More

    ನಾಯಿ ಹುಡುಕುವುದು ಕಷ್ಟವೆಂದ ಪೊಲೀಸರಿಗೆ ಶಾಕ್​ ಕೊಟ್ಟ ಇಂಜಿನಿಯರ್​ ಬ್ರದರ್ಸ್: ಹತ್ತೇ ದಿನದಲ್ಲಿ ಶ್ವಾನ ಪತ್ತೆ​!

    ತಿರುವನಂತಪುರಂ: ಕಳೆದ ಹೋದ ನಾಯಿಯನ್ನು ಹುಡುಕಿಕೊಡುವ ಭರವಸೆಯನ್ನು ಪೊಲೀಸರು ಕೈಚೆಲ್ಲಿದಾಗ ಇಬ್ಬರು ಇಂಜಿನಿಯರ್ಸ್​ ಸಹೋದರರು ಸೇರಿಕೊಂಡು ತಮ್ಮ ಬುದ್ಧಿವಂತಿಕೆ ಬಳಸಿ ಸಿಸಿಟಿವಿ ದೃಶ್ಯಾವಳಿಯ ನೆರವಿನಿಂದ ಕೇವಲ 10 ದಿನದಲ್ಲಿ ನಾಯಿಯನ್ನು ಪತ್ತೆಹಚ್ಚಿರುವ ಘಟನೆ ಕೇರಳದ ವಜತಕಾಡುವಿನಲ್ಲಿ ನಡೆದಿದೆ.

    ಸತೀಶ್​ ಥಂಪಿ ಅವರ ಲಾಸ ಅಪ್ಸೋ ತಳಿಯ ಬ್ರೂನೋ ಹೆಸರಿನ ನಾಯಿ ಇದೇ ಜನವರಿ 16ರಂದು ನಾಪತ್ತೆಯಾಗಿತ್ತು. ಇದರಿಂದ ನಿರಾಸೆಗೆ ಒಳಗಾದ ಸತೀಶ್​ ಕುಟುಂಬ ಕೂಡಲೇ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದರು. ಆದರೆ, ಕೋವಿಡ್​ ಪರಿಸ್ಥಿತಿಯಲ್ಲಿ ನಾಯಿ ಹುಡುಕುವುದು ಕಷ್ಟ ಅಂತಾ ಪೊಲೀಸರು ಹೇಳಿದ್ದು, ಸತೀಶ್​ ಕುಟುಂಬವನ್ನು ಮತ್ತಷ್ಟು ದುಃಖಕ್ಕೆ ದೂಡಿತು.

    ಆದರೆ, ಸತೀಶ್​ ಥಂಪಿ ಅವರ ಇಬ್ಬರು ಮಕ್ಕಳಾದ ನವೀನ್​ ಥಂಪಿ ಮತ್ತು ಕಿರಣ್​ ಥಂಪಿ ಇಂಜಿನಿಯರ್​ ವಿದ್ಯಾರ್ಥಿಗಳಾಗಿದ್ದು, ಪೊಲೀಸರ ಸಹಾಯವಿಲ್ಲದೇ ನಾಯಿಯನ್ನು ಪತ್ತೆಹಚ್ಚಲು ನಿರ್ಧರಿಸುತ್ತಾರೆ. ನಾಯಿ ನಾಪತ್ತೆಯಾದ ದಿನ ಇಬ್ಬರು ಬೈಕ್ ಸವಾರರು ಜಗತಿ ಪ್ರದೇಶಕ್ಕೆ ಇದೇ ರೀತಿಯ ನಾಯಿಯೊಂದಿಗೆ ಹೋಗಿದ್ದರು ಎಂಬ ಮಾಹಿತಿ ಸಿಗುತ್ತದೆ. ಸುಮಾರು 3 ಕಿಮೀ ವ್ಯಾಪ್ತಿಯಲ್ಲಿ ಸಾಕಷ್ಟು ಹುಡುಕಾಟ ನಡೆಸಿದ ಬಳಿಕ ನಾಯಿಯ ನಾಪತ್ತೆ ಪೋಸ್ಟರ್​ ಅನ್ನು ಎಲ್ಲ ಕಡೆ ಅಂಟಿಸುತ್ತಾರೆ. ಸುಮಾರು 5 ದಿನಗಳವರೆಗೆ ಜಗತಿ ಏರಿಯಾವನ್ನು ಹುಡುಕಾಡಿದರೂ ನಾಯಿ ಮಾತ್ರ ಸಿಗುವುದಿಲ್ಲ.

    ಇದಾದ ನಂತರ ಇಡಪ್ಪಜ್ಜಂಜಿಯ ಪೆಟ್ ಶಾಪ್‌ನಲ್ಲಿ ಇಬ್ಬರು ಬೈಕ್‌ನಲ್ಲಿ ನಾಯಿಯೊಂದಿಗೆ ಮಾರುತಂಕುಝಿ ಕಡೆಗೆ ಹೋಗುತ್ತಿರುವ ಸಿಸಿಟಿವಿ ದೃಶ್ಯಗಳು ಸಹೋದರರಿಗೆ ಸಿಗುತ್ತದೆ. ಬಳಿಕ ಅಕ್ಕಪಕ್ಕದ ಮನೆಗಳು ಮತ್ತು ಅಂಗಡಿಗಳಿಂದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ತನಿಖೆ ಮುಂದುವರಿಸುತ್ತಾರೆ. ಆರಂಭದಲ್ಲಿ ಕೆಲ ದೃಶ್ಯಾವಳಿಗಳನ್ನು ಪರಿಶೀಲಿಸಲು ಆ ಪ್ರದೇಶ ಮನೆಯವರು ಆಕ್ಷೇಪ ವ್ಯಕ್ತಪಡಿಸಿದ್ದರೂ, ವಿಷಯ ತಿಳಿದಾಗ ಹೆಚ್ಚಿನವರು ಸಹಕರಿಸಿದರು ಎಂದು ನವೀನ್ ಮತ್ತು ಕಿರಣ್ ಹೇಳಿದ್ದಾರೆ.

    ಜನವರಿ 24ರಂದು ಮಾರುತಂಕುಝಿ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಗಳಲ್ಲಿ ಬೈಕ್​ ನಂಬರ್ ಪ್ಲೇಟ್‌ ಸುಳಿವು ಸಿಗುತ್ತದೆ. ಇದರೊಂದಿಗೆ ಈ ಸಂಖ್ಯೆಯ ವಾಹನಗಳ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ ಮತ್ತು ಬೈಕ್ ಹಿಂದೆ ಕುಳಿತಿದ್ದ ವ್ಯಕ್ತಿ ಧರಿಸಿದ್ದ ಸ್ಪೋರ್ಟ್ಸ್ ಜೆರ್ಸಿಯ ವಿವರವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಜನವರಿ 26 ರಂದು ಮಧ್ಯಾಹ್ನ, ನೆಟ್ಟಯಂನಲ್ಲಿನ ಅಂಗಡಿಯೊಂದರ ಸಿಸಿಟಿವಿ ದೃಶ್ಯಗಳಿಂದ ಅವರು ಹೆಲ್ಮೆಟ್ ಇಲ್ಲದೆ ಇರುವ ದೃಶ್ಯಗಳನ್ನು ಪಡೆಯುತ್ತಾರೆ. ಅವರ ಮುಖಗಳು ಸ್ಪಷ್ಟವಾದ ತಕ್ಷಣ, ಅವರ ವಿವರಗಳು ಮತ್ತು ಚಿತ್ರಗಳನ್ನು ನೆಟ್ಟಯಂನಲ್ಲಿರುವ ಅಂಗಡಿಗಳು ಮತ್ತು ನಿವಾಸಿಗಳ ಸಂಘಗಳಲ್ಲಿ ಪೋಸ್ಟ್ ಮಾಡುತ್ತಾರೆ.

    ಇದರ ಬೆನ್ನಲ್ಲೇ ನಾಯಿಯನ್ನು ಕದ್ದವರು ನವೀನ್ ಮತ್ತು ಕಿರಣ್ ಗೆ ಫೋನ್ ಮಾಡಿ, ತಮ್ಮ ವಿರುದ್ಧ ಕ್ರಮ ಕೈಗೊಳ್ಳದಂತೆ ಮನವಿ ಮಾಡುತ್ತಾರೆ. ನಾಯಿ ಸುರಕ್ಷಿತವಾಗಿದೆ. ನಿಮ್ಮ ಬ್ರೂನೋನನ್ನು ಹತ್ತು ದಿನಗಳ ಕಾಲ ಚೆನ್ನಾಗಿ ನೋಡಿಕೊಳ್ಳಲಾಗಿದೆ ಎಂದು ತಿಳಿಸಿದ್ದರಿಂದ ಮಾಲೀಕರು ಅವರ ವಿರುದ್ಧ ದೂರು ದಾಖಲಿಸುವುದಿಲ್ಲ.

    ಗುರುವಾರ ನಾಯಿಯ ಹತ್ತನೇ ಹುಟ್ಟುಹಬ್ಬವೂ ಆಗಿತ್ತು. ಹಲವು ವರ್ಷಗಳಿಂದ ಕುಟುಂಬದ ಸದಸ್ಯರಾಗಿದ್ದ ಬ್ರೂನೋ ಮರಳಿ ಬಂದಿದ್ದನ್ನು ಕುಟುಂಬಸ್ಥರು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಪೊಲೀಸರು ಮಾಡದಿದ್ದನ್ನು ಇಂಜಿನಿಯರ್ಸ್​ ಬ್ರದರ್ಸ್​ ಸಾಧಿಸಿದ್ದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. (ಏಜೆನ್ಸೀಸ್​)

    ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಎಂ. ನಾರಾಯಣ ಗೌಡ ನಿಧನ

    ಚಳಿಯ ನಡುವೆಯೇ ಮತ್ತೆ ಕೆಲ ದಿನ ಮಳೆಯ ಕಣ್ಣುಮುಚ್ಚಾಲೆ: ಆರೋಗ್ಯದಲ್ಲಿ ಏರುಪೇರು- ತಜ್ಞರ ಎಚ್ಚರಿಕೆ

    ಬದುಕಿರುವ ರೈತನಿಗೆ ಮರಣ ಪ್ರಮಾಣ‌ ಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಎಫ್​ಐಆರ್ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts