More

    ಚೀನಾ ವಿಮಾನ ಪತನದಲ್ಲಿ 132 ಮಂದಿ ಸಾವು: ಬೇಕಂತಲೇ ಮಾಡಿದ ಕೃತ್ಯ, ಬೆಚ್ಚಿಬೀಳಿಸಿದೆ ಅಮೆರಿಕ ವರದಿ

    ಬೀಜಿಂಗ್​: ಕಳೆದ ಮಾರ್ಚ್​ ತಿಂಗಳಲ್ಲಿ ಚೀನಾದಲ್ಲಿ ದುರಂತ ಘಟನೆಯೊಂದು ಸಂಭವಿಸಿರು. ಸಿಬ್ಬಂದಿ ಸೇರಿದಂತೆ 132 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ದಕ್ಷಿಣ ಚೀನಾದಲ್ಲಿ ಪತನಗೊಂಡು ಎಲ್ಲರು ಸಾವಿಗೀಡಾಗಿದ್ದರು. ಈ ಘಟನೆಯ ಬಗ್ಗೆ ಇದೀಗ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಉದ್ದೇಶಪೂರ್ವಕವಾಗಿಯೇ ನಡೆದ ದುಷ್ಕೃತ್ಯ ಎಂದು ಹೇಳಲಾಗಿದೆ.

    ಪತನವಾದ ವಿಮಾನದಲ್ಲಿ ದೊರೆತ ಬ್ಲಾಕ್​ ಬಾಕ್ಸ್​ನಿಂದ ಸಂಗ್ರಹಿಸಲಾದ ಡೇಟಾ ಪ್ರಕಾರ, ಕಾಕ್​ಪಿಟ್​ನಲ್ಲಿ ಒಬ್ಬರು ಉದ್ದೇಶಪೂರ್ವಕವಾಗಿಯೇ ವಿಮಾನವನ್ನು ಪತನ ಮಾಡಿರುವುದು ಬೆಳಕಿಗೆ ಬಂದಿದೆ.

    ಚೀನಾ ಈಸ್ಟರ್ನ್​ ಏರ್​ಲೈನ್ಸ್​ಗೆ ಸೇರಿದ ಬೋಯಿಂಗ್​ ಜೆಟ್​ 737-800 ವಿಮಾನವು ಗುವಾಂಗ್ಸಿ ಪ್ರದೇಶದಲ್ಲಿ ಮಾರ್ಚ್​ 21ರಂದು ಪತನವಾಗಿತ್ತು. ವಿಮಾನವು 132 ಪ್ಯಾಸೇಂಜರ್​ನ ಹೊತ್ತುಕೊಂಡು ಕುನ್ಮಿಂಗ್‌ನಿಂದ ಗುವಾಂಗ್‌ಝೌಗೆ ತೆರಳುತ್ತಿತ್ತು. ಫ್ಲೈಟ್​ರಾಡರ್​ ಡೇಟಾ ಪ್ರಕಾರ ಪತನಗೊಂಡ ಸಮಯದಲ್ಲಿ ವಿಮಾನವು ಗಂಟೆಗೆ 700 ಕಿ.ಮೀ ವೇಗದಲ್ಲಿ 29 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು.

    ಮಾರ್ಚ್​ 21ರಂದು ಮಧ್ಯಾಹ್ನ 1.11ಕ್ಕೆ ಟೇಕಾಫ್​ ಆದ ವಿಮಾನ ಮಧ್ಯಾಹ್ನ 3.05ರ ಸುಮಾರಿಗೆ ಮಾರ್ಗಮಧ್ಯೆ ಗುವಾಂಗ್ಸಿ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಕೆಳಮುಖವಾಗಿ ಕುಸಿದು ಪತನಗೊಂಡಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಸಿಕ್ಕಾಪಟ್ಟೆ ವೈರಲ್​ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಯಾಯಿತು. 28 ವರ್ಷದಲ್ಲಿ ಚೀನಾದಲ್ಲಿ ನಡೆದ ಅತ್ಯಂತ ಅಪಾಯಕಾರಿ ವಿಮಾನ ಪತನ ಇದಾಗಿದೆ.

    ಘಟನೆ ನಡೆದ ಎರಡು ತಿಂಗಳ ಬಳಿಕ ವಿಮಾನದಲ್ಲಿ ದೊರೆತ ಬ್ಲಾಕ್​ಬಾಕ್ಸ್​ ಡೇಟಾವನ್ನು ಅಮೆರಿಕ ಅಧಿಕಾರಿಗಳು ವಿಶ್ಲೇಷಣೆ ಮಾಡಿದ್ದು, ಕಾಕ್​ಪಿಟ್​ನಿಂದ ಉದ್ದೇಶಪೂರ್ವಕವಾಗಿಯೇ ವಿಮಾನವನ್ನು ಪತನ ಮಾಡಲಾಗಿದೆ ಎಂದು ಹೇಳಿದ್ದಾರೆ. ವಿಮಾನ ದಿಢೀರನೇ ಕುಸಿಯುವ ಸಮಯದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರರ್​ಗಳು ಮತ್ತು ಹತ್ತಿರದ ವಿಮಾನಗಳಿಂದ ಪದೇ ಪದೇ ಕರೆ ಮಾಡಿದರೂ ಪೈಲಟ್‌ಗಳು ಸ್ಪಂದಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಯುಎಸ್​ನ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ಅಧ್ಯಕ್ಷೆ, ಜೆನ್ನಿಫರ್ ಹೋಮೆಂಡಿ ಮಾತನಾಡಿ, ನಮ್ಮ ಮಂಡಳಿಯ ತನಿಖಾಧಿಕಾರಿಗಳು ಮತ್ತು ಬೋಯಿಂಗ್ ಸಂಸ್ಥೆ, ಚೀನಾದ ವಿಮಾನ ತನಿಖೆಗೆ ಸಹಾಯ ಮಾಡಲು ಚೀನಾಕ್ಕೆ ಪ್ರಯಾಣಿಸಿದ್ದರು. ಈ ವೇಳೆ ಯಾವುದೇ ತುರ್ತು ಕ್ರಮದ ಅಗತ್ಯವಿರುವ ಯಾವುದೇ ಸಮಸ್ಯೆಗಳು ವಿಮಾನದಲ್ಲಿ ಇರಲಿಲ್ಲ ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ.

    ಅಪಘಾತದ ತನಿಖೆಗೆ ತಾನು ಜವಾಬ್ದಾರನಲ್ಲ ಎಂದು ಚೀನಾದ ಈಸ್ಟರ್ನ್​ ಏರ್‌ಲೈನ್ ಈಗಾಗಲೇ ಹೇಳಿಕೊಂಡಿದೆ ಮತ್ತು ಏಪ್ರಿಲ್ 20ರಂದು ಬಿಡುಗಡೆಯಾದ ತನ್ನ ಪ್ರಾಥಮಿಕ ವರದಿಯಲ್ಲಿ ಚೀನಾ ಸರ್ಕಾರದ ಸಾರಾಂಶವನ್ನು ವರದಿಯಲ್ಲಿ ಉಲ್ಲೇಖಿಸಿದೆ. ಹಾನಿಗೊಳಗಾದ ಬ್ಲಾಕ್​ಬಾಕ್ಸ್ ಡೇಟಾದ ಮರುಸ್ಥಾಪನೆ ಮತ್ತು ವಿಶ್ಲೇಷಣೆ ಇನ್ನೂ ಪ್ರಗತಿಯಲ್ಲಿದೆ ಎಂದು ವರದಿಯಲ್ಲಿ ತಿಳಿಸಿದೆ.

    ಚೀನಾ ಈಸ್ಟರ್ನ್ ಪ್ರಕಾರ, ಪೈಲಟ್ ಮತ್ತು ಸಹ-ಪೈಲಟ್ ಇಬ್ಬರೂ ಉತ್ತಮ ಆರೋಗ್ಯ ಹೊಂದಿದ್ದರು ಮತ್ತು ಯಾವುದೇ ಹಣಕಾಸಿನ ಅಥವಾ ಕೌಟುಂಬಿಕ ಸಮಸ್ಯೆಗಳಿರಲಿಲ್ಲ. ವಿಮಾನದಿಂದ ಯಾವುದೇ ತುರ್ತು ಸಂಕೇತವನ್ನು ಕಳುಹಿಸಲಾಗಿಲ್ಲ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ, ಕಾಕ್‌ಪಿಟ್ ಭದ್ರತೆಯನ್ನು ಉಲ್ಲಂಘಿಸಿರುವ ಸಾಧ್ಯತೆಯಿಲ್ಲ ಎಂದು ಚೀನಾ ಈಸ್ಟರ್ನ್​ ಹೇಳಿದೆ. ಆದರೆ, ಇದೀಗ ಅಮೆರಿಕ ಬಿಡಗಡೆ ಮಾಡಿರುವ ವರದಿ ಇದಕ್ಕೆ ತದ್ವಿರುದ್ಧವಾಗಿದೆ. ಉದ್ದೇಶಪೂರ್ವಕವಾಗಿಯೇ ವಿಮಾನ ಪತನ ಮಾಡಲಾಗಿದೆ ಎನ್ನಲಾಗುತ್ತಿದೆ. (ಏಜೆನ್ಸೀಸ್​)

    ದಕ್ಷಿಣ ಚೀನಾದಲ್ಲಿ ವಿಮಾನ ಪತನ: 132 ಪ್ರಯಾಣಿಕರ ದುರಂತ ಸಾವು, ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts