More

    ದೆಹಲಿ ಪೊಲೀಸರು ನನ್ನ ಬಟ್ಟೆ ಹರಿದು ಹಲ್ಲೆ ಮಾಡಿದ್ರು: ಸಂಸದೆಯ ವಿಡಿಯೋ ಶೇರ್​ ಮಾಡಿದ ಶಶಿ ತರೂರ್​

    ನವದೆಹಲಿ: ನ್ಯಾಷನಲ್​ ಹೆರಾಲ್ಡ್​ ಪ್ರಕರಣ ಸಂಬಂಧ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಈಗಾಗಲೇ ಮೂರು ದಿನಗಳ ಕಾಲ ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆ ಎದುರಿಸಿದ್ದಾರೆ. ಇಂದು ಒಂದು ದಿನ ವಿಚಾರಣೆಗೆ ಬಿಡುವು ನೀಡಲಾಗಿದ್ದು, ನಾಳೆ ಮತ್ತೆ ರಾಹುಲ್​ ಗಾಂಧಿ ವಿಚಾರಣೆಗೆ ಹಾಜರಾಗಬೇಕಿದೆ. ಇಡಿ, ರಾಹುಲ್​ಗೆ ಸಮನ್ಸ್​ ನೀಡಿ ವಿಚಾರಣೆ ಆರಂಭಿಸಿದಾಗಿನಿಂದ ಕಾಂಗ್ರೆಸ್​ ನಾಯಕರು ಹಾಗೂ ಕಾರ್ಯಕರ್ತರು ದೆಹಲಿಯ ಇಡಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

    ಬುಧವಾರ ನಡೆದ ಪ್ರತಿಭಟನೆ ಸಂದರ್ಭದಲ್ಲಿ ದೆಹಲಿ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಮತ್ತು ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಇದರ ನಡುವೆ ನನ್ನ ಬಟ್ಟೆ ಹರಿದು, ಕ್ರೂರವಾಗಿ ಹಲ್ಲೆ ಮಾಡಿದರು ಎಂದು ಕಾಂಗ್ರೆಸ್​ ಸಂಸದೆ ಜ್ಯೋತಿಮಣಿ ಆರೋಪ ಮಾಡಿರುವ ವಿಡಿಯೋ ತುಣುಕನ್ನು ಕಾಂಗ್ರೆಸ್​ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಶಶಿ ತರೂರ್​ ಅವರು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

    ಯಾವುದೇ ಪ್ರಜಾಪ್ರಭುತ್ವದಲ್ಲಿ ಇದು ಅತಿರೇಕದ ಸಂಗತಿಯಾಗಿದೆ. ಮಹಿಳಾ ಪ್ರತಿಭಟನಾಕಾರರನ್ನು ಈ ರೀತಿಯಾಗಿ ನಿಭಾಯಿಸುವುದು ಪ್ರತಿ ಭಾರತೀಯ ಸಭ್ಯತೆಯ ಮಾನದಂಡವನ್ನು ಉಲ್ಲಂಘಿಸುತ್ತದೆ, ಅದರಲ್ಲೂ ಲೋಕಸಭೆಯ ಸಂಸದರಿಗೆ ಈ ರೀತಿ ಮಾಡುವುದು ಸರಿಯಲ್ಲ. ದೆಹಲಿ ಪೊಲೀಸರ ಈ ನಡೆಯನ್ನು ನಾನು ಖಂಡಿಸುತ್ತೇನೆ ಮತ್ತು ಈ ಘಟನೆಯ ಹೊಣೆ ಹೊರುವಂತೆ ಒತ್ತಾಯಿಸುತ್ತೇನೆ. ಸ್ಪೀಕರ್​ ಓಂ ಬಿರ್ಲಾ ಅವರು ಕ್ರಮ ತೆಗೆದುಕೊಳ್ಳಬೇಕೆಂದು ತರೂರ್​ ಟ್ವೀಟ್​ ಮಾಡಿದ್ದಾರೆ.

    ವಿಡಿಯೋದಲ್ಲಿ ತಮಿಳುನಾಡಿನ ಕರೂರ್​ ಕ್ಷೇತ್ರದ ಕಾಂಗ್ರೆಸ್​ ಸಂಸದೆ ಜ್ಯೋತಿಮಣಿ ದೆಹಲಿ ಪೊಲೀಸರ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ. ನನ್ನ ಬಟ್ಟೆಯನ್ನು ಹರಿದು ಹಾಕಿದರು. ಇತರೆ ಪ್ರತಿಭಟನಾಕಾರರ ಜೊತೆಗೆ ಅಪರಾಧಿಯಂತೆ ಹೊತ್ತೊಯ್ದು ನನ್ನನ್ನು ಬಸ್​ ಒಳಗೆ ತಳ್ಳಿದರು ಎನ್ನುತ್ತಾ ಬಟ್ಟೆ ಹರಿದಿರುವುದನ್ನು ವಿಡಿಯೋದಲ್ಲಿ ತೋರಿಸಿದ್ದಾರೆ.

    ಬಸ್ಸಿನಲ್ಲಿ ನಾನು ಸೇರಿದಂತೆ 7-8 ಮಹಿಳೆಯರಿದ್ದೆವು. ನಾವು ಪದೇ ಪದೇ ನೀರು ಕೇಳುತ್ತಿದ್ದೆವು. ಆದರೆ ಅವರು ಕೊಡಲು ನಿರಾಕರಿಸಿದರು. ನಾವು ಅದನ್ನು ಹೊರಗಿನಿಂದ ಖರೀದಿಸಲು ಪ್ರಯತ್ನಿಸಿದಾಗ, ನೀರು ಕೊಡಬೇಡಿ ಎಂದು ಮಾರಾಟಗಾರರಿಗೆ ಹೇಳುತ್ತಿದ್ದರು ಎಂದು ಜ್ಯೋತಿಮಣಿ ಆರೋಪಿಸಿದರು. ಈ ವಿಷಯವನ್ನು ಪರಿಶೀಲಿಸುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಸಂಸದೆ ಒತ್ತಾಯಿಸಿರುವುದು ವಿಡಿಯೋದಲ್ಲಿದೆ.

    ರಾಹುಲ್​ ಗಾಂಧಿ ಅವರು ಸತತ ಮೂರು ದಿನ ವಿಚಾರಣೆಯನ್ನು ಮುಗಿಸಿದ್ದಾರೆ. ಇಂದು ಒಂದು ದಿನ ಬಿಡುವು ಸಿಕ್ಕಿದ್ದು, ನಾಳೆ ಮತ್ತೆ ವಿಚಾರಣೆ ಹಾಜರಾಗಬೇಕಿದೆ. ಇತ್ತ ಕಾಂಗ್ರೆಸ್​ ಪ್ರತಿಭಟನೆಯು ಜೋರಾಗಿದೆ. ಇಂದು ಕಾಂಗ್ರೆಸ್​ ದೇಶಾದ್ಯಂತ ರಾಜಭವನಕ್ಕೆ ಮುತ್ತಿಗೆ ಹಾಕಿದೆ. ಇಡಿ ವಿಚಾರಣೆ ಬಿಜೆಪಿಯ ದ್ವೇಷದ ರಾಜಕಾರಣ ಎಂದು ಆರೋಪಿಸಿದ್ದಾರೆ. ಇನ್ನು ಪ್ರತಿಭಟನಾ ಸಮಯದಲ್ಲಿ ಅನೇಕ ಕಾಂಗ್ರೆಸ್​ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್​)

    ಹೈದರಾಬಾದ್​ ಗ್ಯಾಂಗ್​ರೇಪ್​ ಕೇಸ್​: OTTಯೇ ಪ್ರೇರಣೆ, ಸ್ಫೋಟಕ ಮಾಹಿತಿ ನೀಡಿ ತಪ್ಪೊಪ್ಪಿಕೊಂಡ ಆರೋಪಿಗಳು

    ಮರಣಮೃದಂಗ ಬಾರಿಸುತ್ತಿದೆ ಕಲುಷಿತ ನೀರು ಸರಬರಾಜು ಪ್ರಕರಣ: 7ಕ್ಕೇರಿದ ಸಾವಿನ ಸಂಖ್ಯೆ

    ನನಗೆ ಸರ್ಕಾರಿ ಕೆಲ್ಸ ಕೊಡಿ, ಇಲ್ಲ ಅಂದ್ರೆ ಕೊಳವೆ ಬಾವಿ ತೋಡಿಸಿಕೊಡಿ: ಮತಪೆಟ್ಟಿಗೆಯಲ್ಲಿ ಯುವಕನ ಮನವಿ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts