More

    #SinghamOurRealHero ಹ್ಯಾಶ್​ಟ್ಯಾಗ್ ಟ್ರೆಂಡ್​ ಮಾಡಿ ಟ್ರೋಲ್​​ ಆದ ಅಜಯ್​ ದೇವಗನ್​ ಬೆಂಬಲಿಗರು

    ಬೆಂಗಳೂರು: ಯಶ್ ಅಭಿನಯದ ಕನ್ನಡದ ‘ಕೆಜಿಎಫ್ 2’ ಚಿತ್ರ ಸೇರಿ ದಕ್ಷಿಣ ಭಾರತದ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಸದ್ದು ಮಾಡುತ್ತಿರುವ ಸಂದರ್ಭದಲ್ಲೇ ‘ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ …’ ಎಂಬ ನಟ ಸುದೀಪ್ ಹೇಳಿಕೆ ಈಗ ಭಾರಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಸುದೀಪ್ ಹೇಳಿಕೆ ಪರವಾಗಿ ಸ್ಯಾಂಡಲ್​ವುಡ್ ನಟ-ನಟಿಯರು ಹಾಗೂ ರಾಜಕಾರಣಿಗಳು ಟ್ವೀಟ್ ಮಾಡಿದ್ದಾರೆ. ಇದಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿದೆ. ಕಿಚ್ಚ ಸುದೀಪ್​ ಎಂಬ ಹ್ಯಾಶ್​ಟ್ಯಾಗ್​ ಟ್ವಿಟರ್​ನಲ್ಲಿ ನಿನ್ನೆಯಿಂದಲೂ ಟ್ರೆಂಡಿಂಗ್​ನಲ್ಲಿದೆ.

    ಇದರ ನಡುವೆ ಸಿಂಗಮ್​ ಅವರ್​ ರಿಯಲ್​ ಹೀರೋ (#SinghamOurRealHero) ಎಂಬ ಹ್ಯಾಶ್​ಟ್ಯಾಗ್ ಕೂಡ ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದ್ದು, ಅಜಯ್​ ದೇವಗನ್​ ಅವರಿಗೆ ಕೆಲವು ಮಂದಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಇದೇ ಹ್ಯಾಶ್​ಟ್ಯಾಗ್ ಇದೀಗ ಅಜಯ್​ ದೇವಗನ್​ ಅವರಿಗೆ ಮುಜುಗರವನ್ನು ಉಂಟು ಮಾಡಿದೆ. ನಿಜವಾದ ಸಿಂಗಂ ನಿಮ್ಮ ಅಜಯ್​ ದೇವಗನ್​ ಅವರಲ್ಲ. ನಮ್ಮ ಸೂಪರ್​ ಸ್ಟಾರ್​ ಸೂರ್ಯ. ನೀವು ಸಿಂಗಂ ಸಿನಿಮಾವನ್ನು ರಿಮೇಕ್​ ಮಾಡಿದ್ದೀರಿ ಎಂಬುದು ನೆನಪಿರಲಿ ಎಂದು ಟ್ವಿಟರ್​ನಲ್ಲಿ ಅಜಯ್​ ದೇವಗನ್​ ಅವರ ಕಾಲೆಳೆಯುತ್ತಿದ್ದಾರೆ.

    ಏನಿದು ವಿವಾದ?
    ಇತ್ತೀಚೆಗೆ ನಡೆದ ‘ಐ ಆಮ್ ಆರ್’ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದು ಸುದೀಪ್ ಹೇಳಿದ್ದರು. ಅದಕ್ಕೆ ಅಜಯ್ ದೇವಗನ್, ‘ನಿಮ್ಮ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲದಿದ್ದರೆ, ನಿಮ್ಮ ಮಾತೃಭಾಷೆಯ ಚಿತ್ರಗಳನ್ನು ಹಿಂದಿಯಲ್ಲೇಕೆ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದೀರಿ? ಹಿಂದಿ ನಮ್ಮ ಮಾತೃಭಾಷೆಯಷ್ಟೇ ಅಲ್ಲ, ರಾಷ್ಟ್ರೀಯ ಭಾಷೆಯೂ ಹೌದು. ಮುಂದೆಯೂ ಹಾಗೆಯೇ ಇರುತ್ತದೆ. ಜನ ಗಣ ಮನ’ ಎಂದು ಟಾಂಗ್ ಕೊಟ್ಟಿದ್ದಾರೆ.

    ಇದಕ್ಕೆ ಉತ್ತರಿಸಿರುವ ಸುದೀಪ್, ‘ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದು ನಾನು ಹೇಳಿದ್ದು, ನಿಮಗೆ ಯಾವ ಅರ್ಥದಲ್ಲಿ ಕೇಳಿಸಿದೆಯೋ ಗೊತ್ತಿಲ್ಲ. ಬಹುಶಃ ಮುಂದಿನ ಬಾರಿ ಎದುರಿಗೆ ಸಿಕ್ಕಾಗ, ನನ್ನ ಮಾತಿನ ಅರ್ಥವೇನು ಎಂದು ವಿವರಿಸುವೆ. ಆ ಮಾತನ್ನು ನಾನು ಯಾರನ್ನೋ ನೋಯಿಸುವುದಕ್ಕೆ, ಪ್ರಚೋದಿಸುವುದಕ್ಕೆ ಅಥವಾ ಚರ್ಚೆ ಶುರು ಮಾಡುವುದಕ್ಕೆ ಹೇಳಿದ್ದಲ್ಲ. ನಾನು ಈ ದೇಶದ ಪ್ರತೀ ಭಾಷೆಯನ್ನು ಪ್ರೀತಿಸುವುದಷ್ಟೇ ಅಲ್ಲ, ಗೌರವಿಸುತ್ತೇನೆ. ಈ ವಿಷಯವನ್ನು ಇನ್ನಷ್ಟು ಬೆಳೆಸುವುದಕ್ಕೆ ಇಷ್ಟವಿಲ್ಲ’ ಎಂದು ಹೇಳಿದ್ದಾರೆ.

    ಇಂಥದ್ದೊಂದು ತಪ್ಪು ತಿಳಿವಳಿಕೆ ಬಗೆಹರಿಸಿದ್ದಕ್ಕೆ ಸುದೀಪ್​ಗೆ ಧನ್ಯವಾದ ತಿಳಿಸಿರುವ ಅಜಯ್ ದೇವಗನ್, ‘ನಾನ್ಯಾವತ್ತೂ ಎಲ್ಲ ಚಿತ್ರರಂಗಗಳೂ ಒಂದೇ ಎಂದು ಭಾವಿಸಿದವನು. ಎಲ್ಲ ಭಾಷೆಗಳನ್ನು ಗೌರವಿಸುವುದರ ಜತೆಗೆ, ಬೇರೆಯವರು ಸಹ ಗೌರವಿಸಬೇಕು ಎಂದು ಬಯಸುವವನು. ಬಹುಶಃ ನಿಮ್ಮ ಮಾತುಗಳನ್ನು ವ್ಯಾಖ್ಯಾನಿಸುವುದರಲ್ಲಿ ಎಲ್ಲೋ ತಪ್ಪಾಗಿರಬಹುದು’ ಎಂದಿದ್ದಾರೆ. ಈ ಬಗ್ಗೆ ಪುನಃ ಟ್ವೀಟ್ ಮಾಡಿರುವ ಸುದೀಪ್, ‘ವ್ಯಾಖ್ಯಾನಗಳೆಂದರೆ ದೃಷ್ಟಿಕೋನಗಳು. ಹಾಗಾಗಿ, ಪೂರ್ತಿ ವಿಷಯ ತಿಳಿಯದೆ ಪ್ರತಿಕ್ರಿಯಿಸಬಾರದು. ಬಹುಶಃ ಒಳ್ಳೆಯ ಕಾರಣಕ್ಕೆ, ನಿಮ್ಮಿಂದ ಟ್ವೀಟ್ ಬಂದಿದ್ದರೆ ಬಹಳ ಖುಷಿಪಡುತ್ತಿದ್ದೆ’ ಎಂದು ಹೇಳಿ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.

    ಆನ್​ಲೈನ್​ನಲ್ಲಿ 1.45 ಕೋಟಿ ರೂ. ವ್ಯವಹಾರ ನಡೆಸಿದ್ದ ಸಾಮಾನ್ಯ ಮಹಿಳೆಯ ಸಾವಿನ ರಹಸ್ಯ ಕೊನೆಗೂ ಬಯಲು

    ಅಯ್ಯೋ ದುರ್ವಿಧಿಯೇ… ಕೆಲ್ಸ ಸಿಕ್ಕ ಖುಷೀಲಿ ಸೌದಿಗೆ ಹೊರಡುವಾಗ ಭೀಕರ ಅಪಘಾತ, ಕಣ್ಮುಂದೆಯೇ ಕುಟುಂಬ ನಾಶ

    ಒಟ್ಟು 545 PSI ಹುದ್ದೆ, ಕಲಬುರಗಿಗೆ ಸಿಂಹಪಾಲು, ಪರೀಕ್ಷಾ ಕ್ರೇಂದ್ರವೊಂದರಲ್ಲೇ 11 ಅಭ್ಯರ್ಥಿಗಳ ಆಯ್ಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts