More

    ನಿಲ್ಲದ ಅಪಘಾತಗಳ ಸರಣಿ: ಸಾವಿನ ಹೆದ್ದಾರಿ ಎಂಬುದನ್ನು ಮತ್ತೆ ನೆನಪಿಸಿದ ಕೊಲ್ಲಾಪುರ-ಹುಬ್ಬಳ್ಳಿ ಹೆದ್ದಾರಿ

    ಹುಬ್ಬಳ್ಳಿ: ಕೇವಲ ಎರಡು ದಿನಗಳ ಅಂತರಲ್ಲಿ ಎರಡು ಭೀಕರ ಅಪಘಾತಗಳು ಕೊಲ್ಲಾಪುರ-ಹುಬ್ಬಳ್ಳಿ ಹೆದ್ದಾರಿಯಲ್ಲಿ ನಡೆದಿದ್ದು, ಒಟ್ಟು 18 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಕೊಲ್ಲಾಪುರ-ಹುಬ್ಬಳ್ಳಿ ಹೆದ್ದಾರಿಯು ಸಾವಿನ ಹೆದ್ದಾರಿ ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ.

    ಈ ಹೆದ್ದಾರಿಯಲ್ಲಿ ಪ್ರತಿ ವರ್ಷವೂ ಒಂದಲ್ಲ ಒಂದು ಭೀಕರ ಅಪಘಾತಗಳು ಸಂಭವಿಸುತ್ತಿದ್ದು, ಕಿಲ್ಲರ್​ ಹೆದ್ದಾರಿಯಂದೇ ಕುಖ್ಯಾತಿಯಾಗಿದೆ. ಮೇ. 21ರ ಶನಿವಾರದಂದು ಧಾರವಾಡ ಬಾಡ ಕ್ರಾಸ್ ಬಳಿಯ ಇದೇ ಹೆದ್ದಾರಿಯಲ್ಲಿ ಕ್ರೂಸರ್​ ಕಾರು ಮರಕ್ಕೆ ಡಿಕ್ಕಿಯಾಗಿ 9 ಮಂದಿ ಭೀಕರ ಸಾವೀಗಿಡಾಗಿದ್ದಾರೆ. ಧಾರವಾಡ ತಾಲೂಕಿನ ನಿಗದಿ ಗ್ರಾಮದ ಯುವ ಮಂಜುನಾಥ ಮತ್ತು ಸವದತ್ತಿಯ ರೂಪಾ ಅವರ ಮದುವೆ ಶನಿವಾರ ನಿಗದಿಯಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ವರನ ಸ್ವಗೃಹದ ಬಳಿಯೇ ಮದುವೆ ಅದ್ದೂರಿಯಾಗಿ ನಡೆಯಲಿತ್ತು. ಆದರೆ ಮಳೆಯಿಂದಾಗಿ ಮದುವೆಯನ್ನ ಮನಸೂರ ಬಳಿಯ ಕಲ್ಯಾಣ ಮಂಟಪದಲ್ಲಿ ನಡೆಸಲು ಕುಟುಂಬಸ್ಥರು ಕೊನೇ ಗಳಿಗೆಯಲ್ಲಿ ನಿರ್ಧರಿಸಿದ್ದರು. ಅದರಂತೆ ಶುಕ್ರವಾರ ರಾತ್ರಿ ಮನೆಯಲ್ಲೇ ನಿಶ್ಚಿತಾರ್ಥ ಮುಗಿಸಿದ್ದರು. ಶನಿವಾರ ಬೆಳಗಿನ ಜಾವ ಎಲ್ಲರೂ ಮದುವೆ ಮಂಟಪಕ್ಕೆ ಹೊರಟಿದ್ದರು. ದಿಬ್ಬಣ ಹೊರಟ ಕ್ರೂಸರ್​ ವಾಹನ ಮಾರ್ಗಮಧ್ಯೆ ಮರಕ್ಕೆ ಡಿಕ್ಕಿ ಹೊಡೆದು ಪಲ್ಡಿಯಾಗಿದೆ. ಅಪಘಾತದ ಭೀಕರತೆಗೆ ವರ ಹಾಗೂ ವಧುನಿನ ಸಂಬಂಧಿಕರು ಮೃತಪಟ್ಟಿದ್ದಾರೆ. 7 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಎರಡೇ ದಿನದಲ್ಲಿ ಮತ್ತೊಂದು ದುರಂತ
    ಮೇಲಿನ ಅಪಘಾತದ ಘಟನೆ ಮಾಸುವ ಮುನ್ನವೇ ಮತ್ತೊಂದು ಭೀಕರ ಅಪಘಾತ ಇದೇ ಹೆದ್ದಾರಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ರಾಯನಾಳ ರಸ್ತೆಯಲ್ಲಿ ತಡರಾತ್ರಿ 12.45ರ ಸುಮಾರಿಗೆ ನಡೆದಿದೆ. ಕೊಲ್ಲಾಪುರದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ಅಕ್ಕಿ ತುಂಬಿದ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಲಾರಿ ಡ್ರೈವರ್, ಕ್ಲೀನರ್ ಹಾಗೂ ಬಸ್​ನಲ್ಲಿದ್ದವರು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ. 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಹಿಂದೆಯೂ ನಡೆದಿತ್ತು ಅಪಘಾತ
    2021ರ ಜನವರಿ 15ರಂದು ಬೆಳ್ಳಂಬೆಳಗ್ಗೆ ಧಾರವಾಡದ ಇಟ್ಟಿಗಟ್ಟಿ ಬಳಿ ಲಾರಿ ಮತ್ತು ಮಿನಿಬಸ್​ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ವೈದ್ಯೆ ಸೇರಿ ಪ್ರತಿಷ್ಠಿತ ಕುಟುಂಬಗಳ ಮಹಿಳೆಯರು ಮೃತಪಟ್ಟ ಸುದ್ದಿ ದಾವಣಗೆರೆ ಮಾತ್ರವಲ್ಲ, ಇಡೀ ರಾಜ್ಯದ ಜನರಿಗೆ ಬರಸಿಡಿಲಿನಂತೆ ಎರಗಿತ್ತು. ಈ ಅಪಘಾತದಲ್ಲಿ ಒಟ್ಟು 13 ಮಂದಿ ಮೃತಪಟ್ಟಿದ್ದರು. ದಾವಣಗೆರೆ ನಗರದ ಸೇಂಟ್​ ಪಾಲ್ಸ್​ ಕಾನ್ವೆಂಟ್​ ಶಾಲೆಯ 1989ರ ಸಾಲಿನ ವಿದ್ಯಾರ್ಥಿಗಳಾಗಿದ್ದ ಬಾಲ್ಯದ ಗೆಳತಿಯರು. ಸಂಕ್ರಾಂತಿ ಹಬ್ಬದ ಖುಷಿಯ ನಡುವೆ ಗೋವಾ ಪ್ರವಾಸಕ್ಕೆ ಹೊರಟಿದ್ದರು. ಪ್ರವಾಸಕ್ಕೆಂದು ಟಿಟಿ ವಾಹನ ಹತ್ತುತ್ತಿದ್ದಂತೆ ಬಾಲ್ಯದ ಸ್ನೇಹಿತೆಯರೆಲ್ಲರೂ ಮೊಬೈಲ್​ನಲ್ಲಿ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡು ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ‘ಗೋ ಗೋವಾ ವಿಥ್​ ಸ್ಕೂಲ್​ ಬುಡ್ಡೀಸ್​’ ಎಂದು ಹಾಕಿಕೊಂಡಿದ್ದರು. ಅವರು ಬದುಕಿದ್ದಾಗ ತೆಗೆದ ಕೊನೇ ಫೋಟೋ ಅದೇ ಆಗಿತ್ತು.

    2020ರ ಜನವರಿ 26ರಂದು ಇದೇ ರಸ್ತೆಯಲ್ಲಿ ಕುಂದಗೋಳ ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ ಅವರ ಕಾರು ಅಪಘಾತಕ್ಕೀಡಾಗಿತ್ತು. ಈ ದುರ್ಘಟನೆಯಲ್ಲಿ ಸ್ವಾಮೀಜಿ ಸೇರಿದಂತೆ ಅವರೊಂದಿಗೆ ಪ್ರಯಾಣಿಸುತ್ತಿದ್ದವರೂ ಮೃತಪಟ್ಟಿದ್ದರು. 2011ರ ಜನವರಿ 15ರಂದೂ ಇದೇ ಜಾಗದಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಆ ವೇಳೆಯೂ 11 ಜನರ ಜೀವ ಹೋಗಿತ್ತು.

    ಧಾರವಾಡ-ಹುಬ್ಬಳ್ಳಿ ಮಧ್ಯದ ಬೈಪಾಸ್ ರಸ್ತೆ ಇಕ್ಕಟ್ಟಾಗಿದ್ದು, ಈ ಭಾಗದಲ್ಲಿ ರಸ್ತೆ ಅಗಲೀಕರಣ ಆಗಿಲ್ಲ. ಹುಬ್ಬಳ್ಳಿಯ ಗಬ್ಬೂರ ಬೈಪಾಸ್​ನಿಂದ ಧಾರವಾಡದ ನರೇಂದ್ರ ವರೆಗೆ ಸಿಂಗಲ್​ ಲೇನ್​ ಇದೆ. ಪರಿಣಾಮ ಈ ಸ್ಥಳ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ರಸ್ತೆ ಅಗಲೀಕರಣಕ್ಕಾಗಿ ಹಲವರು ಹೋರಾಟ ಮಾಡಿದ್ದರೂ ಪ್ರಯೋಜನವಾಗಿಲ್ಲ.

    ಎಚ್​ಡಿಕೆ ಕಳವಳ
    ಈ ಹೆದ್ದಾರಿಯಲ್ಲಿ ಪದೇಪದೆ ಅಪಘಾತಗಳು ಸಂಭವಿಸುತ್ತಿರುವುದನ್ನು ಮನಗಂಡಿರುವ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ಹೊರ ವಲಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಸಾವನ್ನಪ್ಪಿರುವುದು ತೀವ್ರ ಆಘಾತ ತಂದಿದೆ. ನಿನ್ನೆ ರಾತ್ರಿ ಸಂಭವಿಸಿದ ಈ ದುರಂತದಲ್ಲಿ ಕನಿಷ್ಠ 26 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ದುರಂತದಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ಶಾಂತಿ ಸಿಗಲಿ ಮತ್ತು ಅವರ ಕುಟುಂಬಗಳಿಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅಪಘಾತ ಸಂಭವಿಸಿದ ಕೊಲ್ಲಾಪುರ-ಹುಬ್ಬಳ್ಳಿ ಹೆದ್ದಾರಿಯ ಪ್ರದೇಶದಲ್ಲಿ ಆಗಾಗ್ಗೆ ದುರಂತಗಳು ನಡೆಯುತ್ತಿವೆ, ಇದನ್ನು ಜನರು ‘ಸಾವಿನ ಹೆದ್ದಾರಿ’ ಎಂದು ಹೇಳುತ್ತಾರೆ ಎಂದು ಕುಮಾರಸ್ವಾಮಿ ಕೂ ಮಾಡಿದ್ದಾರೆ.

    ನಿಲ್ಲದ ಅಪಘಾತಗಳ ಸರಣಿ: ಸಾವಿನ ಹೆದ್ದಾರಿ ಎಂಬುದನ್ನು ಮತ್ತೆ ನೆನಪಿಸಿದ ಕೊಲ್ಲಾಪುರ-ಹುಬ್ಬಳ್ಳಿ ಹೆದ್ದಾರಿ

    ಧಾರವಾಡದಲ್ಲಿ ಅಪಘಾತಕ್ಕೆ 13 ಬಲಿ: ಪ್ರತಿ ಜನವರಿ ಇದೇ ಜಾಗದಲ್ಲಿ ನಡೆಯುತ್ತೆ ಭೀಕರ ಆಕ್ಸಿಡೆಂಟ್​!

    ಧಾರವಾಡ ರಸ್ತೆ ಅಪಘಾತ ಪ್ರಕರಣ: ಮೃತರ ಸಂಖ್ಯೆ 9ಕ್ಕೇ ಏರಿಕೆ, ಅಕ್ಕನ ಬೆನ್ನಲ್ಲೇ ತಂಗಿಯು ಸಾವು

    ಧಾರವಾಡದ ಅಪಘಾತ ಘಟನೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ದುರಂತ: 7 ಮಂದಿ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts