ಎಂದು ಮೂಲಗಳು ತಿಳಿಸಿವೆ.

    ಪ್ರಕರಣ ಹಿನ್ನೆಲೆ ಏನು?
    ಗಣಿ ಗುತ್ತಿಗೆ ಅಕ್ರಮ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್​ಗೆ ಈಗ ಅನರ್ಹತೆ ಭೀತಿ ಶುರುವಾಗಿದೆ. ಅಧಿಕಾರ ದುರುಪಯೋಗ ಸಂಬಂಧ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಚುನಾವಣಾ ಆಯೋಗವು ರಾಜ್ಯಪಾಲರಿಗೆ ಶಿಫಾರಸು ಮಾಡಿದೆ.

    ಚುನಾವಣಾ ಆಯೋಗ ಅಥವಾ ರಾಜ್ಯಪಾಲ ರಮೇಶ್ ಬೈಸ್ ಅವರಿಂದ ಮುಖ್ಯಮಂತ್ರಿಗಳ ಕಚೇರಿಗೆ ಯಾವುದೇ ಸಂದೇಶ ರವಾನೆಯಾಗಿಲ್ಲ ಎಂದು ಮುಖ್ಯಮಂತ್ರಿ ಸೊರೆನ್ ಅವರ ಸಚಿವಾಲಯ ತಿಳಿಸಿದೆ. ‘ಬಿಜೆಪಿ ಸಂಸದರೊಬ್ಬರು ಮತ್ತು ಅವರ ಕೈಗೊಂಬೆಯಾಗಿರುವವರು ಸೇರಿದಂತೆ ಬಿಜೆಪಿ ನಾಯಕರೇ ಚುನಾವಣೆ ಆಯೋಗದ ವರದಿಯನ್ನು ಸಿದ್ಧಪಡಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇಲ್ಲದಿದ್ದರೆ ಮುಚ್ಚಿದ ಲಕೋಟೆಯಲ್ಲಿನ ವರದಿ ಇದಾಗಿರುತ್ತಿತ್ತು’ ಎಂದು ಸೊರೆನ್ ಅವರು ತಮ್ಮ ಸಚಿವಾಲಯದ ಮೂಲಕ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಾಂವಿಧಾನಿಕ ಅಧಿಕಾರಗಳ ಮತ್ತು ಸಾರ್ವಜನಿಕ ಸಂಸ್ಥೆಗಳ ತೀವ್ರ ದುರ್ಬಳಕೆ ಇದಾಗಿದೆ. ದೀನದಯಾಳ್ ಉಪಾಧ್ಯಾಯ ರಸ್ತೆಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯು ಈ ಸಂಸ್ಥೆಗಳನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡಿದೆ. ಭಾರತೀಯ ಪ್ರಜಾಪ್ರಭುತ್ವದಲ್ಲಿ ಹಿಂದೆಂದೂ ಕಾಣದ ನಾಚಿಕೆಗೇಡಿನ ಕ್ರಮ ಇದಾಗಿದೆ‘ ಎಂದು ಸೊರೆನ್ ಟೀಕಿಸಿದ್ದಾರೆ.

    ಗಣಿ ಗುತ್ತಿಗೆ ಪ್ರಕರಣವೊಂದರಲ್ಲಿ ಚುನಾವಣಾ ಆಯೋಗವು ಸೊರೆನ್ ಅವರ ಶಾಸಕತ್ವ ಅನರ್ಹತೆಗೆ ಶಿಫಾರಸು ಮಾಡಿ ರಾಜ್ಯಪಾಲರಿಗೆ ವರದಿ ಕಳುಹಿಸಿದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಚುನಾವಣಾ ಆಯೋಗದ ಪತ್ರವು ರಾಜ್ಯಪಾಲರಿಗೆ ತಲುಪಿದೆ ಎಂದು ಗೊಡ್ಡಾದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕೂಡ ಟ್ವೀಟ್​ನಲ್ಲಿ ಪ್ರಕಟಿಸಿದ್ದಾರೆ. ‘ನೈತಿಕತೆ ಆಧರಿಸಿ ಹೇಮಂತ್ ಸೊರೆನ್ ಅವರು ಮಧ್ಯಂತರ ಚುನಾವಣೆಗೆ ಮುಂದಾಗಬೇಕು. ವಿಧಾನಸಭೆಯನ್ನು ವಿಸರ್ಜಿಸಬೇಕು. ಎಲ್ಲ 81 ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆ ನಡೆಸಬೇಕು’ ಎಂದು ದುಬೆ ಒತ್ತಾಯಿಸಿದ್ದಾರೆ.

    ತಮ್ಮ ಗಣಿ ಗುತ್ತಿಗೆಯೊಂದನ್ನು ತಾವೇ ವಿಸ್ತರಿಸಿಕೊಳ್ಳುವ ಮೂಲಕ ಸೊರೆನ್ ಅವರು ಚುನಾವಣೆ ಕಾನೂನು ಉಲ್ಲಂಘಿಸಿರುವುದರಿಂದ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂಬ ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ತನ್ನ ಅಭಿಪ್ರಾಯವನ್ನು ರಾಜ್ಯಪಾಲರಿಗೆ ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ. ಗುರುವಾರ ಬೆಳಗ್ಗೆ ಮುಚ್ಚಿದ ಲಕೋಟೆಯೊಂದರಲ್ಲಿ ಈ ಅಭಿಪ್ರಾಯವನ್ನು ರಾಜ ಭವನಕ್ಕೆ ರವಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.

    ಏನಿದು ಪ್ರಕರಣ?
    ಸರ್ಕಾರಿ ಗುತ್ತಿಗೆಗಳ ಅನರ್ಹತೆಗೆ ಸಂಬಂಧಿಸಿರುವ 1951ರ ಜನಪ್ರತಿನಿಧಿ ಕಾಯ್ದೆ ಸೆಕ್ಷನ್ 9 ಎ ಅನ್ನು ಉಲ್ಲಂಘಿಸಿದ್ದಕ್ಕಾಗಿ ಸೊರೆನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಈ ಪ್ರಕರಣದಲ್ಲಿ ಅರ್ಜಿದಾರನಾಗಿರುವ ಬಿಜೆಪಿಯು ಆಗ್ರಹಿಸಿದೆ. ಸೊರೆನ್ ಅವರು ಗಣಿ ಗುತ್ತಿಗೆಯನ್ನು ತಮಗೆ ತಾವೇ ನೀಡಿಕೊಂಡಿರುವುದರಿಂದ ಅವರನ್ನು ಅನರ್ಹಗೊಳಿಸಬೇಕೆಂದು ಬೇಡಿಕೆ ಮುಂದಿಟ್ಟಿದ್ದೇವೆ ಎಂದೂ ಅದು ಹೇಳಿದೆ.

    ರಾಜ್ಯಪಾಲರ ನಿರ್ಧಾರ ಅಂತಿಮ
    ಒಂದು ರಾಜ್ಯದ ಶಾಸನಸಭೆಯ ಸದಸ್ಯನ ಅನರ್ಹತೆ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಶ್ನೆ ಉದ್ಭವಿಸಿದರೆ, ಸಂವಿಧಾನದ 192ನೇ ವಿಧಿಯ ಪ್ರಕಾರ ಈ ಪ್ರಶ್ನೆಯನ್ನು ರಾಜ್ಯಪಾಲರಿಗೆ ಕಳುಹಿಸಬೇಕು ಹಾಗೂ ಈ ಕುರಿತಂತೆ ರಾಜ್ಯಪಾಲರ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಏತನ್ಮಧ್ಯೆ ಜೆಎಂಎಂ, ತಕ್ಷಣ ಸಭೆ ನಡೆಸುವುದಕ್ಕಾಗಿ ತನ್ನೆಲ್ಲ ಶಾಸಕರನ್ನು ರಾಂಚಿಗೆ ಕರೆದಿದೆ. ಸೊರೆನ್ ಮೈತ್ರಿಕೂಟ ಸರ್ಕಾರದ ಅಂಗಪಕ್ಷವಾಗಿರುವ ಕಾಂಗ್ರೆಸ್, ಮೈತ್ರಿಕೂಟಕ್ಕೆ ಬಹುಮತದ ಸಂಖ್ಯಾಬಲವಿದೆ ಎಂದು ಹೇಳಿದೆ. (ಏಜೆನ್ಸೀಸ್​)

    ಪತ್ನಿ ಕಾಟ ಸಹಿಸದೇ ತಿಂಗಳಿನಿಂದ ಮರದ ಮೇಲೆ ಪತಿರಾಯ: ಅಕ್ಕ-ಪಕ್ಕದ ಮಹಿಳೆಯರಿಗೆ ಶುರುವಾಯ್ತು ಗ್ರಹಚಾರ!

    ತರಬೇತಿ ನಿರತ 500 ಐಎಎಸ್ ಅಧಿಕಾರಿಗಳಿಗೆ ಗ್ರಾಪಂ ಅಧ್ಯಕ್ಷರಿಂದ ಪಾಠ! ವಿಜಯನಗರ ಜಿಲ್ಲೆಯ ಮಹೇಂದ್ರಗೆ ಅವಕಾಶ

    ಒಳ ಉಡುಪು ಕಳಚಿಟ್ಟು ನೀಟ್​ ಬರೆದ ವಿದ್ಯಾರ್ಥಿನಿಯರಿಗೆ ಪುನಃ ಪರೀಕ್ಷೆ: ಎನ್​ಟಿಎ ಮಹತ್ವದ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts